ವಿಳಾಸ ಮತ್ತು ಮೆಟ್ರೋ ಪಿಲ್ಲರ್ಸ್..

Kannada News

26-10-2017 408

ಬೆಂಗಳೂರು: ದೆಹಲಿ ಮಾದರಿಯಲ್ಲಿ ಮೆಟ್ರೊ ಪಿಲ್ಲರ್‍ ಗಳನ್ನು ಅಂಚೆ ವಿಳಾಸವಾಗಿ ಬಳಸುವುದು ನಗರದಲ್ಲೂ ಆರಂಭಗೊಂಡಿದೆ.

ನಗರದಲ್ಲಿನ ಜನಪ್ರಿಯವಾಗುತ್ತಿರುವ ಬೆನ್ನಲ್ಲೇ, ಮೆಟ್ರೊ ಪಿಲ್ಲರ್‍ ಗಳು ಹಾದುಹೋಗಿರುವ ಮಾರ್ಗಗಳಲ್ಲಿ ಪಿಲ್ಲರ್‍ ಗಳ ಸಂಖ್ಯೆಯ ಆಧಾರದಲ್ಲಿ ವಿಳಾಸ ಪತ್ತೆ ಹಚ್ಚುವ ಪ್ರಯತ್ನ ನಡೆಸಲಾಗಿದೆ. ಇದರಿಂದ ಪೋಸ್ಟ್ ಮ್ಯಾನ್ ಮತ್ತು ಗ್ರಾಹಕರು ವಿಳಾಸ ಪತ್ತೆಹಚ್ಚಲು ಪಡುತ್ತಿದ್ದ ಪರದಾಟಕ್ಕೆ ಬ್ರೇಕ್ ಬಿದ್ದಂತಾಗಿದೆ.

ಹಿಂದೆ ನಮ್ಮ ಅಂಗಡಿಗೆ ಬರುತ್ತಿದ್ದ ಗ್ರಾಹಕರಿಗೆ ಈ ಬೇಕರಿಯ ಹತ್ತಿರ ಬನ್ನಿ, ಈ ಅಂಗಡಿಯ ಹತ್ತಿರ ಬನ್ನಿ ಎಂದು ವಿಳಾಸ ಹೇಳಿ ಹೇಳಿ ಸಾಕಾಗಿ ಸಮಯ ವ್ಯರ್ಥವಾಗುತ್ತಿತ್ತು. ಆದರೆ ಈಗ ಈ ಸಂಖ್ಯೆಯ ಪಿಲ್ಲರ್ ಹತ್ತಿರ ಬನ್ನಿ ಎಂದು ಹೇಳಿದರೆ ಸಾಕು. ಅವರು ನನ್ನ ಅಂಗಡಿಗೆ ನೇರವಾಗಿ ಬರುತ್ತಾರೆ ಎಂದು ಜೆಪಿ ನಗರದ ಫೋಟೊ ಸ್ಟುಡಿಯೊ ಮಾಲೀಕರೊಬ್ಬರು ಹೇಳುತ್ತಾರೆ.

ಮೆಟ್ರೊ ಪಿಲ್ಲರ್‍ ಗಳಿಂದಾಗಿ ನನಗೆ ಮತ್ತು ನಮ್ಮ ಅಂಗಡಿಯ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಅವರು ಸಂತೋಷ ಪಡುತ್ತಿದ್ದಾರೆ. ಇದು ಕೇವಲ ಜಯವೇಲು ಅವರಿಗೆ ಮಾತ್ರ ಆದ ಅನುಕೂಲವಲ್ಲ. ಈ ಮಾರ್ಗದಲ್ಲಿ ಬರುವ ಹಲವು ಅಪಾರ್ಟ್‍ಮೆಂಟ್‍ಗಳು, ಮನೆಗಳು, ಅಂಗಡಿಗಳಿಗೆ ಬಹಳ ಅನುಕೂಲವಾಗಿದೆ. ಸಂಪಿಗೆ ರಸ್ತೆ ಮತ್ತು ಯಲಚೇನಹಳ್ಳಿ ನಡುವಿನ ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಸಂಚಾರ ಆರಂಭಗೊಂಡ ಬಳಿಕ ಈ ಭಾಗದ ಜನರ ಪರಿಭಾಷೆಯೂ ಬದಲಾಗಿದೆ.

ಮೆಟ್ರೊ ರೈಲು ಸಂಪರ್ಕದಿಂದ ಇಲ್ಲಿನ ನಿವಾಸಿಗಳು ನಗರದ ಇತರೆಡೆಗೆ ಹೋಗುವ ಮಾರ್ಗ ಕೂಡ ಬದಲಾಗಿದೆ. ಅದರ ಜೊತೆಗೆ ಜನರ ವಿಳಾಸ ಕೂಡ ಬದಲಾಗಿದೆ. ಅಂಚೆ ಸಿಬ್ಬಂದಿ ಕೂಡ ಈ ಪಿಲ್ಲರ್‍ ಗಳನ್ನೇ ಬಳಸಿಕೊಂಡು ತಮ್ಮ ಕೆಲಸವನ್ನು ಮತ್ತಷ್ಟು ಸರಳವಾಗಿಸಿಕೊಂಡಿದ್ದಾರೆ. ಪೋಸ್ಟ್ ಮ್ಯಾನ್‍ಗಳಿಗೆ  ಇದರಿಂದ ಬಹಳಷ್ಟು ಅನುಕೂಲವಾಗಿದೆ.

ಸಾಧಾರಣವಾಗಿ ಜನರು ಪೋಸ್ಟಲ್ ವಿಳಾಸ ಬರೆಯುವಾಗ ಲ್ಯಾಂಡ್‍ಮಾರ್ಕ್ ಆಗಿ ಕೆಲವು ಅಂಗಡಿ, ಬ್ಯಾಂಕ್ ಮತ್ತಿತರ ಪ್ರಸಿದ್ಧವಾದ ಸಂಸ್ಥೆಗಳನ್ನು ಗುರುತಿಸುತ್ತಿದ್ದರು. ಆದರೆ ಈಗ ಲ್ಯಾಂಡ್‍ಮಾರ್ಕ್ ಆಗಿ ಜನರು ಮೆಟ್ರೊ ಪಿಲ್ಲರ್‍ ಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಮೆಟ್ರೊ ನಿಗಮ ಒಂದೊಂದು ಪಿಲ್ಲರ್‍ಗೂ ಒಂದೊಂದು ಸಂಖ್ಯೆ ನೀಡಿರುವುದರಿಂದ ಜನರಿಗೆ ತಮಗೆ ಬೇಕಾದ ವಿಳಾಸ ಹುಡುಕಲು ಸುಲಭವಾಗುತ್ತಿದೆ ಎನ್ನುತ್ತಾರೆ ಪ್ರಧಾನ ಅಂಚೇರಿಯ ಮುಖ್ಯ ಪೋಸ್ಟ್‍ ಮಾಸ್ಟರ್ ಎಸ್. ಶಿವರಾಮ್.

ಜೆಪಿನಗರ ಮತ್ತು ಯಲಚೇನಹಳ್ಳಿಯಲ್ಲಿ ಕಳೆದ ಮೂರು ತಿಂಗಳುಗಳಿಂದ ಜನರು ತಮ್ಮ ವಿಳಾಸವನ್ನು ಪಿಲ್ಲರ್‍ ಗಳ ಸಂಖ್ಯೆಯೊಂದಿಗೆ ಬರೆಯುತ್ತಿದ್ದಾರೆ. ಇದರಿಂದ ನಮಗೂ ಅನುಕೂಲವಾಗುತ್ತಿದೆ ಎಂದು ಜೆ.ಪಿ.ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವರಾಜು ಎಸ್. ಸಂತೋಷದಿಂದ ಹೇಳುತ್ತಾರೆ. ಕ್ಯಾಬ್ ಚಾಲಕರು ಕೂಡ ಇದೇ ವಿಳಾಸವನ್ನು ಬಳಸಿ ಗ್ರಾಹಕರನ್ನು ಹತ್ತಿಕೊಳ್ಳುವುದು ಮತ್ತು ಇಳಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ತಿಂಗಳುಗಳಿಂದ ಇಲ್ಲಿನ ಜನರು ನಿರ್ದಿಷ್ಟ ಪಿಲ್ಲರ್ ಸಂಖ್ಯೆ ಹೇಳಿ ನಮ್ಮನ್ನು ಬರಲು ಹೇಳುತ್ತಾರೆ ಎಂದು ಕಾರು ಚಾಲಕ ಮದನ್ ಹೇಳುತ್ತಾರೆ.

ಅವರ ಮನೆಯ ಎದುರಿಗಿರುವ ಮೆಟ್ರೊ ಪಿಲ್ಲರ್ ಸಂಖ್ಯೆಯನ್ನು ಹೇಳುತ್ತಾರೆ. ಇದರಿಂದ ನಮಗೂ ಸುಲಭವಾಗಿ ಅವರ ಮನೆ ಹುಡುಕಲು ಸಾಧ್ಯವಾಗುತ್ತಿದೆ ಎಂದು ಅವರು ತಮಗೆ ಆಗಿರುವ ಅನುಕೂಲಗಳ ಬಗ್ಗೆ ಹೇಳಿಕೊಂಡಿದ್ದಾರೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ