‘ಸರ್ಕಾರಕ್ಕೂ, ರಾಷ್ಟ್ರಪತಿ ಭಾಷಣಕ್ಕೂ ಸಂಬಂಧವಿಲ್ಲ’

Kannada News

26-10-2017

ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವಕ್ಕೆ ಖರ್ಚಾಗಿರುವ ಹಣದ ಬಗ್ಗೆ ಲೆಕ್ಕ ಪತ್ರ ಇಡಲು ಅಧಿಕಾರಿಗಳಿದ್ದಾರೆ. ಬಂದು, ಬಂದು ಕೇಳಿದವರಿಗೆಲ್ಲಾ ನಾವು ಲೆಕ್ಕಕೊಡೋಕೆ ಸಾಧ್ಯವಿಲ್ಲ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಜ್ರಮಹೋತ್ಸವದಲ್ಲಿ ದುಂದು ವೆಚ್ಚ ಆಗಿಲ್ಲ. ಇದಕ್ಕೆ ಆಡಿಟರ್‍ ಇದ್ದು, ಅವರು ಲೆಕ್ಕಪತ್ರ ಕೊಡುತ್ತಾರೆ. ಎಲ್ಲದಕ್ಕೂ ಲೆಕ್ಕ ಇಡಲಾಗಿದೆ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಆಸನ ವ್ಯವಸ್ಥೆ ಇಲ್ಲದೇ ಜೆಡಿಎಸ್ ಶಾಸಕರು ಪೋಟೋ ಸೆಷನ್ ಬಹಿಷ್ಕರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಬಿಜೆಪಿ ಮುಖಂಡರಾದ ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರ ಆಸನಗಳ ಪಕ್ಕ ಕುಮಾರಸ್ವಾಮಿಯವರಿಗೂ ಆಸನ ನಿಗದಿಯಾಗಿತ್ತು. ಕುಮಾರಸ್ವಾಮಿ ಯವರಿಗೆ ಮೀಸಲಿರಿಸಿದ ಆಸನ ಎಂದು ಬೋರ್ಡ್ ಸಹ ಇತ್ತು. ಆದರೆ, ಬೇರೆ ಯಾರೋ ಬಂದು ಕುಳಿತಿದ್ದರು. ಇದು ಅಧಿಕಾರಿಗಳು ಮಾಡಿದತಪ್ಪು. ಹೀಗಾಗಿ, ಕುರ್ಚಿಗೊಂದಲದ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದ್ದೇನೆ. ಕುಮಾರಸ್ವಾಮಿಯವರಿಗೆ ಕರೆ ಮಾಡಿ ಕ್ಷಮೆ ಕೋರಿದ್ದೇನೆ ಎಂದರು.

ವಿಧಾನಸೌಧ ವಜ್ರಮಹೋತ್ಸವ ಉತ್ತಮವಾಗಿ ನಡೆದಿದೆ. ಇಡೀ ದಿನ ವಿವಿಧ ಕಾರ್ಯಕ್ರಮಗಳು ನಡೆದಿವೆ. ನನ್ನ ಅವಧಿಯಲ್ಲಿ ಒಂದು ಸುವರ್ಣಾವಕಾಶ ಸಿಕ್ಕಂತಾಗಿದೆ. ನನ್ನ ಜೀವನದಲ್ಲಿ ಮಹತ್ವದ ತೃಪ್ತಿ ಇದರಿಂದ ಸಿಕ್ಕಿದೆ ಎಂದು ಹೇಳಿದರು.

ರಾಷ್ಟ್ರಪತಿ ರಾಮನಾಥ್‍ಕೋವಿಂದ್‍ ಅವರು ಮಾಡಿದ ಭಾಷಣ ರಾಜ್ಯ ಸರ್ಕಾರ ಹೇಳಿಕೊಟ್ಟು ಮಾಡಿಸಿದೆ ಎಂಬ ಆರೋಪ ಬಂದಿದೆ. ಆದರೆ, ಸರ್ಕಾರಕ್ಕೂ, ರಾಷ್ಟ್ರಪತಿಯವರ ಭಾಷಣಕ್ಕೂ ಸಂಬಂಧವಿಲ್ಲ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು. ರಾಜ್ಯಪಾಲರ ಭಾಷಣದ ವೇಳೆ ಮಾತ್ರ ಸರ್ಕಾರದಿಂದ ಬರೆದುಕೊಡಲಾಗುತ್ತದೆ. ಆದರೆ, ರಾಷ್ಟ್ರಪತಿ ಭಾಷಣವನ್ನು ಸರ್ಕಾರ ಮಾಡಿಕೊಡಲ್ಲ. ವಿಧಾನಸಭೆ ಹಾಗೂ ವಿಧಾನ ಪರಿಷತ್ ನಿಂದರಾಷ್ಟ್ರಪತಿಭವನಕ್ಕೆ ಮಾಹಿತಿ ಕಳುಹಿಸಲಾಗಿತ್ತು. ನಾವು ಬರೆದುಕೊಟ್ಟ ಪತ್ರದಲ್ಲಿನ ಅಂಶಗಳು ರಾಷ್ಟ್ರಪತಿ ಭವನದಲ್ಲಿನ ಭಾಷಣದ ಪ್ರತಿಗೆ ತುಲನೆಯಾಗುತ್ತಿಲ್ಲ ಎಂದು ಹೇಳಿದರು.

ನಾವು ಕೊಟ್ಟ ಮಾಹಿತಿ, ರಾಷ್ಟ್ರಪತಿ ಭವನದಿಂದ ಸಿದ್ದಪಡಿಸಿರುವ ಮಾಹಿತಿ ಬೇರೆಬೇರೆಯಾಗಿದೆ. ನಾವು ಕೊಟ್ಟ ಭಾಷಣದ ಅಂಶಗಳನ್ನು ರಾಷ್ಟ್ರಪತಿಗಳು ಭಾಷಣ ಮಾಡಿಲ್ಲ. ರಾಷ್ಟ್ರಪತಿ ಭವನ ಸಿದ್ಧಪಡಿಸಿರುವ ಭಾಷಣವನ್ನು ಅವರು ಓದಿದ್ದಾರೆ ಎಂದು ತಿಳಿಸಿದರು.

ಇನ್ನು ಬೆಳಗಾವಿ ಅಧಿವೇಶನ ಖರ್ಚು-ವೆಚ್ಚ ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಬೆಳಗಾವಿಯಲ್ಲಿ ಶಾಸಕರಭವನ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕೊಡಲಾಗಿದೆ. ಆದರೆ, ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಕೋಳಿವಾಡ ಅಸಮಧಾನ ವ್ಯಕ್ತಪಡಿಸಿದರು.

ವಿಧಾನಸೌಧ ಪ್ರಮುಖ ಜನಾಕರ್ಷಣೆ. ರಾತ್ರಿ ವಿದ್ಯುತ್ ದೀಪಗಳಲ್ಲಿ  ಜನರನ್ನು ಸೆಳೆಯುತ್ತದೆ. ಹೀಗಾಗಿ, ಪ್ರತಿ ಶನಿವಾರ ಹಾಗೂ ಭಾನುವಾರ ವಿಧಾನಸೌಧಕ್ಕೆ ವಿದ್ಯುತ್ ದೀಪಾಲಂಕಾರ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಿದ್ದೇನೆ ಎಂದರು. ವಿದ್ಯುತ್ ಸಮಸ್ಯೆಯಾದರೆ ವಿಧಾನಸೌಧದ ಮೇಲೆ ಸೋಲಾರ್ ಬಳಸಿ ಅದರಿಂದ ವಿದ್ಯುತ್ ದೀಪಗಳಿಗೆ ಸಂಪರ್ಕಕಲ್ಪಿಸಬಹುದು. ಇದರಿಂದ ವಿಧಾನಸೌಧದ ಸೌಂದರ್ಯವೂ ಹೆಚ್ಚುತ್ತದೆ. ಜನರಿಗೂ ಸಂತಸವಾಗುತ್ತದೆ. ಆದರೆ, ಇದಕ್ಕೆ ಒಪ್ಪಿಗೆ ಸಿಗಬೇಕಷ್ಟೆ ಎಂದು ಹೇಳಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ