ಮೋದಿ ವಿರುದ್ಧ ಸಿದ್ದು ಗರಂ !

Kannada News

30-10-2017

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೈಗೊಂಡಿರುವ ರೈಲ್ವೆ ಯೋಜನೆಗಳ ವಿಳಂಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಸರ್ಕಾರವನ್ನು ದೂರಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಇಲಾಖೆ ಯಾರ ಅಧೀನದಲ್ಲಿದೆ, ಹಣ ಖರ್ಚು ಮಾಡಬೇಕಾದವರು ಯಾರು.? ಎಂದು ಪ್ರಶ್ನಿಸಿದ್ದು, ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಉಚಿತವಾಗಿ ಜಾಗ ಮತ್ತು ವೆಚ್ಚದಲ್ಲಿ ಅರ್ಧ ಭರಿಸುತ್ತದೆ. ಈ ವ್ಯವಸ್ಥೆ ಯಾವ ರಾಜ್ಯದಲ್ಲೂ ಇಲ್ಲ ಎಂದರು.

ಉಚಿತವಾಗಿ ಜಾಗ ಮತ್ತು ವೆಚ್ಚದಲ್ಲಿ ಅರ್ಧ ಭರಿಸಿದರೂ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸದೆ ರೈಲ್ವೆ ಯೋಜನೆಗಳ ವಿಳಂಬಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಪ್ರಧಾನಿಯವರು ಹೇಳುವುದು ಸರಿಯಲ್ಲ. ಇದು ತನ್ನ ಹೆಗಲಿನ ಮೇಲಿನ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ರಾಜ್ಯದ ಹೆಗಲಿಗೆ ವರ್ಗಾಯಿಸುವ ಪ್ರಯತ್ನ ಎಂದು ಟೀಕಿಸಿದರು.

ಬೀದರ್-ಕಲಬುರಗಿ ರೈಲು ಮಾರ್ಗದ ಯೋಜನೆಗೂ ರಾಜ್ಯ ಸರ್ಕಾರ ಹಣ, ಜಾಗ ಕೊಟ್ಟಿದೆ. ಬೀದರ್ ನಿಂದ ಹುಮನಾಬಾದ್ ವರೆಗಿನ ಕಾಮಗಾರಿ ಮೂರೂವರೆ ವರ್ಷದ ಹಿಂದೆಯೇ ಮುಗಿದಿದೆ. ಉಳಿದ ಕಾಮಗಾರಿ ಮುಗಿಸಲು ಕೇಂದ್ರ ಸರ್ಕಾರಕ್ಕೆ ಇಷ್ಟು ವರ್ಷ ಬೇಕಾಯಿತೇ ಎಂದು ಸಿಎಂ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು, ಬಂದು ಹೋಗಿರುವುದರಿಂದ ರಾಜ್ಯದ ಜನರ ಮನಸ್ಥಿತಿ ಏನೂ ಬದಲಾಗಿಲ್ಲ. ಬದಲಾಗುವುದೂ ಇಲ್ಲ. ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಕರ್ನಾಟಕಕ್ಕೆ ಬಂದು ಹೋಗುವುದರಿಂದ ಏನೂ ಆಗದು. ಜನ ಬಿಜೆಪಿ ಕಡೆ ವಾಲುವಂತೆ ಮಾಡಲು ಅವರ ಬಳಿ ಮಂತ್ರ ದಂಡ ಏನಾದರೂ ಇದೆಯೇ ? ಎಂದು ಕೇಳಿದರು.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರನ ವಿರುದ್ಧ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರು ಕಣಕ್ಕಿಳಿಯಲಿದ್ದಾರೆ ಎಂಬ ಮಾಧ್ಯಮ ವರದಿ ಗಮನಿಸಿದ್ದೇನೆ. ವರುಣಾ ವಿಧಾನಸಭಾ ಕ್ಷೇತ್ರಕ್ಕೂ ಸಿಂಧ್ಯಾ ಅವರಿಗೂ ಎಲ್ಲಿಂದೆಲ್ಲಿಯ ಸಂಬಂಧ..? ಎಂದರು.

ಪರಿವರ್ತನಾ ಯಾತ್ರೆ ಸೇರಿದಂತೆ ಬಿಜೆಪಿಯವರು ಯಾವ ಯಾತ್ರೆ ಮಾಡಿದರೂ ಜನ ಬದಲಾಗುವುದಿಲ್ಲ. ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರ ಪರಿವರ್ತನೆ ಆಯಿತೇ ಹೊರತು ಏನೂ ಆಗಲಿಲ್ಲ. ಈಗ ಪರಿವರ್ತನೆ ಯಾತ್ರೆ ಹೊರಟಿದ್ದಾರೆ ಎಂದು ವ್ಯಂಗವಾಡಿದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ಇಂಧನ ಇಲಾಖೆಯಲ್ಲಿ ವಿದ್ಯುತ್ ಖರೀದಿ ಹಗರಣ ನಡೆದಿದೆ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಸದನದಲ್ಲಿ ವಿಷಯ ಪ್ರಸ್ತಾಪ ಮಾಡಿದರು. ಆಗ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚನೆಯಾಗಿದೆ. ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ, ಸದನದಲ್ಲಿ ವರದಿ ಮಂಡಿಸಿದ ಬಳಿಕವಷ್ಟೇ ತಿಳಿಯುತ್ತದೆ ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ