‘ಜಾರ್ಜ್ ರಾಜೀನಾಮೆಗೆ ಒತ್ತಾಯ, ಸರಿಯಲ್ಲ’

Kannada News

28-10-2017 236

ಬೆಂಗಳೂರು: ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಬಿಜೆಪಿಯವರು ಮತ್ತೊಬ್ಬರ ತಟ್ಟೆಯಲ್ಲಿ ನೊಣ ತೋರಿಸಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ. ಸಚಿವ ಜಾರ್ಜ್ ರಾಜೀನಾಮೆಗೆ ಬಿಜೆಪಿಯವರು ಒತ್ತಾಯಿಸುತ್ತಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಯವರು ಈ ರೀತಿ ಪ್ರತಿಕ್ರಿಯಿಸಿದರು.

ನೈತಿಕತೆ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಅವರು ಮೊದಲು ರಾಜಿನಾಮೆ ಕೊಡಬೇಕು ಎಂದು ಮುಖ್ಯಮಂತ್ರಿಯವರು ಹೇಳಿದರು. ವಂಚನೆ, ಫೋರ್ಜರಿ, ಡಿನೋಟಿಫಿಕೇಷನ್ ಅವ್ಯವಹಾರ ಸೇರಿದಂತೆ ಯಡಿಯೂರಪ್ಪ ಅವರ ಮೇಲೆ ಹಲವಾರು ಕೇಸುಗಳಿವೆ. ಇದನ್ನು ನಾನು ಸೃಷ್ಟಿ ಮಾಡಿಕೊಂಡು ಹೇಳುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಯಡಿಯೂರಪ್ಪ ಅವರು ತಮ್ಮ ಮೇಲಿನ ಕೇಸುಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

ಜಾರ್ಜ್ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಷ್ಟೊಂದು ಕೇಸುಗಳಿರುವಾಗ ಯಡಿಯೂರಪ್ಪ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅರ್ಹರೇ..? ಅದೂ ಅಲ್ಲದೇ ಅವರು ಮುಖ್ಯಮಂತ್ರಿ ಅಭ್ಯರ್ಥಿ ಬೇರೆ ಎಂದು ಹೇಳಿದರು.

ಎಫ್‍ಐಆರ್ ದಾಖಲಾಗಿದೆ ಎಂದಾಕ್ಷಣ ಆರೋಪ ಸಾಬೀತಾಗಿದೆ ಎಂದು ಅರ್ಥವಲ್ಲ. ಯಾರೇ ದೂರು ನೀಡಿದರೂ ಮೊದಲು ಎಫ್‍ಐಆರ್ ದಾಖಲಾಗುವುದು ಸಹಜ, ಅಷ್ಟಕ್ಕೇ ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯ ಮಾಡುವುದು ಸರಿಯಲ್ಲ ಎಂದರು.

ಈ ಹಿಂದೆ ಜಾರ್ಜ್ ಅವರು ನಾನು ಬೇಡವೆಂದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು.  ಅವರು ಮತ್ತೆ ಏಕೆ ರಾಜೀನಾಮೆ ಕೊಡಬೇಕು. ಅದರೂ ಅದೇ ದೂರಿನ ಆಧಾರದ ಮೇಲೆ, ಎಂದು ಮುಖ್ಯಮಂತ್ರಿಯವರು ಪ್ರಶ್ನಿಸಿದರು.

ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರ ಅಥವಾ ಜಾರ್ಜ್ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ ಎಂದು, ಹೇಳುವುದು ಸರಿಯಲ್ಲ. ಕುಮಾರಸ್ವಾಮಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ಹೇಳಿದರು.

ಕಾನೂನು ಪರ ಇದ್ದೇನೆ: ನಾನು ಸಹ ಜಾರ್ಜ್ ರಕ್ಷಣೆಗೆ ನಿಂತಿಲ್ಲ. ಆದರೆ ಕಾನೂನು ಪರ ಇದ್ದೇನೆ. ಸಿಬಿಐಗೆ ತನಿಖೆಗೆ ತೊಂದರೆಯಾಗುತ್ತದೆ. ಹೀಗಾಗಿ ಜಾರ್ಜ್ ಅವರು ರಾಜೀನಾಮೆ ನೀಡಬೇಕು ಎಂಬುದು ತಪ್ಪು. ಸಿಬಿಐ ಕೇಂದ್ರ ಸರ್ಕಾರದ ಅಧಿನದಲ್ಲಿರುವ ಸಂಸ್ಥೆ. ಹೀಗಿರುವಾಗ ತೊಂದರೆಯಾಗಲು ಹೇಗೆ ಸಾಧ್ಯ? ಎಂದು ಮುಖ್ಯಮಂತ್ರಿಯವರು ಕೇಳಿದರು.

ಜಾರ್ಜ್ ಮುಖ್ಯಮಂತ್ರಿಯವರ ಶಿಷ್ಯ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಯಡಿಯೂರಪ್ಪ ಅವರಿಗೆ ಬುದ್ಧಿ ಇಲ್ಲ. ಏನು ಮಾತನಾಡುತ್ತೇನೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ. ಕಾನೂನು ಅಂಶಗಳು ತಿಳಿದಿಲ್ಲ, ಅವರು ಭಾವನಾತ್ಮಕವಾಗಿ ಮಾತನಾಡುತ್ತಾರೆ ಎಂದು ತಿಳಿಸಿದರು.

ಕನ್ನಡಕ್ಕೆ ಪ್ರಥಮ ಸ್ಥಾನ: ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನ ಇರಬೇಕು. ವಿಮಾನ ನಿಲ್ದಾಣ, ಮೆಟ್ರೋ ರೈಲು ನಿಲ್ದಾಣ ಸೇರಿದಂತೆ ಎಲ್ಲಿಯೇ ಆದರೂ ಕನ್ನಡ ಇರಲೇಬೇಕು ಎಂದು ಮುಖ್ಯಮಂತ್ರಿಯವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ತಡವಾಗಿ ಆಹ್ವಾನ ಬಂದಿದೆ: ಬೀದರ್‍ ನಲ್ಲಿ ನಾಳೆ ನಡೆಯುವ ರೈಲ್ವೆ ಇಲಾಖೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ತಡವಾಗಿ ಆಹ್ವಾನ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು. ಕಾರ್ಯಕ್ರಮ ಕುರಿತು ನಮ್ಮೊಂದಿಗೆ ಮೊದಲೇ ಚರ್ಚೆ ಮಾಡಬೇಕಿತ್ತು. ಏಕೆಂದರೆ ರಾಜ್ಯದಲ್ಲಿ ಕೈಗೆತ್ತಿಕೊಳ್ಳುವ ರೈಲ್ವೆ ಯೋಜನೆಗಳ ವೆಚ್ಚದಲ್ಲಿ ನಮ್ಮ ಸರ್ಕಾರ ಅರ್ಧ ಭರಿಸುತ್ತದೆ, ಜೊತೆಗೆ ಜಾಗವನ್ನು ಉಚಿತವಾಗಿ ನೀಡುತ್ತದೆ. ಹೀಗಿರುವಾಗ ಕಾರ್ಯಕ್ರಮದ ರೂಪುರೇಷೆ ಕುರಿತು ಪೂರ್ವಭಾವಿಯಾಗಿ ಚರ್ಚಿ ಮಾಡದೇ ಕೊನೆಗಳಿಗೆಯಲ್ಲಿ ಆಹ್ವಾನ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ತಮಗೆ ಪೂರ್ವ ನಿಗಧಿತ ಕಾರ್ಯಕ್ರಮ ಇರುವುದರಿಂದ ಪ್ರಧಾನಿಯವರು ಭಾಗವಹಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಪರವಾಗಿ ಸಚಿವ ದೇಶಪಾಂಡೆ ಅವರು ಹೋಗುತ್ತಾರೆ ಎಂದರು.

ಎಚ್‍ಡಿಕೆ ಭೇಟಿ ಬಗ್ಗೆ ಗೊತ್ತಿಲ್ಲ : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಯವರನ್ನು ನಿನ್ನೆ ರಾತ್ರಿ ಭೇಟಿಯಾಗಿರುವ ಬಗ್ಗೆ ಗೊತ್ತಿಲ್ಲ, ವಿದ್ಯುತ್ ಖರೀದಿ ಸಂಬಂಧ ಇಂಧನ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಗೆ ರಚನೆಯಾಗಿರುವ ಸದನ ಸಮಿತಿಯಲ್ಲಿ ಕುಮಾರಸ್ವಾಮಿ ಅವರು ಸದಸ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಭೇಟಿ ಮಾಡಿ ಚರ್ಚಿಸಿರಬಹುದು ಎಂದು ಹೇಳಿದರು.

ಪ್ರಾಧಿಕಾರ ರಚನೆ ಇಲ್ಲ: ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಅಂತಹ ಪ್ರಸ್ತಾವನೆಯೂ ನಮ್ಮ ಮುಂದೆ ಇಲ್ಲ ಎಂದು ಮುಖ್ಯಮಂತ್ರಿಯವರು ಇದೇ ವೇಳೆ ಸ್ಪಷ್ಟಪಡಿಸಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ