ಬೀಡಿ-ಸಿಗರೇಟು ಮಾರಾಟಗಾರರ ಪ್ರತಿಭಟನೆ

Kannada News

31-10-2017

ಬೆಂಗಳೂರು: ಕಾನೂನಾತ್ಮಕವಾಗಿ ಉತ್ಪನ್ನಗಳ ಮಾರಾಟದ ಮೇಲೆ ನಿಷೇಧ ಹೇರುವ ಪ್ರಸ್ತಾವನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಕೂಡಲೇ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘದ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ನಗರದ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೂ ಬೃಹತ್ ಮೆರವಣಿಗೆ ನಡೆಸಿದ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಉತ್ಪನಗಳ ಮಾರಾಟದ ಮೇಲೆ ನಿಷೇಧ ಹೇರುವ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎನ್.ಮುರಳಿಕೃಷ್ಣ, ಈ ಹೊಸ ಕಾನೂನಿನಿಂದ ನಮ್ಮನ್ನು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ರಕ್ಷಿಸಲು ಮಧ್ಯ ಪ್ರವೇಶ ಮಾಡುವಂತೆ ನಾವು ಪ್ರಧಾನ ಮಂತ್ರಿಯನ್ನು ಒತ್ತಾಯಿಸುತ್ತಿದ್ದೇವೆ. ನಮ್ಮ ಅಂಗಡಿಗಳಿಂದ ಮಾರಾಟ ಮಾಡುತ್ತಿರುವ ಯಾವುದೇ ಉತ್ಪನ್ನವನ್ನು ಮಾರಾಟ ಮಾಡಬಾರದೆಂಬ ಸಲಹೆಗಳು ಬಂದರೆ ಅವುಗಳನ್ನು ಮಾನ್ಯ ಮಾಡಬಾರದೆಂದು ಮನವಿ ಮಾಡಿದರು.

ಕರ್ನಾಟಕದಲ್ಲಿ 3 ಲಕ್ಷಕ್ಕೂ ಅಧಿಕ ವರ್ತಕರು, ಚಿಲ್ಲರೆ ವ್ಯಾಪಾರಿಗಳು, ಪಾನ್ ಬೀಡಾ ಅಂಗಡಿಗಳು, ತಂಬಾಕು ಮಾರಾಟಗಾರರ ಪರ ಧ್ವನಿ ಎತ್ತಿದ್ದಾರೆ. ಭಾರತದ ರೀಟೇಲರ್ ಗಳನ್ನು ನಾವು ಪ್ರತಿನಿಧಿಸುತ್ತಿದ್ದು,  ತಂಬಾಕು ರಹಿತವಾದ ಉತ್ಪನ್ನಗಳ ಮಾರಾಟದ ಮೇಲೆ ನಮ್ಮ ಜೀವನ ಅವಲಂಬಿತವಾಗಿದೆ ಎಂದರು.

ಇವರೆಲ್ಲರೂ ಸಮಾಜದ ಕೆಳವರ್ಗದಿಂದ ಬಂದವರು ಮತ್ತು ನಮ್ಮಲ್ಲಿ ಬಹುತೇಕ ಮಂದಿ ಸಣ್ಣ ರೀಟೇಲ್ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬಗಳಿಂದ ಬಂದಿದ್ದಾರೆಂದು ನುಡಿದರು. ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಒಂದು ವೇಳೆ ಈ ಕಾನೂನು ಜಾರಿಗೆ ಬಂದರೆ ಲಕ್ಷಾಂತರ ಕುಟುಂಬಗಳ ಮೇಲೆ ಗಂಭೀರವಾದ ಪರಿಣಾಮ ಸಾಧ್ಯತೆ ಇದೆ. ಹೀಗಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು. ಇಲ್ಲದಿದ್ದರೆ, ನಮ್ಮೆಲ್ಲರಿಗೂ ಸರ್ಕಾರಿ ಉದ್ಯೋಗ ನೀಡುವಂತೆ ಸೂಚನೆ ನೀಡಬೇಕು ಎಂದು ಮುರಳಿಕಷ್ಣ ಆಗ್ರಹಿಸಿದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ