ನಾಳೆಯಿಂದ: ರಾಷ್ಟ್ರಮಟ್ಟದ ಜೈನ ಯುವ ಸಮ್ಮೇಳನ !

Kannada News

27-10-2017

ಹಾಸನ: ಶ್ರವಣಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವ ಅಂಗವಾಗಿ ಇದೇ ತಿಂಗಳ 28 ಮತ್ತು 29ರಂದು ಇಲ್ಲಿನ ಗೊಮ್ಮಟನಗರದ ಸಾಮ್ರಾಟ್ ಚಂದ್ರಗುಪ್ತ ಮೌರ್ಯ ಸಭಾ ಮಂಟಪದಲ್ಲಿ ರಾಷ್ಟ್ರಮಟ್ಟದ ಜೈನ ಯುವ ಸಮ್ಮೇಳನ ಆಯೋಜಿಸಲಾಗಿದೆ.

ಜೈನ ಮಠದ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ `ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ' ಎಂಬ ಧ್ಯೇಯ ವಾಕ್ಯದೊಂದಿಗೆ ದಿಗಂಬರ ಜೈನ ವ್ಯವಸ್ಥಾಪಕ ಸಮಿತಿ ಸಮ್ಮೇಳನ ಆಯೋಜಿಸಿದ್ದು, ಅಕ್ಟೋಬರ್ 28ರಂದು ಬೆಳಗ್ಗೆ 9.30ಕ್ಕೆ ಚಾವುಂಡರಾಯ ಸಭಾಮಂಟಪದಲ್ಲಿ ಮಂಗಲ ಕಲಶ ಸ್ಥಾಪನೆ ನೆರವೇರಲಿದೆ. 10 ಗಂಟೆಗೆ ಮೆರವಣಿಗೆ, 10.45ಕ್ಕೆ ಸಾಮ್ರಾಟ್ ಚಂದ್ರಗುಪ್ತ ಮೌರ್ಯ ಸಭಾ ಮಂಟಪದಲ್ಲಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶಯ ಭಾಷಣ ನುಡಿಯಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಸಮ್ಮೇಳನ ಉದ್ಘಾಟಿಸಲಿದ್ದು, ಅಂತಾರಾಷ್ಟ್ರೀಯ ಲೇಖಕ ಉಜ್ವಲ್ ಪಾಟ್ನಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮ್ಮೇಳನದಲ್ಲಿ ವೃತ್ತಿ ಮಾರ್ಗದರ್ಶನ, ಆಡಳಿತಾತ್ಮಕ ಸೇವೆ ಮತ್ತು ಯುವಜನತೆ, ಭಾವನೆಗಳ ಪರಿಣಾಮ ಏನಾಗಬಹುದು, ಆಂಗ್ಲ ಭಾಷೆಯಲ್ಲಿ ಕ್ಷಮೆಯ ಶಕ್ತಿ, ಜೈನ ಜನಗಣತಿ, ಕನೆಕ್ಟಿಂಗ್ ಜನರೇಷನ್ ಹಾಗೂ ಸಂಪರ್ಕ ಪೀಳಿಗೆ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ. ಸಂಜೆ 6 ಗಂಟೆಗೆ ಹಾಸನ ಜಿಲ್ಲೆಯ ವಿವಿಧ ಸಮುದಾಯದ ವಿವಿಧ ಕ್ಷೇತ್ರಗಳ 9 ಯುವ ಪ್ರತಿಭೆಗಳಿಗೆ ಆದರ್ಶ ಯುವ ಪ್ರಶಸ್ತಿ ಹಾಗೂ ರಾಷ್ಟ್ರದ ಜೈನ ಸಮುದಾಯದ 73 ಯುವ ಸಾಧಕರಿಗೆ ಆದರ್ಶ ಜೈನ ಯುವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ