ನೀಲಮಣಿ ರಾಜ್ಯದ ಮೊದಲ ಮಹಿಳಾ ಡಿಜಿಪಿ

Kannada News

31-10-2017

ಬೆಂಗಳೂರು: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಹಿರಿಯ ಅಧಿಕಾರಿ ನೀಲಮಣಿ ಎನ್.ರಾಜು ಅವರು ನೇಮಕಗೊಂಡಿದ್ದಾರೆ. ಆ ಮೂಲಕ ಇದೇ ಮೊಟ್ಟ ಮೊದಲ ಬಾರಿ ಕರ್ನಾಟಕ ಮಹಿಳಾ ಪೊಲೀಸ್ ನಿರ್ದೇಶಕರನ್ನು ಪಡೆದಂತಾಗಿದ್ದು, ನೇಮಕದ ಬೆನ್ನಲ್ಲೇ ಮಂಗಳವಾರ ಸಂಜೆ ಅವರು ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.

ಇದುವರೆಗೂ ಪೊಲೀಸ್ ಮಹಾನಿರ್ದೇಶಕರಾಗಿದ್ದ ರೂಪ್ ಕುಮಾರ್ ದತ್ತ ಅವರ ಜಾಗಕ್ಕೆ, ನೀಲಮಣಿ.ಎನ್.ರಾಜು ಅವರು ನೇಮಕಗೊಂಡಿದ್ದು, ಆ ಮೂಲಕ ಅಂತಿಮ ಹಂತದವರೆಗೂ ರೇಸಿನಲ್ಲಿದ್ದ ಹಿರಿಯ ಅಧಿಕಾರಿ ಕಿಶೋರ್ ಚಂದ್ರ ವಸತಿ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ.

ಕೇಂದ್ರ ಸೇವೆಗೆ ತೆರಳಲು ನೀಲಮಣಿ.ಎನ್.ರಾಜು ಅವರು ಒಲವು ತೋರಿದ್ದು, ಈ ಸಂಬಂಧ ರಾಜ್ಯ ಸರ್ಕಾರದ ಪ್ರಮುಖರಿಗೆ ಪತ್ರ ಬರೆದಿದ್ದಾರೆ ಎಂಬ ಮಾತು ಕೇಳಿ ಬಂದಿತ್ತಲ್ಲದೇ, ಇದರ ಪರಿಣಾಮವಾಗಿ ನೂತನ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಹಿರಿಯ ಅಧಿಕಾರಿಗಳಾದ ಕಿಶೋರ್ ಚಂದ್ರ ಹಾಗೂ ಎಂ.ಎನ್.ರೆಡ್ಡಿ ಅವರ ಹೆಸರುಗಳು ಕೇಳಿ ಬಂದಿದ್ದವು.

ಆದರೆ ಇವರಿಬ್ಬರ ಪೈಕಿ ಕಿಶೋರ್ ಚಂದ್ರ ಅವರೇ ಸೇವಾ ಹಿರಿತನದಲ್ಲಿ ಮುಂದಿದ್ದುದರಿಂದ ಅವರನ್ನೇ ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲು ಸರ್ಕಾರ ಯೋಚಿಸಿತ್ತು. ಆದರೆ ಇಂದು ನಡೆದ ಹಲವು ವಿದ್ಯಮಾನಗಳ ಹಿನ್ನೆಲೆಯಲ್ಲಿ ನೀಲಮಣಿ.ಎನ್.ರಾಜು ಅವರು ನೂತನ ಪೊಲೀಸ್ ಮಹಾನಿರ್ದೇಶಕರಾಗಲು ಒಲವು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸೇವಾ ಹಿರಿತನವನ್ನು ಉಲ್ಲಂಘಿಸಲು ಬಯಸದ ಸರ್ಕಾರ ಅವರನ್ನೇ ನೇಮಕ ಮಾಡಲು ತೀರ್ಮಾನಿಸಿತು ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಕಮಲ್ ಪಂಥ್ ಅವರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ನೇಮಕಗೊಂಡಿದ್ದು ಇದೇ ಕಾಲಕ್ಕೆ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಮಹಿಳಾ ಡಿಜಿಪಿ ಕಮಲ್ ಪಂಥ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ