‘ಕನ್ನಡಿಗರಿಗೆ 100ರಷ್ಟು ಮೀಸಲಾತಿ ನೀಡಿ’

Kannada News

27-10-2017

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನಯಾನ ಸಂಸ್ಥೆಗಳಲ್ಲಿರುವ ಶೇಕಡ 100ರಷ್ಟು ಸಿ ಮತ್ತು ಡಿ ವೃಂದದ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೋ: ಎಸ್.ಜಿ.ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಏರ್‍ಪೋರ್ಟ್ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಂಪೇಗೌಡ ವಿಮಾನ ನಿಲ್ದಾಣದೊಂದಿಗೆ 37 ಏರ್‍ಲೈನ್ಸ್ ಸಂಸ್ಥೆಗಳು ಸಂಪರ್ಕವನ್ನಿಟ್ಟುಕೊಂಡಿದ್ದು, ಆ ವಿಮಾನಯಾನ ಸಂಸ್ಥೆಗಳ ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಶೇಕಡ 60 ರಷ್ಟು ಕನ್ನಡಿಗರು ಮಾತ್ರ  ಉದ್ಯೋಗಗಳನ್ನು ಹೊಂದಿದ್ದಾರೆ. ಇನ್ನುಳಿದ ಹುದ್ದೆಗಳಲ್ಲಿಯು ಕನ್ನಡಿಗರನ್ನೇ ನೇಮಕ ಮಾಡಬೇಕೆಂದರಲ್ಲದೆ.  ಎ ಮತ್ತು ಬಿ ಹುದ್ದೆಗಳಲ್ಲಿ ಶೇಕಡ 30 ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕೆಂದರು.

ಪ್ರತಿ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ದಸರಾ, ಕನ್ನಡ ರಾಜ್ಯೋತ್ಸವ ಸೇರಿದಂತೆ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತಿದೆ, ನಾಮಫಲಕ ಹಾಗೂ ಸಂಕೇತ ಫಲಕಗಳಲ್ಲಿ ಕನ್ನಡವನ್ನು ಬಳಸಲಾಗುತ್ತಿದೆ ಎಂದು ಕೆಂಪೇಗೌಡ ವಿಮಾನ ನಿಲ್ದಾಣದ ಕನ್ನಡ ಪ್ರಮೋಷನ್ ಸಮಿತಿಯ ಉಪಾಧ್ಯಕ್ಷರಾದ ವೆಂಕಟರಮಣ ತಿಳಿಸಿದಾಗ, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ ಕರ್ನಾಟಕ ಸಂಸ್ಕೃತಿ, ಕನ್ನಡ ಪ್ರಜ್ಞೆ ಮೂಡಿಸಲು ಪತ್ರಿಕೆ, ಪುಸ್ತಕ, ಮೆನು ಜಾಹೀರಾತುಗಳಲ್ಲಿ ಕನ್ನಡವನ್ನು ಬಳಸಬೇಕು, ಕನ್ನಡ ಚಲನಚಿತ್ರ ಗೀತೆಗಳನ್ನು ಕೇಳಿಸಬೇಕು ಹಾಗೂ ಅತ್ತ್ಯುತ್ತಮ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಬೇಕು. ಇದರಿಂದಾಗಿ ಕನ್ನಡ ಅನುಷ್ಠಾನವು ಇನ್ನಷ್ಟು ಪರಿಣಾಮಕಾರಿಯಾಗುವುದಲ್ಲದೆ, ವಿಮಾನ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಸಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯನಿರ್ವಹಿಸಿದಂತಾಗುತ್ತದೆ ಎಂದರು.

ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕೃತ ವೆಬ್‍ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು, ವಿಮಾನ ನಿಲ್ದಾಣದಲ್ಲಿ ಕನ್ನಡ ಪುಸ್ತಕ ಮಾರಾಟ ಮಳಿಗೆ ಆರಂಭಿಸಬೇಕೆಂದರಲ್ಲದೇ ಸಿಬ್ಬಂದಿಗಳು ಕನ್ನಡದಲ್ಲಿ ವ್ಯವಹರಿಸಬೇಕು, ಅನ್ಯ ರಾಜ್ಯದ ಸಿಬ್ಬಂದಿಗಳಿಗೆ ಕನ್ನಡ ಕಲಿಕಾ ತರಬೇತಿಗಳನ್ನು ಆಯೋಜಿಸಬೇಕೆಂದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರುಗಳಾದ ಸಾಹಿತಿ ಡಾ|| ಸಿದ್ದಲಿಂಗಯ್ಯ, ಮುಖ್ಯಮಂತ್ರಿ ಚಂದ್ರು, ರಿಜಿಸ್ಟಾರ್ ಮುರಳೀಧರ್ ಸೇರಿದಂತೆ ಕೆಂಪೇಗೌಡ ವಿಮಾನ ನಿಲ್ದಾಣದ ಕನ್ನಡ ಪ್ರಮೋಷನ್ ಸಮಿತಿಯ ಸದಸ್ಯರು  ಉಪಸ್ಥಿತರಿದ್ದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ