ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ !

Kannada News

31-10-2017

ಬೆಂಗಳೂರು: ರಸ್ತೆ ಬದಿಯಲ್ಲಿ ನಿಲ್ಲಿಸುವ ಕ್ಯಾಬ್‍ಗಳಲ್ಲಿ ಸುಲಿಗೆ ಮಾಡುತ್ತಿದ್ದ ದುಷ್ಕರ್ಮಿಗಳ ತಂಡವೊಂದು ಹೊಯ್ಸಳ ಪೊಲೀಸರ ಮೇಲೆ ದಾಳಿ ಮಾಡಿರುವ ಘಟನೆ ನಿನ್ನೆ ಮಧ್ಯರಾತ್ರಿ ಜಾಲಹಳ್ಳಿಯ ಬಿಇಎಲ್ ವೃತ್ತದ ಬಳಿ ನಡೆದಿದೆ.

ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡಿರುವ ಗೃಹರಕ್ಷಕದಳದ ಹನುಮಂತರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಹೊಯ್ಸಳದಲ್ಲಿದ್ದ ಎಎಸ್‍ಐ ಮೋಪುರಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ರಾತೋರ್ ತಿಳಿಸಿದ್ದಾರೆ.

ಬಿಇಎಲ್ ಸರ್ಕಲ್ ಬಳಿಗೆ ರಾತ್ರಿ 2.30ರ ವೇಳೆ ಎರಡು ಡಿಯೋ ಸ್ಕೂಟರ್‍ ಗಳಲ್ಲಿ ಬಂದ ನಾಲ್ವರು ಮುಸುಕುಧಾರಿ ಸುಲಿಗೆಕೋರರು, ರಸ್ತೆ ಬದಿ ನಿಲ್ಲಿಸಿದ್ದ ಕ್ಯಾಬ್ ಚಾಲಕರಿಗೆ ಲಾಂಗ್ ಮಚ್ಚುಗಳನ್ನು ತೋರಿಸಿ ಹಣ, ಪರ್ಸ್,ಮೊಬೈಲ್ ಕಸಿದುಕೊಂಡು ಬಿಇಎಲ್ ಸರ್ಕಲ್‍ನಿಂದ ಗಂಗಮ್ಮನಗುಡಿ ಸರ್ಕಲ್ ಕಡೆಗೆ ಪರಾರಿಯಾಗಿದ್ದಾರೆ.

ಹಣ ಕಳೆದುಕೊಂಡ ಕ್ಯಾಬ್ ಚಾಲಕರೊಬ್ಬರು ಕೂಡಲೇ  ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದರು. ರಾತ್ರಿ ಗಸ್ತಿನಲ್ಲಿದ್ದ ಜಾಲಹಳ್ಳಿ ಪೊಲೀಸ್ ಹೊಯ್ಸಳ ಸಿಬ್ಬಂದಿ ದರೋಡೆಕೋರರ ಬೆನ್ನತ್ತಿ ಅಡ್ಡಗಟ್ಟಿ ಸ್ಕೂಟರ್‍ ಗಳನ್ನು ನಿಲ್ಲಿಸಿ ಹೊಯ್ಸಳ ಸಿಬ್ಬಂದಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ತಮ್ಮ ಬಳಿಯಿದ್ದ ಲಾಂಗ್ ಮಚ್ಚಿನಿಂದ ದರೋಡೆಕೋರರು ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಹಲ್ಲೆಯಿಂದ ಹನುಮಂತರಾಜು ತಲೆಗೆ ಗಾಯವಾಗಿ ಕುಸಿದು ಬಿದ್ದಿದ್ದು ಹಿಡಿಯಲು ಹೋದ ಎಎಸ್‍ಐ ಮೋಪುರಿ ಕಡೆಗೆ ಲಾಂಗ್ ಬೀಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಹೆಚ್ಚಿನ ಪೊಲೀಸ್ ಸಿಬ್ಬಂದಿ ಗಾಯಗೊಂಡ ಹನುಮಂತರಾಜು ಅವರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಬಂಧನಕ್ಕೆ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಹೋಮ್ ಗಾರ್ಡ್ ಹೊಯ್ಸಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ