ಗೊಂದಲದಲ್ಲಿ ಬಿಎಸ್ ವೈ ಪುತ್ರ..?

Kannada News

27-10-2017

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆದ್ದು ಅಧಿಕಾರದ ಗದ್ದುಗೆ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಉತ್ತರ ಕರ್ನಾಟಕದ ತೇರದಾಳ ಸೇರಿದಂತೆ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಯುವ ನಿರ್ಧಾರ ಬದಲಿಸಿದ್ದು, ಶಿಕಾರಿಪುರದಿಂದಲೆ ಕಣಕ್ಕಿಳಿಯುತ್ತಿದ್ದಾರೆ ಎನ್ನಲಾಗಿದೆ. ಶಿಕಾರಿಪುರದ ಬಗ್ಗೆ ಯಡಿಯೂರಪ್ಪ ಭಾವನಾತ್ಮಕ ಸಂಬಂಧ ಹೊಂದಿರುವ ಕಾರಣ ಆ ಕ್ಷೇತ್ರವನ್ನು ತೊರೆಯದಿರಲು ನಿರ್ಧರಿಸಿದ್ದಾರೆ.

ಯಡಿಯೂರಪ್ಪ ಅವರ ಈ ನಿರ್ಧಾರ, ಅವರ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಪೇಚಿಗೆ ಸಿಲುಕುವಂತೆ ಮಾಡಿದೆ. ಈ ಹಿಂದೆ ತಮ್ಮ ತಂದೆಯವರಿಗಾಗಿ ಲೋಕಸಭಾ ತೊರೆದಿದ್ದ ರಾಘವೇಂದ್ರ ಈಗ ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಇಂಗಿತ ಹೊಂದಿದ್ದರು. ಆದರೆ ಇತ್ತೀಚೆಗೆ ಬಿಜೆಪಿ ಸೇರಿರುವ ಕುಮಾರ್ ಬಂಗಾರಪ್ಪ ಅವರು ಲೋಕಸಭೆಗೆ ಸ್ಪರ್ಧಿಸುವ ಇಚ್ಚೆ ಹೊಂದಿದ್ದಾರೆ, ಪಕ್ಷ ಸೇರುವ ಮುನ್ನ ಈ ಸಂಭಂದ ಮಾತುಕತೆ ನಡೆದಿವೆ ಹೀಗಾಗಿ ರಾಘವೇಂದ್ರ ಬಿಕ್ಕಟ್ಟಿಗೆ ಸಿಲುಕಿದ್ದಾರೆ.

ಭದ್ರಾವತಿಯಿಂದ ವಿಧಾನಸಭೆಗೆ ಸ್ಪರ್ಧಿಸುವ ಕುರಿತು ಪರಿಶೀಲನೆ ನಡೆಸಿದ್ದು ಆ ಕ್ಷೇತ್ರ ಅಷ್ಟೊಂದು ಸುರಕ್ಷಿತವಲ್ಲ ಎಂಬ ವರದಿಗಳು ಅವರನ್ನು ಚಿಂತೆಗೀಡು ಮಾಡಿವೆ. ಹೀಗಾಗಿ ಅವರು  ಹಾವೇರಿ ಜಿಲ್ಲೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ರಾಘವೇಂದ್ರ ಅವರನ್ನು ರಾಣೆಬೆನ್ನೂರಿನಿಂದ ಕಣಕ್ಕಿಳಿಸುವ ಮೂಲಕ ಹಾವೇರಿ ಜಿಲ್ಲೆಯ ಸುತ್ತಮುತ್ತಲಿನ ಮೂರರಿಂದ ನಾಲ್ಕು ಜಿಲ್ಲೆಗಳಲ್ಲಿ ಅಧಿಕ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸಿದೆ.

ಬಿಜೆಪಿಯಿಂದ ಇಲ್ಲಿ ಎರಡು ಬಾರಿ ಗೆದ್ದಿದ್ದ ಮಾಜಿ ಶಾಸಕ ಜಿ.ಶಿವಣ್ಣ ಮೃತರಾಗಿರುವುದರಿಂದ, ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳೂ ಇಲ್ಲ. ಲಿಂಗಾಯತರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ರಾಘವೇಂದ್ರ ಕಣಕ್ಕೆ ಇಳಿದರೆ ಸುಲಭವಾಗಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರ. ಅಲ್ಲದೆ  ಕಾಂಗ್ರೆಸ್ ಶಾಸಕ ಕೆ.ಬಿ.ಕೋಳಿವಾಡ ಅವರಿಗೆ ಆಡಳಿತ ವಿರೋಧಿ ಅಲೆ ಇದೆ ಮೇಲಾಗಿ ಅವರು ಚುನಾವಣೆಗೆ  ಸ್ಪರ್ಧಿಸುವ ಸಾಧ್ಯತೆ ಇಲ್ಲ, ಹೀಗಾಗಿ ರಾಘವೇಂದ್ರ ಇಲ್ಲಿಂದ ಕಣಕ್ಕೀಳಿಯುಬುದು ಸೂಕ್ತ ಎನ್ನುವುದು ಬಿಜೆಪಿ ಚಿಂತಕರ ಚಾವಡಿಯ ಅಭಿಪ್ರಾಯ. ಇದಕ್ಕೆ ಪೂರಕವೆಂಬಂತೆ ಈಗಾಗಲೇ ರಾಘವೇಂದ್ರ ಅವರು ವಿಸ್ತಾರಕ್ ಕಾರ್ಯಕ್ರಮದಡಿ ರಾಣೆಬೆನ್ನೂರು ಕ್ಷೇತ್ರಕ್ಕೆ ಹಲವು ಬಾರಿ ಭೇಟಿ ನೀಡಿ ಕಾರ್ಯಕರ್ತರನ್ನು ಸಂಪರ್ಕಿಸುವ ಕೆಲಸ ಮಾಡಿದ್ದಾರೆ. ಕಾರ್ಯಕರ್ತರಿಂದ ಕ್ಷೇತ್ರದ ಬಗ್ಗೆ ಮಾಹಿತಿಯನ್ನೂ ಪಡೆದಿದ್ದಾರೆ. ಕೊನೆ ಕ್ಷಣದಲ್ಲಿ ಯಡಿಯೂರಪ್ಪ ಶಿಕಾರಿಪುರ ಬಿಟ್ಟು ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಂಡರೆ, ರಾಘವೇಂದ್ರ ಶಿಕಾರಿಪುರದಲ್ಲೇ ಉಳಿಯುತ್ತಾರೆ ಎಂದು ಮೂಲಗಳು ಹೇಳಿವೆ.

2013 ರ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರಿನಲ್ಲಿ ಕೆ.ಬಿ ಕೋಳಿವಾಡ ಪಕ್ಷೇತರ ಅಭ್ಯರ್ಥಿ ಆರ್.ಶಂಕರ್ ವಿರುದ್ಧ ಅತಿ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಶಂಕರ್ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದು, ಅಕಸ್ಮಾತ್ ಕಾಂಗ್ರೆಸ್ ಟಿಕೆಟ್ ಮೇಲೆ ಶಂಕರ್ ಸ್ಪರ್ಧಿಸಿದರೆ ತಮಗೆ ಕಷ್ಟವಾಗಬಹುದು ಎಂಬ ಸಣ್ಣ ಅಳುಕು ರಾಘವೇಂದ್ರ ಅವರನ್ನು ಕಾಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ