ಸ್ಥಾಯಿ ಸಮಿತಿಗಳ ಚುನಾವಣೆ ಮುಂದೂಡಿಕೆ

Kannada News

27-10-2017 256

ಬೆಂಗಳೂರು: ನಾಯಕರ ನಡುವಿನ ಸಮನ್ವಯದ ಕೊರತೆ, ಆಕಾಂಕ್ಷಿಗಳ ತೀವ್ರ ಲಾಬಿಯಿಂದ ಇಂದು ನಡೆಯಬೇಕಿದ್ದ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆಯ ಚುನಾವಣೆಯನ್ನು ಮುಂದೂಡಲಾಗಿದೆ.

ಪೂರ್ವ ನಿಗದಿಯಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಜಯಂತಿ ಅವರು ಇಂದು ಬೆಳಿಗ್ಗೆ ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಿದರು, ಬೆಳಿಗ್ಗೆ 8.30ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಯಿತು ಇದಕ್ಕಾಗಿ ಬೆಳಿಗ್ಗೆ 9.30ರವರೆಗೂ ಅವಕಾಶ ನೀಡಲಾಗಿತ್ತು  ಆದರೆ, ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ನ ಒಬ್ಬರೂ ನಾಮಪತ್ರ ಸಲ್ಲಿಸಲಿಲ್ಲ ಹೀಗಾಗಿ, ಪ್ರಾದೇಶಿಕ ಆಯುಕ್ತರು ಚುನಾವಣೆಯನ್ನು ಮುಂದೂಡಿದರು.

ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸಿದ್ಧತೆ ಮಾಡಿಕೊಂಡಿಲ್ಲ. ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಯಾರು ಆಗಬೇಕು ಎಂಬುದರ ಪಟ್ಟಿಯನ್ನೂ ಸಿದ್ಧಪಡಿಸಿಲ್ಲ, ಚುನಾವಣೆಯನ್ನು ಒಂದು ವಾರ ಮುಂದೂಡುವುದು ಒಳಿತು ಎಂದು ಮೂರೂ ಪಕ್ಷಗಳ ಪಾಲಿಕೆ ಸದಸ್ಯರು ಹಿರಿಯ ನಾಯಕರ ಬಳಿ ಮನವಿ ಮಾಡಿದ್ದರು. ಹೀಗಾಗಿ, ಶುಕ್ರವಾರ ಬೆಳಿಗ್ಗೆ ನಾಮಪತ್ರ ಸಲ್ಲಿಕೆ ಮಾಡದಿರಲು ನಿರ್ಧರಿಸಲಾಗಿತ್ತು.

ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅಭ್ಯರ್ಥಿ ಆಯ್ಕೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ಸಭೆ ನಡೆಯಿತು. ಆದರೆ,  ಒಮ್ಮತ ಮೂಡದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರು ನಾಮಪತ್ರ ಸಲ್ಲಿಕೆಯಿಂದ ದೂರ ಉಳಿಯುವ ತೀರ್ಮಾನ ಕೈಗೊಳ್ಳಲಾಯಿತು.

`ಕಾಂಗ್ರೆಸ್‍ನಲ್ಲಿ ಮೇಯರ್ ಸ್ಥಾನ ಆಕಾಂಕ್ಷಿಗಳಾಗಿದ್ದ ವೇಲು ನಾಯ್ಕರ್, ಗೋವಿಂದರಾಜು, ಆಂಜನಪ್ಪ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಜಾಕಿರ್ ಹುಸೇನ್, ಆರ್ಯ ಶ್ರೀನಿವಾಸ್ ಅವರೂ ರೇಸ್‍ನಲ್ಲಿ ಇದ್ದಾರೆ. ಆದರೆ, ಹಿರಿಯ ನಾಯಕರು ಮಾರ್ಗಸೂಚಿಗಳನ್ನು ರೂಪಿಸಲಿದ್ದು, ಅದರನ್ವಯ ಸಮಿತಿಗಳ ಅಧ್ಯಕ್ಷರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ