'ಕಾಮಿ ಸ್ವಾಮಿಯನ್ನು ಹೊರಹಾಕಿ': ಭಕ್ತರ ಪಟ್ಟು !

Kannada News

27-10-2017

ಬೆಂಗಳೂರು: ಚಿತ್ರನಟಿಯೊಬ್ಬರ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ದಯಾನಂದ ಅಲಿಯಾಸ್ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿಯನ್ನು ಮಠದಿಂದ ಹೊರಹಾಕುವಂತೆ ಆಗ್ರಹಿಸಿ, ಭಕ್ತರು ಹುಣಸಮಾರನಹಳ್ಳಿಯ ಜಂಗಮ ಮಠದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹುಣಸಮಾರನಹಳ್ಳಿಯ ಮಠದ ಆವರಣದಲ್ಲಿ ಇಂದು ಬೆಳಿಗ್ಗೆಯಿಂದಲೇ ಸೇರಿರುವ ನೂರಾರು ಭಕ್ತರು ಕೂಡಲೇ ಬಾಳೇಹೊನ್ನೂರು ಮಠದ ರಂಭಾಪುರಿ ಶ್ರೀಗಳು ಹಾಗೂ ಶ್ರೀಶೈಲ ಮಠದ ಶ್ರೀಗಳು ಆಗಮಿಸಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ದಯಾನಂದ್‍ ನನ್ನು ಹೊರಹಾಕಿ ಸಚ್ಚಾರಿತ್ರ್ಯವುಳ್ಳ ಸ್ವಾಮೀಜಿಯೊಬ್ಬರನ್ನು ನೇಮಿಸಿಬೇಕು ಎಂದು ಆಗ್ರಹಿಸಿದ್ದಾರೆ.

ಶ್ರೀಶೈಲ ಮಠದ ಶಾಖಾಮಠವಾಗಿರುವ ಜಂಗಮ ಮಠದಲ್ಲಿ ಹಲವು ದಿನಗಳಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ, ಅದನ್ನು ನೋಡಿಕೊಂಡು ಸುಮ್ಮನಿರುವುದು ಸಾಧ್ಯವಿಲ್ಲ ಕೂಡಲೇ ರಂಭಾಪುರಿ ಶ್ರೀಗಳು ಹಾಗೂ ಶ್ರೀಶೈಲ ಮಠದ ಶ್ರೀಗಳು ಧಾವಿಸಿ ಭಕ್ತರ ಮನವಿಗೆ ಸ್ಪಂದಿಸಿ ಮಠದ ಗೌರವನ್ನು ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇಬ್ಬರು ಸ್ವಾಮೀಜಿಗಳು ಬರುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಪ್ರತಿಭಟನಾ ನಿರತ ಭಕ್ತರು ಮತ್ತು ಟ್ರಸ್ಟ್ ಸದಸ್ಯರು ಸ್ವಾಮೀಜಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗ ತೊಡಗಿದ್ದು, ಇನ್ನು ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ವ್ಯವಸ್ಥೆ ಒದಗಿಸಲಾಗಿದೆ.

ಈ ನಡುವೆ ಮಠದಿಂದ ನಾಪತ್ತೆಯಾಗಿರುವ ದಯಾನಂದ್ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ, ಅಲ್ಲದೇ ಅವರ ವಿರುದ್ಧ ಯಾರೊಬ್ಬರೂ ದೂರು ನೀಡಿಲ್ಲ ಹಾಗಾಗಿ ಅವರ ಪತ್ತೆಕಾರ್ಯಕ್ಕೆ ಪೊಲೀಸರು ಮುಂದಾಗಿಲ್ಲ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ದಯಾನಂದ್ ಅವರ ಸಹೋದರ ಸಚ್ಚಿದಾನಂದ ಅವರು ನಮ್ಮ ಕುಟುಂಬವನ್ನು ಮಠದಿಂದ ಹೊರಹಾಕಲು ಟ್ರಸ್ಟ್ ಕೆಲ ಸದಸ್ಯರು ಸೇರಿ ಹಲವರು ಪ್ರಯತ್ನ ನಡೆಸಿದ್ದಾರೆ, ನಮಗೆ ರಕ್ಷಣೆ ನೀಡುವಂತೆ ದೂರು ನೀಡಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಠದ ಟ್ರಸ್ಟ್ ನ  ಸದಸ್ಯ ಮಹೇಶ್ ಎಂಬುವರು ಮಠದಲ್ಲಿ ಅನೈತಿಕ ಕೃತ್ಯಗಳು ನಡೆಯುತ್ತಿವೆ ಮಠಕ್ಕೆ ಸೇರಿದ ಕೋಟ್ಯಾಂತರ ರೂಗಳ ಆಸ್ತಿ ಮಾರಾಟ ಮಾಡಲಾಗಿದ್ದು, ಇದಕ್ಕೆಲ್ಲಾ ಕಾರಣರಾಗಿರುವ ದಯಾನಂದ್‍ ನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಅದರ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇದರ ನಡುವೆಯೇ ಹೊಸ ವಿಚಾರ ಏನೆಂದರೆ, ದಯಾನಂದ ಅಲಿಯಾಸ್ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿಯನ್ನು ನಟಿಯೊಬ್ಬಳ ಜೊತೆ ಲೈಂಗಿಕ ಕ್ರೀಯೆ ನಡೆಸಲು ಬಿಟ್ಟು ಅದನ್ನು ರಹಸ್ಯ ಕ್ಯಾಮಾರದಲ್ಲಿ ಸೆರೆಹಿಡಿದು ಇಲ್ಲಿಯವರೆಗೆ ಸುಮಾರು 3ಕೋಟಿಯವರೆಗೆ ಸುಲಿಗೆ ಮಾಡಿರುವುದಾಗಿಯೂ, ದಯಾನಂದ್ ಮಠಕ್ಕೆ ಸೇರಿದ ಆಸ್ತಿಯನ್ನು ಬೇರೊಬ್ಬರ ಹೆಸರಿಗೆ ಮಾಡಲು ನಿರಾಕರಿಸಿದಾಗ ಈ ಸಿಡಿಯನ್ನು ಮಾದ್ಯಮಗಳಿಗೆ ಸೋರಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ದಯಾನಂದ ಅಲಿಯಾಸ್ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿಯು ನಟಿಯೊಬ್ಬರ ಜೊತೆ ಕಾಮದಾಟ ನಡೆಸಿದ ಸಿಡಿ ಮಾಡಿರುವುದು ಗಮನಕ್ಕೆ ಬಂದ ಕೂಡಲೇ ಅಂದಿನ ನಗರ ಪೊಲೀಸ್ ಆಯುಕ್ತರಾಗಿದ್ದ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಸಿಡಿ ಬಯಲಾಗದಂತೆ ತಡೆಹಿಡಿದು ಸಂಧಾನ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ

ಕಾಮಿ ದಯಾನಂದ ಹಾಗೂ ಸಿಡಿ ಮಾಡಿ ಬ್ಲಾಕ್‍ಮೇಲ್ ಮಾಡುತ್ತಿದ್ದವರನ್ನು ಕಮಿಷನರ್ ಆಗಿದ್ದ ಜ್ಯೋತಿಪ್ರಕಾಶ್ ಮಿರ್ಜಿ ಅವರು ತಮ್ಮ ಕಚೇರಿಗೆ ಕರೆಸಿಕೊಂಡು ಸಂಧಾನ ನಡೆಸಿ ಸಿಡಿ ಬಯಲಾಗುವುದನ್ನು ತಡೆದಿದ್ದರು ಎಂದು ಮಠದ ಭಕ್ತರೊಬ್ಬರು ತಿಳಿಸಿದ್ದಾರೆ.

ದಯಾನಂದನ ಕಾಮದಾಟದ ಹಿಂದೆ ಸಂಬಂಧಿಕರ ಕೈವಾಡ ಇದೆ ಎನ್ನಲಾಗುತ್ತಿದ್ದು, ಮಠದ ಆಸ್ತಿ ಹೊಡೆಯಲು ಸಂಬಂಧಿಕರಾದ ಮಲ್ಲಿಕಾರ್ಜುನ, ಹಿಮಾಚಲ, ಚಂದ್ರು  ಹನಿಟ್ರ್ಯಾಪ್ ಮಾಡಿದ್ದರೆಂಬ ಆರೋಪ ಕೇಳಿ ಬಂದಿದೆ. ಇವರೆಲ್ಲಾ ಮಠದಲ್ಲೇ ಕೆಲಸ ಮಾಡುತ್ತಿದ್ದರು ಅವರೇ ಕೃತ್ಯ ನಡೆಸಿದ್ದಾರೆ ಎಂದು  ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ರಾಮಣ್ಣ ಗಂಭೀರ ಆರೋಪ ಮಾಡಿದ್ದಾರೆ.

ದಯಾನಂದನ ಸಿಡಿ ಮಾಡಿ ಬ್ಲಾಕ್‍ಮೇಲ್ ಮಾಡುವ ಮೂಲಕ  ಕೋಟಿಗಟ್ಟಲೆ ಹಣ ಲೂಟಿ ಹೊಡೆದಿದ್ದಾರೆ, ಈಗ ಪ್ರತಿಭಟನೆ ಮಾಡುತ್ತಿರುವವರೇ ಹೀಗೆಲ್ಲಾ ಮಾಡಿದ್ದು ಎಂದು ರಾಮಣ್ಣ ದೂರಿದ್ದಾರೆ.

ಮಿರ್ಜಿ ಸ್ಪಷ್ಟನೆ: ಈ ಬಗ್ಗೆ ಸ್ಪಷ್ಟನೆ ನೀಡಿರುವ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ವೀರಶೈವ ಲಿಂಗಾಯತ ಸಮುದಾಯವಾದ್ದರಿಂದ ನಾನು ಮಾತುಕತೆಗೆ ಹೋಗಿದ್ದೆ. ಮಠದ ಆಸ್ತಿ ಸಂಬಂಧ ಜಗಳ ತೆಗೆದುಕೊಂಡು ಕೆಲವರು ನನ್ನ ಬಳಿ ಬಂದಿದ್ದರು. ಎರಡು ಕಡೆಯವರು ಬಂದು ಕೆಲ ವಿಚಾರಗಳ ಬಗ್ಗೆ  ಚರ್ಚೆ ನಡೆಸಿದ್ದರು ಎಂದು ಹೇಳಿದ್ದಾರೆ.

ದಯಾನಂದ ಸ್ವಾಮೀಜಿ ಮಠದ ಉತ್ತರಾಧಿಕಾರಿಯಾಗಲು ಯೋಗ್ಯರಿಲ್ಲ, ಸಂಸ್ಕೃತ ಜ್ಞಾನ ಇಲ್ಲ. ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದಿದ್ದರು. ಈ ವೇಳೆ ಸಿಡಿ ಬಗ್ಗೆಯೂ ಪ್ರಸ್ತಾಪವಾಗಿತ್ತು. ನಾನು ಸಹ ಈ ಬಗ್ಗೆ ಸ್ವಾಮೀಜಿಗೆ ಕೇಳಿದ್ದೆ. ಆಗ ಅಂತಹ ಯಾವ ಕೆಲಸವನ್ನೂ ತಾನು ಮಾಡಿಲ್ಲ ಎಂದಿದ್ದರು. ಸಿಡಿ ಇದ್ದರೂ ಅದನ್ನು ಮಾರ್ಫ್ ಮಾಡಿದ್ದಾರೆ ಎಂದು ಸ್ವಾಮಿ ಹೇಳಿದ್ದರು ಎಂದು ಮಿರ್ಜಿ ವಿವರಿಸಿದ್ದಾರೆ.

ಇದೆಲ್ಲ 2-3 ತಿಂಗಳ ಹಿಂದೆ ನಡೆದ ಘಟನೆಗಳು. ಸ್ವಾಮೀಜಿ ವಿಡಿಯೋವನ್ನು ನಾನು ಮಾಧ್ಯಮಗಳಲ್ಲಿ ನೋಡಿದೆ. ಅದು ಸರಿಯಲ್ಲ, ಸ್ವಾಮೀಜಿ ಕೂಡಲೇ ಪೀಠ ತ್ಯಾಗ ಮಾಡಬೇಕು. ಇಂತಹವರು ಮಠದಲ್ಲಿ ಇರೋದು ಸರಿಯಲ್ಲ. ಜಮೀನು ವಿವಾದ ಇದ್ದಲ್ಲಿ ಕೋರ್ಟ್‍ನಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ