ಯಾರ ಮೇಲೆ ಗೂಬೆ ...!

Kannada News

01-04-2017 683

ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. ಮಾಧ್ಯಮಗಳು ತಮ್ಮ ಲಕ್ಷ್ಮಣ ರೇಖೆಯನ್ನು ಮೀರುತ್ತಿದೆ, ಅದರಲ್ಲೂ ಟಿಆರ್‍ಪಿ ಎಂಬ ಮಾಯಾಜಾಲದ ಬೆನ್ನು ಹತ್ತಿರುವ ದೃಶ್ಯಮಾಧ್ಯಮ ದಿಡೀರ್ ಜನಪ್ರಿಯತೆ ಗಳಿಸಿ ದುಡ್ಡು ಮಾಡುವ ಬಾರಿ ಆಕಾಂಕ್ಷೆಯೊಂದಿಗೆ ಮುನ್ನುಗ್ಗುತ್ತಿದ್ದು ಮಾಧ್ಯಮ ಕ್ಷೇತ್ರದ ಪ್ರಾವಿತ್ರ್ಯತೆಗೆ ಧಕ್ಕೆ ತಂದೊಡ್ಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಅತಿ ರಂಜನೀಯ ಸುದ್ದಿ ಮತ್ತು ಚಿತ್ರಣದ ಮೂಲಕ ಬಲು ಬೇಗ ಜನರನ್ನು ತಲುಪುತ್ತಿರುವ ದೃಶ್ಯಮಾಧ್ಯಮದ ವೇಗದ ಜೊತೆಗೆ ಪೈಪೋಟಿಗೆ ಇಳಿದಿರುವ ಮುದ್ರಣ ಮಾಧ್ಯಮ ಕೂಡಾ ಇದೀಗ ರಂಜನೀಯ ಸುದ್ದಿಯತ್ತ ಗಮನ ಹರಿಸುತ್ತಿವೆ. ಇದರಿಂದಾಗಿ ಸುದ್ದಿ ನೀಡುವ ಹೆಸರಲ್ಲಿ ವ್ಯಕ್ತಿತ್ವ ಹಾಳುಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲೂ ಏಕಕಾಲಕ್ಕೆ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಶಾಸಕರು ಪ್ರಸ್ತಾಪಿಸಿ ತಮಗಿಷ್ಟ ಬಂದ ಭಾಷೆಯನ್ನೂ ಬಳಸಿ ಮಾಧ್ಯಮಗಳ ಬಗೆಗೆ ತಮಗಿರುವ ಸಿಟ್ಟು ಮತ್ತು ಅಸಹನೆಯನ್ನು ಹೊರಹಾಕಿದರು. ಕೆಲವರಂತೂ ಮಾಧ್ಯಮಗಳ ತೇಜೋವಧೆಯಿಂದ ತಾವು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಬಂದು ತಲುಪಿದ್ದೆ ಎಂದು ಹೇಳಿದರೆ, ಮತ್ತೊಬ್ಬ ಶಾಸಕರು ಮಾಧ್ಯಮ ಪ್ರತಿನಿದಿಗಳ ಬಗ್ಗೆ ಸದನದಲ್ಲಿ ಅಶ್ಲೀಲ ಭಾಷೆ ಪ್ರಯೋಗಿಸಿ ತಮ್ಮ ಸಿಟ್ಟು ಹೊರಹಾಕಿದರೆ ಇಡೀ ಸದನ ಮೂಕ ಪ್ರೇಕ್ಷಕರಂತಿತ್ತು.
ವಿಧಾನ ಸಭೆಯಲ್ಲಿ ಶಾಸಕರಾದ ನರೇಂದ್ರ ಸ್ವಾಮಿ, ಸಾ.ರಾ. ಮಹೇಶ್, ಎಸ್. ಟಿ. ಸೋಮಶೇಖರ್, ಪಿ.ಎಂ. ಅಶೋಕ್, ರಾಜುಕಾಗೆ, ಬಿ.ಆರ್. ಪಾಟೀಲ್, ಸುರೇಶ್‍ಗೌಡ, ಶಿವರಾಜು ತಂಗಡಗಿ ಸೇರಿದಂತೆ ಪಕ್ಷ ಬೇಧ ಮರೆತು ಎಲ್ಲಾ ಶಾಸಕರು ಮಾಧ್ಯಮಗಳ ಮೇಲಿನ ಸಿಟ್ಟು ಹೊರಹಾಕಿದರೆ, ಮಾಧ್ಯಮಗಳ ಪರವಾಗಿ ಎದ್ದು ನಿಂತು ಮಾತನಾಡಲೆತ್ನಿಸಿದ ಏಕೈಕ ವ್ಯಕ್ತಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರನ್ನು ಎಲ್ಲರೂ ಸೇರಿ ಬಾಯಿ ಮುಚ್ಚಿಸಿದರು.
ಹೆದ್ದಾರಿಯ ಟೋಲ್‍ನಲ್ಲಿ ತಮ್ಮ ಕಾರು ಸರಾಗವಾಗಿ ಹೋಗಲು ಬಿಡಲಿಲ್ಲ ಎಂದು ಆಕ್ರೋಶಗೊಂಡ ಶಾಸಕರು ಟೋಲ್ ಪ್ಲಾಜಾದ ಮ್ಯಾನೇಜರ್‍ಗೆ ಕಪಾಳಮೋಕ್ಷ ಮಾಡುತ್ತಾರೆ. ಇದನ್ನು ಜನರಿಗೆ ತೋರಿಸಿದ ಟಿವಿ ಮಾಧ್ಯಮಗಳು ಅವರಿಗೆ ವೀರ ಸೇನಾನಿ ಭಗತ್‍ಸಿಂಗ್ ಅವರಂತೆ ಕೆಲಸ ಮಾಡಿದ್ದೀರಿ ಎಂಬ ಪ್ರಸಂಶೆ ಬೇಕಿತ್ತೇನೋ, ಆದರೆ ಮಾಧ್ಯಮಗಳು ಶಾಸಕರ ದರ್ಪ ಎಂದು ಹೇಳಿದ್ದು ಇವರಿಗೆ ಬೇಸರ ತಂದಿದೆ.
ಆರ್.ಟಿ.ಐ ಕಾರ್ಯಕರ್ತನ ಹತ್ಯೆಯಲ್ಲಿ ಶಾಸಕರ ಬೆಂಬಲಿಗರು ಶಾಮೀಲಾಗಿದ್ದು, ಅವರ ಬೆಂಬಲಕ್ಕೆ ನಿಂತಿರುವ ಶಾಸಕರ ಬಗ್ಗೆ ಸುದ್ದಿಮಾಡಿದ್ದು ಮತ್ತೊಬ್ಬ ಶಾಸಕರ ಕೋಪಕ್ಕೆ ಕಾರಣ. ವಿಧಾನಪರಿಷತ್ತಿನಲ್ಲೂ ಕೂಡಾ ಇದೇ ರೀತಿಯ ಅಭಿಪ್ರಾಯ. ಮೊದಲಿಗೆ ವಿಷಯ ಪ್ರಸ್ತಾಪಿಸಿದ ಶ್ರೀಮತಿ ತಾರಾ ಅನುರಾಧ ಟಿವಿ ಮಾಧ್ಯಮಗಳಲ್ಲಿ ಮೌಡ್ಯ ಬಿತ್ತುತ್ತಿದ್ದಾರೆ, ಎಲ್ಲಾ ಚಾನಲ್‍ಗಳಲ್ಲೂ ಸಂಖ್ಯಾ ಶಾಸ್ತ್ರಜ್ಞರು, ವಾಸ್ತು ಶಾಸ್ತ್ರಜ್ಞರು, ಜ್ಯೋತಿಷಿಗಳು ಕುಳಿತು ಮನಸ್ಸಿಗೆ ತೋಚಿದ್ದನ್ನು ಹೇಳುವ ಮೂಲಕ ಮೌಢ್ಯ ಬಿತ್ತುತ್ತಿದ್ದಾರೆ ಎಂದು ಹೇಳಿದರು. ಆದರೆ ವಿಧಾನಪರಿಷತ್ ಸದಸ್ಯರಾಗುವವರೆಗೆ ತಾರಾ ಆಗಿದ್ದ ಅವರು ಏಕಾಏಕಿ ತಾರಾ ಅನುರಾಧ ಆಗಿದ್ದರ ಬಗ್ಗೆ ಯಾರೂ ಪ್ರಶ್ನಿಸಲಿಲ್ಲ. ಅದು ಸಂಖ್ಯಾಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಅಥವಾ ವಾಸ್ತುಶಾಸ್ತ್ರದ ಪ್ರಭಾವವೇ ಎಂದು ಹೇಳಲಿಲ್ಲ.
ಇನ್ನು ಕೆಲವರಂತು ತಾವು ರಾಜಕಾರಣಿಯಾಗಿ ಚುನಾವಣೆಗೆ ಸ್ಪರ್ಧಿಸಿ ಪಡುತ್ತಿರುವ ಕಷ್ಟಗಳನ್ನು ಅವರದೇ ಶೈಲಿಯಲ್ಲಿ ಉಲ್ಲೇಖಿಸಿದರು. ಅಷ್ಟೇ ಅಲ್ಲಾ ತಮ್ಮ ಬಗ್ಗೆ ಮನ ಬಂದಂತೆ ಬರೆಯುವ ಮಾಧ್ಯಮ ಪ್ರತಿನಿಧಿಗಳು ಚುನಾವಣೆಗೆ ನಿಂತು ನೋಡಲಿ ಎಂದು ಬಹಿರಂಗ ಸವಾಲು ಹಾಕಿದರು. ಆದರೆ ಇಷ್ಟೊಂದು ಕಷ್ಟವಾಗಿರುವ ರಾಜಕಾರಣ ಮತ್ತು ಚುನಾವಣೆಗೆ ಸ್ಪರ್ಧಿಸುವಂತೆ ಅವರಿಗೆ ಯಾರು ಹೇಳಿದರೆಂದು ಶಾಸನ ಸಭೆಯಲ್ಲಿ ಯಾರೂ ಹೇಳಲಿಲ್ಲ. ಅಷ್ಟೇ ಅಲ್ಲಾ ಅವರನ್ನು ಈ ರೀತಿ ಕೇಳಲು ಯಾರಿಗೂ ಅವಕಾಶವೇ ಇರಲಿಲ್ಲ. ವಿಧಾನಸಭೆಯಂತೆ ವಿಧಾನಪರಿಷತ್ತಿನಲ್ಲೂ ಕೂಡ ಮಾಧ್ಯಮಗಳ ಪರವಾಗಿ ದ್ವನಿ ಎತ್ತಿದ ಏಕೈಕ ಶಾಸಕ ರಮೇಶ್ ಬಾಬು. ಆದರೆ ತಾವಿನ್ನು ಸದನಕ್ಕೆ ಹೊಸಬರು, ತಮಗೇನೂ ಗೊತ್ತಿಲ್ಲ ಎಂದು ಎಲ್ಲರೂ ಒಟ್ಟಾಗಿ ಅವರನ್ನು ಬಾಯಿಮುಚ್ಚಿಸಿದರು.
ನಿಜ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮೂರು ಅಂಗಗಳು ಪ್ರಮುಖ. ಈ ಅಂಗಗಳು ದಾರಿ ತಪ್ಪದಂತೆ ಎಚ್ಚರ ವಹಿಸಿ ಕಾವಲು ನಾಯಿಯಂತೆ ಕೆಲಸ ಮಾಡಿ ದಾರಿತಪ್ಪಿದಾಗ ಎಚ್ಚರಿಸುವ ಕೆಲಸ ಮಾಡುವ ಮತ್ತೊಂದು ಅಂಗವಿದೆ, ಅದು ನಾಲ್ಕನೇಯ ಅಂಗ ಮಾಧ್ಯಮ ಎಂದು ಗುರುತಿಸುತ್ತೇವೆ.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇವುಗಳ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿದೆ. ಇವುಗಳ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆಯೂ ಸ್ಪಷ್ಟವಾದ ಉಲ್ಲೇಖವಿದೆ. ಸಂವಿಧಾನದಲ್ಲಿ ಈ ಮೂರು ಅಂಗಗಳಿಗೂ ತಮ್ಮದೇ ಆದ ಅಧಿಕಾರ ವ್ಯಾಪ್ತಿಯಿದ್ದು, ಒಂದು ಮತ್ತೊಂದರ ಅಧಿಕಾರ ವ್ಯಾಪ್ತಿಯಲ್ಲಿ ನುಸುಳಲು ಸಾದ್ಯವೇ ಇಲ್ಲ, ಪ್ರಾಬಲ್ಯ ಸಾಧಿಸಲು ಕೂಡ ಅವಕಾಶವಿಲ್ಲ.
ಆದರೆ ಸಂವಿಧಾನದಲ್ಲಿ ಇಂತಹ ಯಾವುದೇ ಲಿಖಿತವಾದ ಸ್ಪಷ್ಟನೆ ಇಲ್ಲದೇ ಹೋದರೂ ನಾಲ್ಕನೆ ಅಂಗವೆಂದು ಪರಿಗಣಿಸಲ್ಪಟ್ಟಿರುವ ಮಾಧ್ಯಮಕ್ಕೂ ವಿಶೇಷವಾದ ಗೌರವವಿದೆ. ಆದರೆ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕಿರುವ ರಕ್ಷಣೆ ನಾಲ್ಕನೇ ಅಂಗ ಎಂದು ಗೌರವಿಸುವ ಮಾಧ್ಯಮಕ್ಕೆ ಇಲ್ಲವೇ ಇಲ್ಲ. ಜನ ಸಾಮಾನ್ಯರಿಗೆ ಅನ್ವಯವಾಗುವ ಎಲ್ಲಾ ನಿಯಮ, ನೀತಿ ಮತ್ತು ಕಟ್ಟುಪಾಡುಗಳು ಮಾಧ್ಯಮ ರಂಗಕ್ಕೆ ಅನ್ವಯವಾಗುತ್ತದೆ. ಆದರೆ ಕಾವಲು ನಾಯಿಯಂತೆ ಕೆಲಸ ಮಾಡುವ ಮಾಧ್ಯಮಕ್ಕೆ ವಿಶೇಷ ಗೌರವಾದರಗಳು ಲಭಿಸುತ್ತಿವೆ.
ಆದರೆ ಮೊನ್ನೆ ಶಾಸನ ಸಭೆಯಲ್ಲಿ ನಡೆದ ಚರ್ಚೆಯನ್ನು ಗಮನಿಸಿದಾಗ ಮಾಧ್ಯಮ ಇಂತಹ ಪ್ರೀತಿ ಗೌರವಾಧಾರಗಳಿಗೆ ಎಷ್ಟರ ಮಟ್ಟಿಗೆ ಪಾತ್ರವಾಗುತ್ತದೆ ಎಂಬ ಪ್ರಶ್ನೆ ಹುಟ್ಟು ಹಾಕುತ್ತಿದೆ. ಯಾಕೆಂದರೆ ಕೆಲವು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಈ ಕ್ಷೇತ್ರವನ್ನು ಸುಲಭವಾಗಿ ಹಣ ಮಾಡುವ ಮಾರ್ಗ ಎಂದೇ ಪರಿಗಣಿಸಿದೆ. ಮಾಧ್ಯಮ ಕ್ಷೇತ್ರಕ್ಕಿರುವ ಘನತೆ-ಗೌರವಗಳನ್ನು ಬದಿಗೊತ್ತಿ ದುಡ್ಡು ಮಾಡುವುದಷ್ಟೇ ಕಾಯಕ ಎಂದು ಭಾವಿಸಿ ಅದರ ಬೆನ್ನು ಹಿಡಿದಿರುವ ಪರಿಣಾಮ ಇಂತಹ ಟೀಕೆಗಳು ಸಾಮಾನ್ಯವಾಗಿವೆ.
ಮುದ್ರಣ ಮಾಧ್ಯಮವಿರಲಿ, ದೃಶ್ಯ ಮಾಧ್ಯಮವಿರಲಿ ಇಂತವರು ಎಲ್ಲಾ ಕಡೆ ಸಿಗುತ್ತಾರೆ, ಕೆಲವು ಅಧಿಕಾರಸ್ಥ ರಾಜಕಾರಣಿಗಳಂತೂ ಮಾಧ್ಯಮ ರಂಗವನ್ನು ಗಂಭೀರವಾಗಿ ಪರಿಗಣಿಸಿ ಬರವಣಿಗೆಯನ್ನೇ ನಂಬಿರುವವರಿಗೆ ಮಾನ್ಯತೆ ನೀಡುವ ಬದಲಿಗೆ ಇಂತಹ ಕಪ್ಪು ಕುರಿಗಳಿಗೆ ವಿಶೇಷ ಗೌರವಾಧರಗಳನ್ನು ಸಲ್ಲಿಸುತ್ತಿದ್ದಾರೆ. ಕಪ್ಪ ಕಾಣಿಕೆ ನೀಡುತ್ತಾರೆ ಹೀಗಾಗಿ ಇವರ ಕಣ್ಣಲ್ಲಿ ಎಲ್ಲರೂ ಒಂದೇ.
ಇಂತಹ ಪರಿಸ್ಥತಿ ಎಲ್ಲರ ಕಣ್ಣ ಮುಂದಿರುವಾಗ ಪ್ರಾಮಾಣಿಕರು, ವೃತ್ತಿನಿಷ್ಟರೂ, ಬುದ್ದಿವಂತರೂ ಕೂಡ ಇಂತಹ ಟೀಕೆಯನ್ನು ಮರು ಮಾತಿಲ್ಲದೆ ಸಹಿಸುವ ಸ್ಥತಿ ಎದುರಾಗಿದೆ. ಇದಕ್ಕೆ ಕಾರಣ ಇಂತಹ ಟೀಕೆಗಳಿಗೆ ತಕ್ಕ ಉತ್ತರ ನೀಡಿದರೆ ಅದನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಟೀಕಿಸುವ ವ್ಯಕ್ತಿಗಳು ಇರುವುದಿಲ್ಲ. ತಪ್ಪು ಎಂದು ಹೇಳುವ ವ್ಯಕ್ತಿಯನ್ನು ನೀನು ಹರಿಶ್ಚಂದ್ರನಾ ಎಂದು ಪ್ರಶ್ನಿಸುವವರು ಅಥವಾ ತಮ್ಮದೇ ಶೈಲಿಯಲ್ಲಿ ಬಾಯಿ ಮುಚ್ಚಿಸುವ ಶಕ್ತಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಮೊನ್ನೆ ಶಾಸನ ಸಭೆಯಲ್ಲಿನ ಟೀಕಾಸ್ತ್ರ ಒಂದು ಸಂಘಟಿತ ಯತ್ನ ಎಂದು ಎಲ್ಲರಿಗೂ ಮೇಲ್ನೋಟಕ್ಕೆ ಭಾಸವಾಗುತ್ತದೆ. ಇಲ್ಲವಾದರೆ ಏಕಕಾಲಕ್ಕೆ ಎರಡೂ ಸದನಗಳಲ್ಲಿ ಈ ವಿಷಯ ಹೇಗೆ ಪಸ್ತಾಪವಾಗಲಿದೆ. ಎರಡೂ ಸದನದಲ್ಲಿ ಸರಿ ಸುಮಾರು ಮೂರೂವರೆಯಿಂದ ನಾಲ್ಕು ಗಂಟೆಗಳ ಕಾಲ ಹೇಗೆ ಚರ್ಚೆಯಾಗುತ್ತದೆ. ಬಹುತೇಕ ಕರ್ನಾಟಕ ಬರದಿಂದ ತತ್ತರಿಸಿದ್ದು, ಕುಡಿಯುವ ನೀರಿಗೆ, ಹಿಡಿ ಮೇವಿಗೆ ಜನ-ಜಾನುವಾರು ತತ್ತರಿಸುವ ಸುದ್ದಿಯ ಬಗ್ಗೆ ಬೆಳಕು ಚೆಲ್ಲಲು ತೋರದ ಧಾವಂತ ಈ ವಿಷಯದ ಬಗ್ಗೆ ತೋರಿದ್ದು ನೋಡಿದರೆ ಎಲ್ಲವೂ ಪೂರ್ವ ನಿಯೋಜಿತ ಎನ್ನುವುದರಲ್ಲಿ ಎರಡು ಮಾತಿಲ್ಲ.
ಶಾಸನ ಸಭೆಯಲ್ಲಿ ಇಂತಹ ಚರ್ಚೆಗೆ ವೇದಿಕೆಯಾಗುವಂತೆ ಮಾಡಿದ್ದು ವಿಧಾನಸೌಧ, ವಿಕಾಸ ಸೌಧದ ಮಧ್ಯಭಾಗದ ಖಾಲಿ ಜಾಗದಲ್ಲಿ ನಿರ್ಮಾಣಗೊಂಡಿರುವ ಮಹತ್ಮಾಗಾಂಧಿ ಅವರ ಧ್ಯಾನಾಸಕ್ತ ಪ್ರತಿಮೆ ನಿರ್ಮಾಣ ಕಾಮಗಾರಿಯ ಅವ್ಯವಹಾರ ಹಾಗು ವಿಧಾನಮಂಡಲದ ನೌಕರರ ಸಹಕಾರ ಸಂಘದಲ್ಲಿ ಸದಸ್ಯರೇ ಅಲ್ಲದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ಮಕ್ಕಳು ಪಡೆದ ನಿವೇಶನ ಕರ್ಮಕಾಂಡ.
ಆದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ಯಾವುದೇ ಶಾಸಕರು ಈ ಬಗ್ಗೆ ಚಕಾರವೆತ್ತಲಿಲ್ಲ ಬದಲಾಗಿ ಶಾಸಕರು ಕೆಲ ಮಾಧ್ಯಮಗಳಿಂದ ತಮ್ಮ ಮೇಲಾದ ದಾಳಿ, ಅದರಿಂದ ತಾವು ಅನುಭವಿಸಿದ ಮಾನಸಿಕ ಯಾತನೆಯನ್ನು ಬಿಚ್ಚಿಟ್ಟರು. ಇದು ನಿಜವೂ ಕೂಡಾ ಆಗಿತ್ತು ಕೆಲ ಮಾಧ್ಯಮಗಳ ಕಾರ್ಯವೈಖರಿ ನೋಡಿದ ಯಾರಿಗಾದರೂ ಶಾಸಕರು ಇಂತಹ ಅಳಲು ತೋಡಿಕೊಳ್ಳಲು ಕಾರಣವಿದೆ ಎಂತೆನಿಸುತ್ತಿತ್ತು. ಅದು ಇಷ್ಟಕ್ಕೆ ನಿಂತಿದ್ದರೆ ಯಾರೂ ಏನೂ ಅನ್ನುತ್ತಿರಲಿಲ್ಲ ಆದರೆ ಶಾಸಕರು ಬಳಸಿದ ಭಾಷೆ ವ್ಯಕ್ತ ಪಡಿಸಿದ ಅಭಿಪ್ರಾಯ ಗಮನಿಸಿದಾಗ ಇದು ಬೇರೊಂದು ದಿಕ್ಕಿಗೆ ಸಾಗುತ್ತಿದೆ ಎಂದೆನಿಸುತ್ತಿತ್ತು.
ಮಾಧ್ಯಮಗಳಿಗೂ ತಮ್ಮದೇ ಆದ ಇತಿಮಿತಿಗಳಿವೆ ಮಾಧ್ಯಮಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಾತೀತರೂ ಅಲ್ಲ ಹಾಗೂ ಎಲ್ಲರೂ ಹರಿಶ್ಚಂದ್ರರೇನೂ ಅಲ್ಲ ಹಾಗೆಂದ ಮಾತ್ರಕ್ಕೆ ವಸ್ತುನಿಷ್ಟ ವರದಿ ನೀಡುವ, ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ವೃತ್ತಿಪರರೂ ಇಲ್ಲವೆಂದೇನಿಲ್ಲ ವಾಸ್ತವವಾಗಿ ಇಂತಹ ವೃತ್ತಿಪರರ ಸಂಖ್ಯೆಯೇ ದೊಡ್ಡದಿದೆ. ಎಲ್ಲೋ ಕೆಲವು ಕಪ್ಪುಕುರಿಗಳ ಹಾವಳಿಯಿಂದಾಗಿ ಪತ್ರಿಕಾ ವೃತ್ತಿಯನ್ನು ಅತ್ಯಂತ ಪವಿತ್ರವೆಂದೂ, ಎಷ್ಟೇ ಕಷ್ಟ ಬಂದರೂ ತಮ್ಮ ಪೆನ್ನು ಮಾರಿಕೊಳ್ಳದವರ ಸಂಖ್ಯೆಯೇ ಬಹಳ ದೊಡ್ಡದಿದೆ ಅಂತಹವರಿಗೆ ವಿಜ್ಞಾನಮಂಡಲದಲ್ಲಿ ನಡೆದ ಚರ್ಚೆ ಸಾಗಿದ ದಿಕ್ಕು, ಅದು ಪಡೆದುಕೊಂಡ ತಿರುವು, ಶಾಸಕರು ಬಳಸಿದ ಭಾಷೆ ಎಂತಹದರಲ್ಲೂ ಬೇಸರ ಹುಟ್ಟುವಂತೆ ಮಾಡಿತು. ಅದರಲ್ಲೂ ಯಾವುದೇ ಶಾಸಕರು ನಿರ್ದಿಷ್ಟ ಮಾಧ್ಯಮ ಹಾಗೂ ಮಾಧ್ಯಮ ಪ್ರತಿನಿಧಿಯ ಬಗ್ಗೆ ಮಾತನಾಡದೆ ಎಲ್ಲಾ ಮಾಧ್ಯಮಗಳು ಒಂದೇ, ಎಲ್ಲಾ ಮಾಧ್ಯಮ ಪ್ರತಿನಿಧಿಗಳೂ ಒಂದೇ ರೀತಿ ಎಂದು ಮಾತನಾಡಿದ್ದು ಸರಿಕಾಣಲಿಲ್ಲ.
ಇನ್ನು ಎರಡು ಸದನಗಳಲ್ಲಿ ನಡೆದ ಕಲಾಪ ಏಕಪಕ್ಷೀಯವಾಗಿತ್ತು. ಸದನದಲ್ಲಿ ಶಾಸಕರದ್ದು ಪರಮಾಧಿಕಾರ ಯಾವುದೇ ಕೋರ್ಟ್ ಸೇರಿ ಯಾರೂ ಇಲ್ಲಿನ ಮಾತುಗಾರಿಕೆಯ ಬಗ್ಗೆ ಚಕಾರ ಎತ್ತುವಂತಿಲ್ಲ, ಪ್ರಶ್ನೆ ಮಾಡುವಂತಿಲ್ಲ, ಚಕಾರ ಎತ್ತುವ ಮತ್ತು ಪ್ರಶ್ನಿಸುವ ಅಧಿಕಾರ ಇನ್ನೊಬ್ಬ ಶಾಸಕರಿಗೆ ಇಲ್ಲ, ಸಭಾಧ್ಯಕ್ಷರಿಗೆ ಮಾತ್ರ ಸೀಮಿತ. ಹೀಗಾಗಿ ಮಾಧ್ಯಮ ಪ್ರತಿನಿಧಿಗಳು, ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ನಡೆದ ಸುಧೀರ್ಘ ಚರ್ಚೆ ಏಕಪಕ್ಷೀಯವಾಗಿತ್ತು ಯಾರೊಬ್ಬರು ಮಾಧ್ಯಮಗಳ ಪರ ಚಕಾರ ಎತ್ತಲಿಲ್ಲ. ಸಚಿವ ಬಸವರಾಜು ರಾಮರೆಡ್ಡಿ, ರಮೇಶ್ ಬಾಬು ಅವರು ಮಾಡಿದ ಪ್ರಯತ್ನ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ.
ಸರಿ ಸುಮಾರು 18 ವರ್ಷಗಳ ಹಿಂದಿನ ಮಾತು ಅಂದು ಮಾಧ್ಯಮ ರಂಗದಲ್ಲಿ ಪ್ರಭಾವಿಯಾಗಿದ್ದ ಲಂಕೇಶ್ ಪತ್ರಿಕೆಯಲ್ಲಿ ಮಹಿಳಾ ಶಾಸಕರ ಕಾರ್ಯವೈಖರಿ ಬಗ್ಗೆ ಬರೆದ ಲೇಖನವೊಂದು ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಗ್ರಾಸವಾಗಿತ್ತು. ಇಂದಿನ ಆರೋಗ್ಯ ಮಂತ್ರಿ ರಮೇಶ್ ಕುಮಾರ್ ಅಂದು ವಿಧಾಸಭಾಧ್ಯಕ್ಷ, ಸಮಾಜವಾದಿ ಹಿನ್ನೆಲೆಯಿಂದ ಬಂದ ದಿವಂಗತ ಜೆ.ಎಚ್.ಪಟೇಲ್ ಅಂದು ಮುಖ್ಯ ಮಂತ್ರಿಯಾಗಿದ್ದರು. ಅಂದು ನಿರ್ದಿಷ್ಟವಾಗಿ ಲಂಕೇಶ್ ಪತ್ರಿಕೆಯ ಮೇಲೆ ಕೆಲವು ಶಾಸಕರು ವಾಗ್ದಾಳಿ ನಡೆಸಿದ್ದರು. ಪತ್ರಿಕೆಯ ಸಂಪಾದಕ ದಿವಂಗತ ಲಂಕೇಶ್ ಹಾಗೂ ವರದಿಗಾರನ್ನು ಸದನಕ್ಕೆ ಕರೆಯಿಸಿ ವಾಗ್ಧಂಡನೆ ವಿಧಿಸಬೇಕೆಂದು ಆಗ್ರಹಿಸಲಾಗಿತ್ತು ಅಂದು ಇಡೀ ಸದನ ಈ ನಿರ್ಣಯದ ಪರ ನಿಲ್ಲಲಿದೆ ಎಂದು ಅನಿಸತೊಡಗಿದಾಗ ಅಂದು ಶಾಸಕರಾಗಿದ್ದ ವಾಟಾಳ್ ನಾಗರಾಜ್, ಏಕಾಂಗಿಯಾಗಿ ಮಾಧ್ಯಮಗಳ ಕಾರ್ಯವೈಖರಿ, ಜವಾಬ್ದಾರಿ, ವೃತ್ತಿಪರತೆ, ಲಕ್ಷ್ಮಣರೇಖೆ ಬಗ್ಗೆ ಪ್ರಸ್ತಾಪ ಮಾಡಿದರೂ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕಿರುವಂತೆ ಅಘೋಷಿತ ನಾಲ್ಕನೇ ಅಂಗವೆಂದು ಪರಿಗಣಿಸುವ ಮಾಧ್ಯಮರಂಗಕ್ಕಿರುವ ಮಹತ್ವವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ತಮ್ಮ ಮಾತಿಗೆ ಯಾವುದೇ ಅಡ್ಡಿಬಂದರೂ ಲೆಕ್ಕಿಸದೆ ಅವರು ಮಂಡಿಸಿದ ವಾದದ ಪರಿಣಾಮವಾಗಿ ಇಡೀ ಸದನದ ದೃಷ್ಟಿಕೋನವೇ ಬದಲಾಯಿತು. ವಾಗ್ದಂಡನೆ ಅಥವಾ ಹಕ್ಕುಚ್ಯುತಿಯಂತಹ ಪ್ರಸ್ತಾಪಗಳನ್ನು ಕೈಬಿಡಬೇಕಾಯಿತು.
ಆದರೆ ಮೊನ್ನೆ ಇಂತಹ ಯಾವುದೇ ವಾದ-ಪ್ರತಿವಾದಕ್ಕೆ ಅವಕಾಶವೇ ಇರಲಿಲ್ಲ ಎಲ್ಲವೂ ಏಕಪಕ್ಷೀಯವಾಗಿತ್ತು ಶಾಸಕರ ಕಾರ್ಯವೈಖರಿ ಬಗ್ಗೆ ಮಾಧ್ಯಮಗಳು ಮಾತನಾಡುತ್ತವೆ. ಕಾರ್ಯವೈಖರಿ ಬಗ್ಗೆ ಮಾಕ್ರ್ಸ್ ಕೊಡುತ್ತಾರೆ, ಮಾಕ್ರ್ಸ್ ಕೊಡಲು ಇವರಿಗೆ ಏನು ಅಧಿಕಾರ ಇವರು ನೀಡುವ ಮಾಕ್ರ್ಸ್‍ಗಳನ್ನು ಯಾರು ಕೇಳುತ್ತಾರೆ, ಈ ಮಾಕ್ರ್ಸ್‍ಗಳನ್ನು ನೋಡಿ ಯಾರೂ ವೋಟ್ ಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮಗಳ ವರದಿ ತಮಗೆ ವೋಟ್ ಕೊಡಿಸುವುದಿಲ್ಲ ಎಂದಾದರೆ ಅಂತಹ ವರದಿಗಳ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ ಎಂದು ಮಾತ್ರ ಯಾರೂ ಅವರನ್ನು ಕೇಳದೆ ಹೋಗಿದ್ದು ವಿಪರ್ಯಾಸ.
ನಮಗೆ ಮಾಕ್ರ್ಸ್ ಕೊಡುವ ಮಾಧ್ಯಮಗಳಿಗೆ ಮಾಕ್ರ್ಸ್ ಕೊಡುವವರು ಯಾರು ಎಂದು ಪ್ರಶ್ನಿಸಿದ ಶಾಸಕರಿಗೆ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ, ಎನ್ನುವುದು ಮೇಲ್ನೋಟಕ್ಕೆ ಭಾಸವಾಗುತ್ತಿತ್ತು, ಶಾಸಕರು ಬೇಕಾಬಿಟ್ಟಿ ಹಣ ಮಾಡಿದ್ದಾರೆ, ಏನೇನೊ ಸೀಡಿ ಇದೆ ಎಂದು ಹೇಳುವ ಮಾಧ್ಯಮ ಪ್ರತಿನಿಧಿಗಳು ಎಷ್ಟು ಹಣ ಮಾಡಿದ್ದಾರೆ, ಅವರ ಎಂತಹ ಸೀಡಿಗಳಿವೆ ಎಂದು ತಮಗೆ ಗೊತ್ತು ಎಂದು ಮತ್ತೊಬ್ಬ ಶಾಸಕರು ಅವಲತ್ತುಕೊಂಡರೆ, ಆ ರೀತಿ ಹಣಮಾಡಿರುವ ಮಹಾನುಭಾವರು, ಸೀಡಿಯಲ್ಲಿರುವ ಪ್ರತಿಭಾವಂತರ ಬಗ್ಗೆ ನೀವೂ ಬೆಳಕು ಚೆಲ್ಲಿ ಅವರ ಹೆಸರುಗಳನ್ನು ಬಹಿರಂಗ ಪಡಿಸಿ. ಯಾವುದೇ ಮಾಧ್ಯಮ ನೀವು ಹೇಳಿದ್ದನ್ನು ತೋರಿಸುವುದಿಲ್ಲ ಎಂದು ಅಪನಂಬಿಕೆ ಇದ್ದರೆ ನವ ಮಾಧ್ಯಮಗಳ ಈ ಯುಗದಲ್ಲಿ ಅಭಿಪ್ರಾಯ ಹೇಳಲು ಅಕ್ರಮ ಹೊರಹಾಕಲು ಸೀಡಿಯಲ್ಲಿನ ದೃಶ್ಯ ತೋರಿಸಲು ನಾನಾ ಮಾರ್ಗಗಳುಂಟು. ಈ ಬಗ್ಗೆ ಯಾಕೆ ಮುಚ್ಚುಮರೆ ಮಾಡುತ್ತೀರಿ ಅಥವಾ ಭಯ ಯಾಕೆ ಎಲ್ಲವನ್ನು ಬಹಿರಂಗಪಡಿಸಿ ಜನರಿಗೂ ಗೊತ್ತಾಗಲಿ ಇಂತಹವರೂ ಇದ್ದಾರೆ ಎಂದು ಅಂತಾ ಯಾರೂ ಅಲ್ಲಿ ಸವಾಲು ಹಾಕಲೇ ಇಲ್ಲ. ಆರೋಪಗಳು ಮಾತ್ರ ಮುಂದುವರೆದಿತ್ತು.
ಮಾಧ್ಯಮಗಳು ಹೇಗೆಂದರೆ ಹಾಗೆ ಬೇಕಾಬಿಟ್ಟಿ ವರದಿ ಮಾಡುವುದು, ದೃಶ್ಯ ಬಿತ್ತರಿಸುವುದು ಸಾಧ್ಯವೇ ಇಲ್ಲ. ಯಾವುದೇ ದೃಶ್ಯ ನೋಡಲು ಯೋಗ್ಯವೆನಿಸಿಲ್ಲ ಎಂದರೆ ತಕ್ಷಣ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಕೇವಲ ಸುದ್ದಿ ಮಾತ್ರವಲ್ಲ ದೃಶ್ಯ ಮಾಧ್ಯಮದಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಂದ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ಯಾವುದೇ ಕಾರ್ಯಕ್ರಮ ಅಥವಾ ಸುದ್ದಿ ಪ್ರಸಾರ ಯೋಗ್ಯವಲ್ಲ ಎಂದಾದರೆ ಕೇಂದ್ರ ಪ್ರಸಾರ ಮಂತ್ರಾಲಯಕ್ಕೆ ದೂರು ಸಲ್ಲಿಸಬಹುದು. ಇವರ ಹೊರತಾಗಿ ಸುದ್ದಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಸಂವಿಧಾನ ಬದ್ದವಾದ ಪತ್ರಿಕಾ ಮಂಡಳಿ ಕೂಡಾ ಇದೆ. ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಮಂಡಳಿ ತಪ್ಪಿಗೆ ಶಿಕ್ಷೆ ವಿಧಿಸುವ ಅಧಿಕಾರವನ್ನು ಹೊಂದಿದೆ.
ಅಷ್ಟಕ್ಕೂ ಮಾಧ್ಯಮಗಳಿಗೆ ಕಲಂ19(1)ನೇ ವಿಧಿ ಅನ್ವಯ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ರೀತಿಯ ರಕ್ಷಣೆ ಇರುವುದಿಲ್ಲ ಮಾಧ್ಯಮಗಳ ಕಾರ್ಯವೈಖರಿಯಲ್ಲೂ ಇದರ ವ್ಯಾಪ್ತಿಯಲ್ಲೇ ಇರಬೇಕು ಈ ಬಗ್ಗೆ ಹಲವು ಕೋರ್ಟ್‍ಗಳ ತೀರ್ಪು ಕೂಡಾ ಇವೆ.
ಈಗ ವಿಧಾನಮಂಡಲದ ಚರ್ಚೆಯನ್ನಾಧರಿಸಿ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಪರಿಶೀಲಿಸಿ ಅವು ಸಮಾಜಮುಖಿಯಾಗಿರಲು ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಅಧ್ಯಾಯನ ನಡೆಸಿ ಶಿಫಾರಸ್ಸು ಮಾಡುವಂತೆ ಆರೋಗ್ಯ ಸಚಿವ ರಮೇಶ್ ಕುಮಾರ್ ನೇತೃತ್ವದಲ್ಲಿ ವಿಧಾನಮಂಡಲದ ಜಂಟಿ ಸದನ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಕೆಲವು ಮಾಧ್ಯಮಗಳ ವರದಿಯಿಂದ ಒಂದಲ್ಲಾ ಒಂದು ರೀತಿಯ ಹೊಡೆತ ತಿಂದ ಬಹುತೇಕರನ್ನೂ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಸಮಿತಿ ಮಾಧ್ಯಮ ಪ್ರತಿನಿಧಿಗಳು, ಸಂಪಾದಕರು, ಮಾಲೀಕರು, ಸಮಾಜವಿಜ್ಞಾನಿಗಳು, ಹೋರಾಟಗಾರರು ಸೇರಿದಂತೆ ಸಂಬಂಧಪಟ್ಟವರ ಅಭಿಪ್ರಾಯ, ಸಲಹೆ, ಸೂಚನೆ ಆಧರಿಸಿ ಮಾಧ್ಯಮಗಳ ಸ್ವೇಚ್ಯಾಚಾರದ ನಡವಳಿಕೆಗೆ ಯಾವ ರೀತಿಯ ಕಡಿವಾಣ ಹಾಕಬೇಕೆಂಬ ಬಗ್ಗೆ ಶಿಫಾರಸ್ಸು ಮಾಡಬೇಕಿದೆ. ಸಂವಿಧಾನದ ಕಲಂ19(1)(ಎ) ವಿಧಿ ಅನ್ವಯ ಮಾಧ್ಯಮಗಳಿಗಿರುವ ಅಧಿಕಾರ, ಕಾರ್ಯವ್ಯಾಪ್ತಿ ಮತ್ತು ಉದ್ದೇಶದ ಸ್ಪಷ್ಟ ಉಲ್ಲೇಖವಿದೆ. ಹೀಗಾಗಿ ಯಾವುದೇ ರಾಜ್ಯ ಸರ್ಕಾರ ಅಥವಾ ವಿಧಾನಮಂಡಲ ಮಾಧ್ಯಮಗಳು ಈ ರೀತಿಯೇ ಕೆಲಸ ಮಾಡಬೇಕು ಇಂತಹ ಸುದ್ದಿಯನ್ನೇ ವರದಿ ಮಾಡಬೇಕು ಎಂಬ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ದೇಶ ವಿರೋಧಿ ಚಟುವಟಿಕೆ ದೇಶದ ಪಾವಿತ್ರ್ಯತೆಗೆ ಮತ್ತು ಘನತೆಗೆ ಧಕ್ಕೆ ತರುವ ಯಾವುದೇ ವರದಿ ಬಿಟ್ಟು ಸಮಾಜದ ಒಳಿತಿಗೆ ಮತ್ತು ದೇಶದ ಒಳತಿಗೆ ಬೇಕಾದ ಸಾರ್ವಜನಿಕರ ಪರವಾದ ಯಾವುದೇ ಸುದ್ದಿ ಪ್ರಸಾರ ಮಾಡಲು ಮಾಧ್ಯಮಗಳಿಗೆ ಪೂರ್ಣ ಅಧಿಕಾರವಿದೆ ಇವುಗಳು ದಾರಿತಪ್ಪಿದಾಗ ಶಿಕ್ಷಿಸಲು ಭಾರತೀಯ ಪತ್ರಿಕಾಮಂಡಳಿಯೂ ಇದೆ.
ಇದೇ ಅಂತಿಮ ಇದನ್ನೂ ಹೊರತುಪಡಿಸಿ ರಾಜ್ಯ ವಿಧಾನಮಂಡಲ ಯಾವುದೇ ಶಾಸನ ಮಾಡಲು ಬರುವುದಿಲ್ಲ. ಒಂದು ವೇಳೆ ಕಾನೂನು ರಚನೆಯಾದರೂ ಕೂಡ ಯಾವುದೇ ಕೋರ್ಟ್‍ನಲ್ಲಿ ಅದು ನಿಲ್ಲುವುದು ಕಷ್ಟ.
ಕಾನೂನು ಶಿಫಾರಸ್ಸು ಏನೇ ಆಗಲಿ ಈಗಿರುವ ಪ್ರಶ್ನೆ ಒಂದೇ. ಮಾಧ್ಯಮಗಳು ಹೇಗೆ ಕಾರ್ಯನಿರ್ವಹಿಸಬೇಕು. ಅವುಗಳ ವರದಿ ಯಾರ ಪರವಾಗಿರಬೇಕು. ಮಾಧ್ಯಮಗಳ ಮಿತಿ ಏನು, ಹಾಗೇಯೇ ಶಾಸಕರ ಹಕ್ಕುಬಾದ್ಯತೆಗಳೇನು, ಇದರ ಕಾರ್ಯವೈಖರಿ ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲವೇ, ಅಧಿಕಾರ ದುರಪಯೋಗ, ಭ್ರಷ್ಟಾಚಾರ ಆದಾಯ ಮೂಲ ಮೀರಿ ಆಸ್ತಿ ಸಂಪಾದನೆ, ಇಂತಹವುಗಳ ಬಗ್ಗೆ ವರದಿ ಮಾಡಬಾರದೆ, ಮಾಡಿದರೆ ಅದು ಸ್ವೇಚ್ಯಾಚಾರದ ನಡವಳಿಕೆಯೇ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ