ಬಿಜೆಪಿ ಮಣಿಸಲು ಕಾಂಗ್ರೆಸ್-ಜೆಡಿಎಸ್ ಪ್ರತಿತಂತ್ರ..?

Kannada News

28-10-2017 616

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ, ಪ್ರತಿಪಕ್ಷಗಳನ್ನು ಮಣಿಸುವ ದೃಷ್ಟಿಯಿಂದ ಹಲವು ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮೇಲೆ ಹಲವು ಭ್ರಷ್ಟಾಚಾರ ಆರೋಪಗಳ ಜೊತೆಗೆ ಸಿ.ಬಿ.ಐ, ಇ.ಡಿ. ಮೊದಲಾದ ಇಲಾಖೆಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಇದರ ಮೊದಲ ಹಂತವಾಗಿ ಸಚಿವರಾದ ಕೆ.ಜೆ.ಜಾರ್ಜ್, ಶಿವಕುಮಾರ್, ಎಂಬಿ.ಪಾಟೀಲ್ ಮಹದೇವಪ್ಪ ಸೇರಿದಂತೆ ಹಲವರನ್ನು ಸಿಲುಕಿಸಲು ಮುಂದಾಗಿದೆ. ಇದಾದ ನಂತರ ಜೆ.ಡಿ.ಎಸ್. ನಾಯಕರನ್ನು ಆರೋಪದ ಸುಳಿಗೆ ಸಿಲುಕಿಸುವ ತಂತ್ರಗಾರಿಕೆಯಲ್ಲಿ ನಿರತವಾಗಿದೆ.

ಅದರಲ್ಲಿಯು ವಿದ್ಯುತ್ ಖರೀದಿ ಅಕ್ರಮದ ಅಸ್ತ್ರವನ್ನು ಬಿಜೆಪಿ ಪ್ರಮುಖವಾಗಿ ಬಳಸಿಕೊಂಡು ಇಂಧನ ಖಾತೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಕುಮಾರಸ್ವಾಮಿ ಅವರನ್ನು ಸಿಲುಕಿಸಲು ಕಾರ್ಯತಂತ್ರ ರೂಪಿಸಿದೆ, ಈ ಬಗ್ಗೆ ಖಚಿತ ಮಾಹಿತಿ ಪಡೆದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇದೀಗ ತಮ್ಮೆಲ್ಲಾ ವೈಮನಸ್ಸು ಮರೆತು ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ಮತ್ತು ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಈ ಸಂಬಂಧ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ದೆಹಲಿ ಮಟ್ಟದಲ್ಲೂ ಈ ಸಂಬಂಧ ಮಾತುಕತೆಗಳು ನಡೆದಿವೆ. ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಕೂಡಾ ದೇವೇಗೌಡರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಇದರ ಪರಿಣಾಮವಾಗಿ ಸಿಬಿಐ ನ ಎಫ್.ಐ.ಆರ್ ಪ್ರಕರಣದಲ್ಲಿ ಕುಮಾರಸ್ವಾಮಿ ಜಾರ್ಜ್ ಬೆಂಬಲಕ್ಕೆ ಧಾವಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರ ಮುಂದುವರೆದ ಭಾಗವಾಗಿ ವಿದ್ಯುತ್ ಖರೀದಿ ಅಕ್ರಮದ ಅಸ್ತ್ರವನ್ನು ಬಿಜೆಪಿ ವಿರುದ್ಧ ಪ್ರಯೋಗಿಸಲು ಮುಂದಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್, ರಾಜಕೀಯ ಶತ್ರು ಎಚ್.ಡಿ.ಕುಮಾರಸ್ವಾಮಿ ನಿವಾಸಕ್ಕೆ ತೆರಳಿ ಸಹಾಯ ಕೋರಿದ್ದಾರೆ. ಒಂದು ಕಾಲದಲ್ಲಿ ರಾಜಕೀಯ ಹಗೆತನ ಮಾಡುತ್ತಿದ್ದ ಡಿಕೆಶಿ ಹಾಗೂ ಎಚ್ಡಿಕೆ ಬಿಜೆಪಿ ಕಟ್ಟಿಹಾಕಲು ಒಂದಾಗಿದ್ದಾರೆ. ರಾಜಕೀಯದಲ್ಲಿ ಶತ್ರುವಿನ ಶತ್ರು ಮಿತ್ರ ಎಂಬ ಸೂತ್ರವನ್ನು ಡಿಕೆಶಿ ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ.

ವಿಧಾನಸೌಧದಲ್ಲಿ ವಿದ್ಯುತ್ ಖರೀದಿ ಅಕ್ರಮವನ್ನು ಪ್ರಸ್ತಾಪಿಸಿ ಡಿ.ಕೆ.ಶಿವಕುಮಾರ್ ಗೆ ಕುಮಾರಸ್ವಾಮಿ ಪೇಚಿಗೆ ಸಿಲುಕಿಸಿದ್ದರು. ಬಿಜೆಪಿ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಡಿಕೆಶಿಗೆ ಐಟಿ ಹಾಗೂ ಕಲ್ಲಿದ್ದಲು ಶಾಕ್ ಬಳಿಕ, ವಿದ್ಯುತ್ ಖರೀದಿ ಅಸ್ತ್ರ ಪ್ರಬಲವಾಗಿ ಕಾಣಿಸಿದೆ. ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸದ್ದು ಮಾಡಿದ ಕಲ್ಲಿದ್ದಲು ಖರೀದಿ ಪ್ರಕರಣವನ್ನು ಬಿಜೆಪಿ ಬಹಿರಂಗ ಪಡಿಸಿದ್ದಕ್ಕೆ ಪ್ರತಿಕಾರವಾಗಿ, ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದಾಗ ನಡೆದಿದೆ ಎನ್ನಲಾದ ವಿದ್ಯುತ್ ಖರೀದಿ ಹಗರಣವನ್ನು ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ.

ಇದೇ ಕಾರಣಕ್ಕೆ ಸದನ ಸಮಿತಿಗೆ ರಾಜೀನಾಮೆ ನೀಡಿದ್ದ ಕುಮಾರಸ್ವಾಮಿ ಮನೆಗೆ ಡಿಕೆಶಿ ಭೇಟಿ ನೀಡಿ ಸಹಕಾರ ಕೋರಿದ್ದಾರೆ. ಸಮಿತಿಯ ಅಂತಿಮ ಸಭೆ ಅ.30ರಂದು ನಡೆಯಲಿದ್ದು, ಸಭೆಗೆ ಹಾಜರಾಗಿ ಅಂತಿಮ ವರದಿಗೆ ಸಹಿ ಹಾಕಬೇಕು ಎಂದು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ವರದಿಯ ಅಂತಿಮ ಪ್ರತಿಯನ್ನು ಕುಮಾರಸ್ವಾಮಿಗೆ ಡಿಕೆಶಿ ಹಸ್ತಾಂತರಿಸಿದ್ದಾರೆ.

ವಿದ್ಯುತ್ ಖರೀದಿ ಹಗರಣದ ವಿಚಾರದಲ್ಲಿ ಖುದ್ದು ಕುಮಾರಸ್ವಾಮಿ ಅವರ ಜೆಪಿ ನಗರ ನಿವಾಸಕ್ಕೆ ಡಿಕೆಶಿ ಭೇಟಿ ನೀಡುವ ಮೂಲಕ ಗೌಡರ ಕುಟುಂಬಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಹಾವು-ಮುಂಗಸಿಯಂತಿದ್ದ ಡಿಕೆಶಿ ಮತ್ತು ಕುಮಾರಸ್ವಾಮಿ ಈಗ ಒಂದಾಗಿದ್ದಾರೆ. ಕಲ್ಲಿದ್ದಲು ಮಸಿ ತೊಳೆದುಕೊಳ್ಳಲು ಹಳೆಯ ಕಡತ ಕೊಡವಿ ತೆಗೆದು ಮುಯ್ಯಿಗೆ ಮುಯ್ಯಿ ತೀರಿಸಲು ಮುಂದಾಗಿದ್ದಾರೆ.ಸಂಬಂಧಿತ ಟ್ಯಾಗ್ಗಳು

Kannada News Karnataka ಕಾರ್ಯತಂತ್ರ ಅಸ್ತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ