‘ರೈಲ್ವೆಯಿಂದ ಕೊಡಗಿಗೆ ಅನುಕೂಲವಿಲ್ಲ’

Kannada News

27-10-2017

ಬೆಂಗಳೂರು: ಕೊಡುಗು ಜಿಲ್ಲಾ ವ್ಯಾಪ್ತಿ ರೈಲ್ವೇ ಹಳಿ ಯೋಜನೆಯನ್ನು ಕೈಬಿಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ಹೇಳಿದ್ದಾರೆ.

ನಗರದಲ್ಲಿಂದು ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ 59ನೇ ವಾರ್ಷಿಕೋತ್ಸವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈಲ್ವೇ ಹಳಿ ಕೊಡುಗು ಜಿಲ್ಲಾ ವ್ಯಾಪ್ತಿ ಹಾಕುವ ಬಗ್ಗೆ ಈಗಗಲೇ ಪ್ರಸ್ತಾವನೆ ಬಂದಿದೆ. ಆದರೆ, ಇದನ್ನು ಕೈಬಿಡಬೇಕೆಂದು ಕೇಂದ್ರದ ರೈಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಅಲ್ಲದೆ, ಈ ಹಳಿಯಿಂದ ಕೊಡುಗು ಜಿಲ್ಲೆಯವರಿಗೆ ಯಾವುದೇ ಅನುಕೂಲ ಇಲ್ಲ ಎಂದು ತಿಳಿಸಿದರು.

ಕೊಡಗು ಜಿಲ್ಲೆಯೂ ಪ್ರವಾಸಿಗರ ತಾಣವಾಗಿದ್ದು, ದಿನೇ ದಿನೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಜಿಲ್ಲಾ ವ್ಯಾಪ್ತಿ ಪ್ರವಾಸಿಗರಿಗೆ ತಂಗುದಾಣ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಫಿ ಬೋರ್ಡ್ ಅಧ್ಯಕ್ಷ ಎಂ.ಎಸ್.ಭೋಜೆಗೌಡ ಮಾತನಾಡಿ, ಕಾಫಿಗೆ ಇನ್ನೂರು ವರ್ಷಗಳ ಇತಿಹಾಸ ಇದೆ. ಹತ್ತು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕಾಫಿ ಬೆಳೆ ಇದೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಂಬಲ ದೊರೆತರೆ ಮಾತ್ರ ಈ ಉದ್ಯಮ ಉಳಿಯಲಿದೆ ಎಂದು ತಿಳಿಸಿದರು.

1992ರಲ್ಲಿ ಕಾಫಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಲಾಯಿತು. ಶೇ.30ರಷ್ಟು ಆಂತರಿಕ ಮಾರುಕಟ್ಟೆಗಾಗಿ ನಿಗದಿಸಿ ಉಳಿದ ಶೇ.70ರಷ್ಟು ಕಾಫಿಯನ್ನು ಮುಕ್ತ ಮಾರುಕಟ್ಟೆಗೆ ಬಿಡಲಾಯಿತು. ಒಂದು ವರ್ಷದಲ್ಲಿ ಪೂರ್ಣ ಮುಕ್ತಗೊಳಿಸಲಾಯಿತು. ಈಗ ನಮ್ಮ ಬೆಳೆಗಾರರು ಪ್ರಪಂಚದ ಯಾವುದೇ ಭಾಗದಲ್ಲಿ ಬೇಕಾದರೂ ಕಾಫಿ ಮಾರಾಟ ಮಾಡಬಹುದು ಎಂದ ಭೋಜೇಗೌಡ, ಕಾಫಿಗೆ ಸಂಬಂಧಪಟ್ಟ ಎಲ್ಲಾ ಸಂಘ, ಸಂಸ್ಥೆಗಳು ಒಟ್ಟಾಗಿ ಹೋರಾಟ ಮಾಡುವುದರಿಂದ ಕಾಫಿಯನ್ನು ಮುಂದೆ ತರಬಹುದು ಎಂದು ತಿಳಿಸಿದರು.

 ಕೆಪಿಎ ಅಧ್ಯಕ್ಷ ಡಾ.ಎಂ.ಎಂ.ಚೆನ್ನಿಗಪ್ಪ ಮಾತನಾಡಿ,  ಕಳೆದ 150 ವರ್ಷಗಳಿಂದಲೂ ಹಲವು ಏಳು, ಬೀಳು, ಸಮಸ್ಯೆಗಳಿಂದ ನಲುಗುತ್ತಿರುವ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಇದುವರೆಗೆ ಯಾವುದೇ ಸರಕಾರಗಳಿಗೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಡಾನೆ ಹಾವಳಿ, ಮಾರುಕಟ್ಟೆ ಸಮಸ್ಯೆಗಳು ಒಂದೆಡೆಯಾದರೆ ಬೆಳೆಗಳಿಗೆ ತಗಲುವ ರೋಗಬಾಧೆ ಹಾಗೂ ಅರಣ್ಯ ಇಲಾಖೆ ಕ್ರಮಗಳು ಕಾಫಿ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ನೂಕಿದೆ ಎಂದು ಅವರು ಹೇಳಿದರು. ಸಮಾವೇಶದಲ್ಲಿ ರಾಜ್ಯ ಸಭಾ ಸದಸ್ಯ ಡಾ.ಎಂ.ವಿ.ರಾಜೀವ್ ಗೌಡ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎಲ್.ಶಂಕರ್, ಉಪಾಧ್ಯಕ್ಷ ಎಚ್.ಟಿ.ಪ್ರಮೋದ್ ಸೇರಿ ಪ್ರಮುಖರಿದ್ದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ