ಯಾರಾಗಲಿದ್ದಾರೆ ರಾಜ್ಯದ ಡಿಜಿ ಮತ್ತು ಐಜಿ..?

Kannada News

28-10-2017

ಬೆಂಗಳೂರು: ರೂಪ್ ಕುಮಾರ್ ದತ್ತ ಅವರ ನಿವೃತ್ತಿಯಿಂದ ತೆರವಾಗುತ್ತಿರುವ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಹಾಗೂ ನಿರೀಕ್ಷಕ (ಡಿಜಿ ಮತ್ತು ಐಜಿ) ಹುದ್ದೆ ನೇಮಕಾತಿಗೆ ರಚಿಸಲಾಗಿದ್ದ ಉನ್ನತಾಧಿಕಾರ ಸಮಿತಿ ಸೇವಾ ಹಿರಿತನ, ದಕ್ಷತೆ, ಅನುಭವ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಐವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ನೇಮಕಾತಿ ಸಮಿತಿಗೆ ಶಿಫಾರಸು ಮಾಡಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ, ಈ ಶಿಪಾರಸ್ಸಿನ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.

ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಡಿಜಿಪಿ ನೀಲಮಣಿ ಎನ್.ರಾಜು, ಸಿಐಡಿ ಡಿಜಿಪಿ ಕಿಶೋರ್ ಚಂದ್ರ, ಭ್ರಷ್ಟಚಾರ ನಿಗ್ರಹ ದಳದ ಮುಖ್ಯಸ್ಥ ಎಂ.ಎನ್. ರೆಡ್ಡಿ, ತರಬೇತಿ ಮತ್ತು ನೇಮಕಾತಿ ವಿಭಾಗದ ಡಿಜಿಪಿ ಪ್ರೇಂ ಶಂಕರ್ ಮೀನಾ, ಗುಪ್ತಚರ ವಿಭಾಗ ಡಿಜಿಪಿ ಎ.ಎಂ. ಪ್ರಸಾದ್ ಹೆಸರು ಮುಖ್ಯಮಂತ್ರಿಗೆ ಕಳುಹಿಸಿರುವ ಪಟ್ಟಿಯಲ್ಲಿವೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಅವರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ಅಧಿಕಾರಿಗಳ ಸೇವಾ ದಾಖಲಾತಿ ಮತ್ತು ಪೂರ್ವಾಪರ ಪರಿಶೀಲಿಸಿದ ಬಳಿಕ ಹೆಸರುಗಳನ್ನು ಶಿಫಾರಸು ಮಾಡಿದೆ.

ಇದೇ 31ರಂದು ಹಾಲಿ ಡಿಜಿ ಮತ್ತು ಐಜಿ ಆರ್.ಕೆ. ದತ್ತ ನಿವೃತ್ತರಾಗಲಿದ್ದಾರೆ. ಅಂದೇ ಹೊಸ ಪೊಲೀಸ್ ಮುಖ್ಯಸ್ಥರ ನೇಮಕಾತಿ ಬಹುತೇಕ ಆಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಹುದ್ದೆಗೆ ನೀಲಮಣಿ ರಾಜು ಮತ್ತು ಕಿಶೋರ್ ಚಂದ್ರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. 1983ರ ಬ್ಯಾಚ್‍ನ ನೀಲಮಣಿ ಉತ್ತರ ಪ್ರದೇಶದ ರೂರ್ಕಿಯವರು. ಸೇವಾ ಹಿರಿತನಕ್ಕೆ ಮುಖ್ಯಮಂತ್ರಿ ಆದ್ಯತೆ ನೀಡಿದರೆ ಆರ್.ಕೆ ದತ್ತಾ ಉತ್ತರಾಧಿಕಾರಿ ಆಗಿ ನೀಲಮಣಿ  ನೇಮಕಗೊಳ್ಳುವ ಸಾಧ್ಯತೆ ಇದೆ. ನೀಲಮಣಿ ರಾಜು ನೇಮಕಗೊಂಡರೆ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಹುದ್ದೆಗೆ ಮಹಿಳೆಯೊಬ್ಬರು ನೇಮಕಗೊಂಡಂತಾಗುತ್ತದೆ.

ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಯಾರಾಗುತ್ತಾರೆ? ಈ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ. ಹಾಲಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಆ ಅವರು ನ. 30ರಂದು ನಿವೃತ್ತಿಯಾಗಲಿದ್ದು, ಅವರ ಉತ್ತರಾಧಿಕಾರಿಗಾಗಿ ಹುಡುಕಾಟ ನಡೆದಿದೆ.

ಸೇವಾ ಜ್ಯೇಷ್ಠತೆಯಲ್ಲಿ ಹಿರಿಯರಾದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಮೊದಲ ಸ್ಥಾನದಲ್ಲಿದ್ದಾರೆ. ಕೇಂದ್ರ ಸೇವೆಯಲ್ಲಿರುವ ಎಸ್.ಕೆ. ಪಟ್ಟನಾಯಕ್ ಹೆಸರೂ ಮುಂಚೂಣಿಯಲ್ಲಿದೆ. ಮುಖ್ಯ ಕಾರ್ಯದರ್ಶಿಯಾಗಿದ್ದ ಅರವಿಂದ ಜಾಧವ್ ಮತ್ತು ಸುಭಾಷ್ ಚಂದ್ರ ಖುಂಟಿಆ ನೇಮಕದ ಸಂದರ್ಭದಲ್ಲೂ ಈ ಇಬ್ಬರ ಹೆಸರು ಪಟ್ಟಿಯಲ್ಲಿತ್ತು. ರತ್ನ ಪ್ರಭಾ ಇನ್ನೇನು ನೇಮಕಗೊಳ್ಳುತ್ತಾರೆ ಎಂಬ ಹಂತದಲ್ಲಿ ಸಿಎಂ ಹಲವರ ಸಲಹೆಯ ಮೇರೆಗೆ ರತ್ನಪ್ರಭಾ  ಅವರ ಹೆಸರನ್ನು ಕೈಬಿಟ್ಟಿದ್ದರು ಬಳಿಕ ಖುಂಟಿಆ ಅವರನ್ನು ಸರ್ಕಾರ ನೇಮಕ ಮಾಡಿತ್ತು.

ಆದರೆ ಈ ಬಾರಿ ರತ್ನಪ್ರಭಾ ಅವರ ಆಯ್ಕೆಗೆ ಒತ್ತಡ ತೀವ್ರಗೊಂಡಿದೆ. ದಲಿತ ಎಡಗೈ ಸಮುದಾಯಕ್ಕೆ ಸೇರಿದ ರತ್ನಪ್ರಭಾ ಅವರನ್ನು ಉನ್ನತ ಹುದ್ದೆಗೆ ನೇಮಕ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹಲವರು ಸಲಹೆ ಮಾಡಿದ್ದಾರೆ, ಇದರ ಮಧ್ಯೆ, ದಲಿತ ಸಂಘಟನೆಗಳು ರತ್ನ ಪ್ರಭಾ ಅವರ ಆಯ್ಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದೆ. ಮುಂದಿನ ಚುನಾವಣೆ ಗಮನದಲ್ಲಿಟ್ಟು, ರತ್ನ ಪ್ರಭಾ ಅವರನ್ನೇ ಆಯ್ಕೆ ಮಾಡಲು ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಕೆಲವು ಹಿರಿಯ ಸಚಿವರು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ