ಕಂಬಳ: 'ಯಾವುದೇ ಅಡ್ಡಿ ಆತಂಕ ಇಲ್ಲ'

Kannada News

27-10-2017 418

ಬೆಂಗಳೂರು:  ಕಂಬಳ ಸುಗ್ರೀವಾಜ್ಞೆಗೆ ರಾಷ್ಟ್ರಪತಿಯವರು ಅಂಕಿತ ಹಾಕಿರುವುದರಿಂದ ಮುಂದಿನ ತಿಂಗಳು ನವೆಂಬರ್ ನಿಂದ 2018 ಮಾರ್ಚ್ ಅಂತ್ಯದವರೆಗೆ ನಡೆಯಲಿರುವ ಕಂಬಳ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಆತಂಕಗಳು ಇಲ್ಲ. ಈ ಕುರಿತಂತೆ ಒಂದೆರಡು ದಿನಗಳಲ್ಲಿ ಸಂಬಂಧಪಟ್ಟ ಇಲಾಖೆ ಮೂಲಕ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮೌಢ್ಯ ಪ್ರತಿಬಂಧಕ ಮಸೂದೆ, ಕಂಬಳದ ಸುಗ್ರೀವಾಜ್ಞೆಯನ್ನು ಮಸೂದೆಯನ್ನು ಪರಿವರ್ತಿಸುವ ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳು ಪರ್ಯಾಲೋಚನೆ ಮತ್ತು ಅನುಮೋದನೆಗೆ ಮಂಡಿಸಲಾಗುವುದು ಎಂದರು.

ರಾಜ್ಯ ಸರ್ಕಾರಿ ನೌಕರರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಉದ್ಯೋಗದಲ್ಲಿ ಮೀಸಲಾತಿ ಹಾಗೂ ಬಡ್ತಿ ಮೀಸಲಾತಿಕುರಿತಂತೆ ವಿಧೇಯಕವನ್ನು ಮಂಡಿಸಿ, ಆ ನೌಕರರ ಹಿತವನ್ನುಕಾಪಾಡಲು ಸರ್ಕಾರ ಬದ್ಧವಾಗಿದೆಎಂದುಅವರು ವಿವರಿಸಿದರು.

ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ತರುವ ಕುರಿತಂತೆ ವಿಧಾನಮಂಡಲದ ಜಂಟಿ ಸದನ ಸಮಿತಿ ನೀಡಿರುವ ಶಿಫಾರಸ್ಸು ಹಿನ್ನೆಲೆಯಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಅವರು ಹೇಳಿದರು. ನೂರಾರು ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿ ಅದರಲ್ಲೂ ತಾಂಡ, ಗೊಲ್ಲರಹಟ್ಟಿ ಮುಂತಾದ ಪ್ರದೇಶಗಳಲ್ಲಿ ಮನೆಯನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಜನರಿಗೆ ಹಕ್ಕು ಪತ್ರ ನೀಡುವ ವಿಧೇಯಕಕ್ಕೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದು, ಈ ಕುರಿತಂತೆ ಕಂದಾಯ ಇಲಾಖೆ ಅಧಿಸೂಚನೆಯನ್ನು ಪ್ರಕಟಿಸಲಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ ಜನರಿಗೆ ಮನೆಯ ಹಕ್ಕು ಪತ್ರವನ್ನು ನೀಡುವ ಕರ್ನಾಟಕ ಭೂ ಕಂದಾಯ ಕಾಯಿದೆಯ 94 (ಸಿ) ಗೆ ತಿದ್ದುಪಡಿತಂದಿದ್ದು, ಇದಕ್ಕೆ ರಾಷ್ಟ್ರಪತಿಯವರು ಸಮ್ಮತಿಸುವ ಮೂಲಕ ದೇಶದಲ್ಲೇ ಮೊದಲ ಬಾರಿಗೆ ವಾಸಿಸುವವನೇ ಮನೆಯ ಒಡೆಯ ಎಂಬ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು ಎಂದು ಅವರು ಹೇಳಿದರು. ಈ ಕುರಿತಂತೆ ಅಧಿಕೃತ ಅಧಿಸೂಚನೆ ಹೊರಡಿಸುವ ಮೂಲಕ ವಾಸಿಸುವವನಿಗೆ ಮನೆಯ ಹಕ್ಕು ಪತ್ರಗಳನ್ನು ತ್ವರಿತವಾಗಿ ನೀಡಲು ಸಹಕಾರಿಯಾಗಲಿದೆ ಎಂದರು.

ರಾಜ್ಯ ಸರ್ಕಾರದ ಸಾವಿರಾರು ಪ್ರಕರಣಗಳು ವಿವಿಧ ನ್ಯಾಯಾಲಯದಲ್ಲಿದ್ದು, ತ್ವರಿತವಾಗಿ ಇತ್ಯರ್ಥವಾಗುವುದರ ಜೊತೆಗೆ ನ್ಯಾಯಾಲಯದ ಮುಂದೆ ಸಮರ್ಥವಾಗಿ ಹಾಗೂ ಸಮರ್ಪಕವಾಗಿಎಲ್ಲ ಮಾಹಿತಿಯನ್ನು ನೀಡುವ ಸಲುವಾಗಿ ರಾಜ್ಯ ಸರ್ಕಾರ ನಾಲ್ವರು ನೋಡಲ್ ಅಧಿಕಾರಿಗಳನ್ನು ಈ ಕಾರ್ಯಕ್ಕಾಗಿ ನಿಯೋಜನೆ ಮಾಡಲಾಗಿದೆಎಂದು ಸಚಿವರು ತಿಳಿಸಿದರು.

ಬಹುತೇಕ ಪ್ರಕರಣಗಳಲ್ಲಿ ನಮ್ಮ ಸರ್ಕಾರಿ ವಕೀಲರು ಸಮರ್ಪಕ ಮಾಹಿತಿಯನ್ನು ನೀಡದೇ ಇರುವುದರಿಂದ ಪ್ರಕರಣಗಳು ಪಿರ್ಯಾದುದಾರರ ಪರವಾಗಿ ತೀರ್ಪು ಬರುತ್ತವೆ. ಸರ್ಕಾರಕ್ಕೆ ಪರಾಭವ ಉಂಟಾಗುತ್ತದೆ. ಇದನ್ನು ತಪ್ಪಿಸಲು ನೋಡಲ್ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿ, ಎಲ್ಲ ಇಲಾಖೆಗಳಿಂದ ಮಾಹಿತಿ ತರಿಸಿಕೊಂಡು ನ್ಯಾಯಾಲಯದ ಮುಂದೆ ಸಮರ್ಪಕವಾಗಿ ವಾದ ಮಂಡಿಸಲು ಅನುಕೂಲವಾಗುವಂತೆ ನೋಡಲ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ರಾಜ್ಯದ ಅಡ್ವೋಕೆಟ್‍ ಜನರಲ್, ಹೆಚ್ಚುವರಿ ಅಡ್ವೋಕೇಟ್‍ ಜನರಲ್ ಸೇರಿದಂತೆ ವಿವಿಧ ಸರ್ಕಾರಿ ವಕೀಲರಿಗೆ ಮಾಹಿತಿಯನ್ನು ನೊಡಲ್ ಅಧಿಕಾರಿಗಳು ಒದಗಿಸುವ ಕಾರ್ಯವನ್ನು ಮಾಡಲಿದ್ದಾರೆ ಎಂದರು. ಈ ಸಂಬಂಧ ಇನ್ನೊರ್ವ ವಿಶೇಷ ಸರ್ಕಾರಿ ವಕೀಲರನ್ನಾಗಿ ಸುನೀಲ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಬೆಂಗಳೂರು-ಮೈಸೂರು ನೈಸ್ ರಸ್ತೆ ಕುರಿತಂತೆ ಸುಮಾರು 40 ಕ್ಕೂ ಹೆಚ್ಚು ಪ್ರಕರಣಗಳು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮುಂದಿವೆ. ಎಲ್ಲ ಪ್ರಕರಣಗಳ ಮೇಲೆ ನೈಸ್ ಸಂಸ್ಥೆ ತಡೆಯಾಜ್ಞೆ ತಂದಿದೆ. ಇವುಗಳನ್ನು ತೆರವುಗೊಳಿಸಿ ಅಗತ್ಯ ಆದೇಶವನ್ನು ಅನುಷ್ಠಾನಕ್ಕೆ ವಿಶೇಷ ನ್ಯಾಯವಾದಿಗಳನ್ನು ನೇಮಕ ಮಾಡಲಾಗಿದೆ ಎಂದರು.ಸಂಬಂಧಿತ ಟ್ಯಾಗ್ಗಳು

Kannada News Karnataka ಕಂಬಳ ಸುಗ್ರೀವಾಜ್ಞೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ