‘ಸತ್ಯವೇ ದೇವರು, ಸತ್ಯವೇ ಸ್ವರ್ಗ, ಸುಳ್ಳೇ ನರಕ’

Kannada News

30-10-2017

ಚಿಕ್ಕಬಳ್ಳಾಪುರ: ಮಾಡಬಾರದ್ದನ್ನೆಲ್ಲ ಮಾಡಿ ಗಂಧದ ಕಡ್ಡಿ ಹಚ್ಚಿದರೂ, ಆರತಿ ಬೆಳಗಿದರೂ, ತೆಂಗಿನ ಕಾಯಿ ಒಡೆದರೂ ದೇವರು ಮೆಚ್ಚುವುದಿಲ್ಲ. ಶುದ್ಧವಾದ ಮನಸ್ಸಿನಿಂದ ಯಾರು ಪೂಜೆ ಮಾಡುವರೋ ಅವರನ್ನು ಮಾತ್ರ ದೇವರು ಮೆಚ್ಚುತ್ತಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಆತ್ಮ ಸಾಕ್ಷಿಯೇ ದೇವರು. ಆ ಆತ್ಮಸಾಕ್ಷಿಗೆ ದ್ರೋಹ ಮಾಡದವರೇ ನಿಜವಾದ ಮನುಷ್ಯರು. ಅದನ್ನೇ ದೇವರು ಸಹ ಮೆಚ್ಚುವುದು ಎಂದು ಮುಖ್ಯಮಂತ್ರಿಯವರು ಅಭಿಪ್ರಾಯಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬೀರೇಶ್ವರ ಸ್ವಾಮಿ ದೇವಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಯವರು, ಇತ್ತೀಚೆಗೆ ನಾನು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಹೋಗಿದ್ದೆ. ಅಲ್ಲಿಯ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರು ದೇವಾಲಯಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು ಹೋಗುವಂತೆ ತಿಳಿಸಿದರು. ಬೆಂಗಳೂರಿಗೆ ತುರ್ತಾಗಿ ತೆರಳಬೇಕಿದೆ ಎಂದಾಗ ಹೊರಗಡೆಯಿಂದಲೇ ನಮಸ್ಕಾರ ಮಾಡಿಕೊಂಡು ಹೋಗಿ ಎಂದರು.

ಅದಕ್ಕೂ ಮೊದಲು ಮಂಗಳೂರಿನಲ್ಲಿ ಮೀನು ತಿಂದಿದ್ದು ನಿಜ. ಆದರೆ, ಗರ್ಭಗುಡಿಗೆ ಹೋಗಲಿಲ್ಲ. ಹೊರಗಡೆಯಿಂದಲೇ ದೇವರ ದರ್ಶನ ಮಾಡಿಕೊಂಡು ಬಂದೆ. ಒಂದು ವೇಳೆ ಒಳಗೆ ಹೋಗಿ ದರ್ಶನ ಮಾಡಿದ್ದರೆ ದೇವರಿಗೆ ಅಪವಿತ್ರ ಆಗುತ್ತಿತ್ತೇ..? ಎಂದು ಪ್ರಶ್ನಿಸಿದರು.

ದೇವರ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ ಮತ್ತು ಕಲ್ಪನೆ ಇಲ್ಲದವರು ಮಾತ್ರ ಅಪವಿತ್ರದ ಮಾತುಗಳನ್ನಾಡಲು ಸಾಧ್ಯ. ಎಲ್ಲರಲ್ಲಿಯೂ ದೇವರು ಇದ್ದಾನೆ ಅಲ್ಲವೇ..? ಹಾಗಾದರೆ ಮಾಂಸ ತಿನ್ನುವವರು ಏನು ಮಾಡಬೇಕು. ಅವರು ಮಾಂಸ ತಿನ್ನುವುದನ್ನು ಬಿಡಬೇಕಾಗುತ್ತದೆ ಅಷ್ಟೇ ಎಂದು ಹೇಳಿದರು.  ಒಂದು ಬಾರಿ ಮಾಂಸ ಸೇವಿಸಿದರೆ ಅದು 48 ಗಂಟೆಗಳ ಕಾಲ ನಮ್ಮ ಶರೀರದಲ್ಲಿ ಇರುತ್ತದೆ. ಈವತ್ತು ತಿಂದವರು ನಾಳೆ ದೇವಾಲಯಕ್ಕೆ ಹೋಗುವಂತೆಯೇ ಇಲ್ಲವಲ್ಲ ಎಂದರು.

ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ, ನನ್ನ ಕಾಲೇ ಕಂಬ, ದೇಹವೇ ದೇಗುಲ, ನನ್ನ ಶಿರವೇ ಹೊನ್ನ ಕಳಸವಯ್ಯ ಕೂಡಲ ಸಂಗಮದೇವ ಎಂದು ಬಸವಣ್ಣನವರು 850 ವರ್ಷಗಳ ಹಿಂದೆ ಹೇಳಿದ್ದಾರೆ.

ಮನುಷ್ಯ ತನ್ನ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕಾದರೆ ಮೊದಲು ಮನುಷ್ಯನಾಗಿ ಬಾಳಬೇಕು. ಒಬ್ಬರು ಮತ್ತೊಬ್ಬರನ್ನು, ಮತ್ತೊಂದು ಧರ್ಮದವರನ್ನು ದ್ವೇಷ ಮಾಡುವವರು ಮನುಷ್ಯರೇ ಅಲ್ಲ. ಮನುಷ್ಯ, ಮನುಷ್ಯರ ನಡುವೆ ಯಾರು ಬೆಂಕಿ ಇಡುವರೋ ಅವರು ಮನುಷ್ಯರಾಗುವುದಿಲ್ಲ. ಅಂಥವರಿಂದ ದೇವಾಲಯ ಪವಿತ್ರ ಆಗಲು ಸಾಧ್ಯವಿಲ್ಲ. ಅಂಥವರನ್ನು ದೇವರೇ ದೂರ ಇಡುತ್ತಾನೆ.

ದೇವರ ಬಗ್ಗೆ ಸ್ಪಷ್ಟ ತಿಳಿವಳಿಕೆ ಮತ್ತು ಕಲ್ಪನೆ ಇದ್ದಾಗ ಮಾತ್ರ ಪೂಜೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ದೇವರು ಎಂದರೆ ಏನು..? ಸತ್ಯವೇ ದೇವರು, ಸತ್ಯವೇ ಸ್ವರ್ಗ, ಸುಳ್ಳೇ ನರಕ, ಇಷ್ಟು ತಿಳಿದುಕೊಂಡರೆ ಸಾಕು. ಅದನ್ನು ತಿಳಿಯದೇ ಜನರನ್ನು ತಪ್ಪು ದಾರಿಗೆ ಎಳೆಯುವವರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.

ದೇವರಿಗೆ ಬೇಕಾದ್ದು ಶುದ್ಧವಾದ ಮನಸ್ಸು. ಆ ಶುದ್ಧವಾದ ಮನಸ್ಸಿನಿಂದ ಯಾರು ಪೂಜೆ ಮಾಡುತ್ತಾರೆ. ಅವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ. ಆ ಜನರು ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ನಾವು ದೇವರಿಗೆ ಸಲ್ಲಿಸುವ ದೊಡ್ಡ ಪ್ರಾರ್ಥನೆ ಎಂದು ಮುಖ್ಯಮಂತ್ರಿಯವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ಗಂಧದ ಕಡ್ಡಿ ಆತ್ಮ ಸಾಕ್ಷಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ