ಮದ್ಯ ನಿಷೇಧಕ್ಕೆ ಆಗ್ರಹ: ಬೃಹತ್ ಮೆರವಣಿಗೆ !

Kannada News

28-10-2017

ರಾಯಚೂರು: ರಾಜ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ನಾಳೆ ರಾಯಚೂರು ನಗರದ ಎಪಿಎಂಸಿ ಆವರಣದಲ್ಲಿ ರಾಜ್ಯಮಟ್ಟದ ಸಮಾವೇಶ ಹಾಗೂ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮದ್ಯ ನಿಷೇಧ ಆಂದೋಲನದ ರಾಜ್ಯ ಸಂಚಾಲಕಿ ವಿದ್ಯಾ ಪಾಟೀಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆಂದೋಲನ 30ಕ್ಕೂ ಅಧಿಕ ಸಂಘಟನೆಗಳ ಒಕ್ಕೂಟವಾಗಿದೆ. ರಾಜ್ಯದ ಎಲ್ಲ ಕಡೆಯಿಂದ 50 ಸಾವಿರಕ್ಕೂ ಅಧಿಕ ಮಹಿಳೆಯರು ಆಗಮಿಸುವರು. ಎಲ್ಲ ರಾಜಕೀಯ ಪಕ್ಷಗಳಿಗೆ ಮದ್ಯ ನಿಷೇಧದ ಹಕ್ಕೊತ್ತಾಯ ಮಾಡಲಾಗುವುದು ಎಂದು ತಿಳಿಸಿದರು.

ನಶಾ ಮುಕ್ತ ಭಾರತ ಸಂಘಟನೆ ಪ್ರಮುಖರಾದ ಮೇಧಾ ಪಾಟ್ಕರ್, ಚಿತ್ರದುರ್ಗದ ಸಿರಿಗೆರೆ ತರಳುಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿ, ಬೀದರ್ ನ ಬಸವ ಸೇವಾ ಪ್ರತಿಷ್ಠಾನದ ಡಾ.ಗಂಗಾಬಿಕಾ ಅಕ್ಕ, ಆಳಂದದ ಮಹಿಳಾ ಪರ ಹೋರಾಟಗಾರ್ತಿ ಸಿಸ್ಟರ್ ಟೀನಾ, ಇಳಕಲ್‍ ನ ಪ್ರಗತಿಪರ ಚಿಂತಕ ಲಾಲ್ ಹುಸೇನ್ ಕಂದಗಲ್ ಸೇರಿ ಅನೇಕ ಗಣ್ಯರು ಭಾಗವಹಿಸುವರು. ರಾಜ್ಯವ ವಿವಿಧ ಪ್ರಾಂತಗಳಿಂದ ಸಹಸ್ರಾರು ಮಹಿಳೆಯರು ಪಾಲ್ಗೊಳ್ಳುವರು ಎಂದರು.

ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಭಾನುವಾರ ಮಧ್ಯಾಹ್ನ 12 ರಿಂದ 3ರವರೆಗೆ ಸಮಾವೇಶದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಮೆರವಣಿಗೆ ಶುರುವಾಗಲಿದ್ದು, ಚಂದ್ರಮೌಳೇಶ್ವರ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದವರೆಗೆ ನಡೆಸಿ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ