ಸ್ವಾಮೀಜಿ ಪುತ್ರನೊಬ್ಬನ ರಾಸಲೀಲೆ ಬಯಲು

Kannada News

26-10-2017

ಬೆಂಗಳೂರು: ನಗರದ ಹೊರವಲಯದ ಹುಣಸಮಾರನಹಳ್ಳಿಯ ಜಂಗಮ ಮಠದ ಪೀಠಾಧ್ಯಕ್ಷನಾಗಲು ಹೊರಟಿದ್ದ ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯ ಪುತ್ರ ದಯಾನಂದ್ ಅಲಿಯಾಸ್ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿ ಯುವತಿಯೊಬ್ಬರ ಜೊತೆ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳು ಬಹಿರಂಗಗೊಂಡಿದ್ದು ಮಠದ ಆವರಣದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ.

ಯಲಹಂಕ ಬಳಿಯ ಪುರಾತನ ಕಾಲದ ಮದ್ದೇವಣಾಪುರ ದೇವ ಸಿಂಹಾಸನ ಮಹಾ ಸಂಸ್ಥಾನ ಮಠದ 13ನೇ ಪೀಠಾಧ್ಯಕ್ಷರಾದ ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯ ಪುತ್ರ ದಯಾನಂದ್ ಸ್ವಾಮೀಜಿಯಾಗಲು ತಯಾರಿ ನಡೆಸಿರುವ ಬೆನ್ನಲ್ಲೇ ಯುವತಿಯೊಬ್ಬರ ಜೊತೆ ಕಾಮದಾಟವಾಡುತ್ತಿರುವ ದೃಶ್ಯಗಳು ಬಯಲಾಗಿವೆ.

ಸ್ವಾಮೀಜಿಗಳು ಪಾಲ್ಗೊಳ್ಳುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪೋಟೋಗಳಿಗೆ ಸಬ್ಯಸ್ಥನಂತೆ ಪೋಸು ನೀಡುತ್ತಿದ್ದ ದಯಾನಂದ್, ಮಹಿಳೆಯ ಜೊತೆಗಿನ ರಾಸಲೀಲೆ ದೃಶ್ಯಗಳು ಬಯಲಾಗುತ್ತಿದಂತೆ ಮಠದಿಂದ ಪರಾರಿಯಾಗಿದ್ದಾನೆ. ದಯಾನಂದ್ ಜೊತೆ ಕಾಮದಾಟದಲ್ಲಿ ತೊಡಗಿದ್ದ ಯುವತಿಯು ಸಿನೆಮಾ ನಟಿ ಎನ್ನಲಾಗಿದೆ.

ಶ್ರೀಶೈಲ ಅಧೀನಕ್ಕೆ ಒಳಪಡುವ ಜಂಗಮ ಮಠದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯು ಮಠದಲ್ಲಿ ಭಕ್ತೆಯಾಗಿದ್ದ ವಿಧವೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಆಕೆಗೆ ನಾಲ್ವರು ಮಕ್ಕಳಲ್ಲಿ  ದಯಾನಂದ್ ಕೊನೆಯ ಮಗನಾಗಿದ್ದಾನೆ.

ವಯಸ್ಸಾಗುತ್ತಿದ್ದಂತೆ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯು 500 ವರ್ಷಗಳ ಇತಿಹಾಸವಿರುವ ಮಠಕ್ಕೆ 2011 ರಲ್ಲಿ ಮಠಕ್ಕೆ ನೂತನ ಪೀಠಾಧ್ಯಕ್ಷರಾಗಿ ಮಾಡಲು ಮುಂದಾಗಿದ್ದರು. ಆದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಡಿಬಾರ್ ಆಗಿ ಹಲವು ಅನೈತಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ದಯಾನಂದ್‍ಗೆ ಸ್ವಾಮೀಜಿಯಾಗಲು ಅರ್ಹತೆಯಿಲ್ಲ ಎಂದು ಜನ ಸತತ ಹೋರಾಟ ನಡೆಸಿ ಬೇರೊಬ್ಬರನ್ನು ಸ್ವಾಮೀಜಿ ಮಾಡಲು ಪ್ರಯತ್ನ ನಡೆಸಿದ್ದರು.

ಭಕ್ತರ ಹೋರಾಟಕ್ಕೆ ಮಣಿದ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಗಳು ದಯಾನಂದ್‍ಗೆ ಮಠದ ಪೀಠವನ್ನು ಹಸ್ತಾಂತರಿಸದೆ ತಾವೇ ಪೀಠಾಧಿಪತಿಗಳಾಗಿ ಮುಂದುವರಿದಿದ್ದರು. ಆದರೂ ಪಟ್ಟು ಬಿಡದ ದಯಾನಂದ್ ಹೇಗಾದರೂ ಪೀಠಾಧ್ಯಕ್ಷನಾಗಿ ಮೈಸೂರು ಮಹಾರಾಜರು ಮಠಕ್ಕೆ ನೀಡಿದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದರು.

ಮಹಿಳೆಯೊಬ್ಬರ ಜೊತೆ ರಾಸಲೀಲೆಯಲ್ಲಿ ತೊಡಗಿ ಮಠದ ಗೌರವವನ್ನು ಹಾಳು ಮಾಡಿರುವ ಸ್ವಾಮಿ ದಯಾನಂದ್‍ಗೆ ಯಾವುದೇ ಕಾರಣಕ್ಕೂ ಪೀಠಾಧ್ಯಕ್ಷರ ಸ್ಥಾನ ನೀಡಬಾರದು ಎಂದು ಟ್ರಸ್ಟ್‍ ನ  ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದಯಾನಂದ್ ಮಹಿಳೆಯೊಬ್ಬರ ಜೊತೆ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳು ಬಯಲಾಗುತ್ತಿದ್ದಂತೆ ಭಕ್ತರು ಮಠದ ಬಳಿ ಜಮಾಯಿಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವುದರಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ

ಪೀಠಾಧಿಪತಿ ನೇಮಕಕ್ಕೆ ಆಗ್ರಹ: ಮಾಧ್ಯಮಗಳೊಂದಿಗೆ ಮಾತನಾಡಿರುವ ಮಠದ ವೀರಶೈವ ಮುಖಂಡ ಗುರುಸ್ವಾಮಿ, ಮಠವನ್ನು ಸಂಸಾರಿ ಮಠವನ್ನಾಗಿ ಮಾಡಲಾಗಿದೆ. ಮಠದ ಸ್ವಾಮಿ ಶಿವಾವಾರ್ಯರು ಇಬ್ಬರು ಹೆಂಡತಿಯರು, ಮಕ್ಕಳನ್ನು ಇಟ್ಟುಕೊಂಡಿದ್ದಾರೆ. ಎರಡನೇ ಹೆಂಡತಿಯ ಮಗನಿಗೆ ಪಟ್ಟ ಕಟ್ಟಲು ಷಡ್ಯಂತ್ರ ನಡೆಸಲಾಗಿದೆ. ಕೂಡಲೇ ಎಲ್ಲರೂ ಮಠವನ್ನು ಖಾಲಿ ಮಾಡಬೇಕು. ಶ್ರೀಶೈಲದ ಮಠಾಧಿಪತಿ ನೂತನ ಮಠಾಧೀಶರನ್ನು ನೇಮಕ ಮಾಡಿ ಟ್ರಸ್ಟ್ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.

ದಯಾನಂದ ಸ್ವಾಮಿಯ ತಾಯಿ ಚಿಕ್ಕಮ್ಮ, ಎಲ್ಲರೂ ಮಠದ ಆಸ್ತಿ ತಿಂದಿದ್ದಾರೆ. ಈಗ ಎಲ್ಲರೂ ನಮ್ಮನ್ನ ಹಾಳು ಮಾಡುತ್ತಿದ್ದಾರೆ. ಪಟ್ಟದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿ ಈಗ ಮಠದಲ್ಲಿ ಇಲ್ಲ. ಇವತ್ತು ಒಂದು ದಿನ ಕಾಲಾವಕಾಶ ನೀಡಿ, ನಾಳೆ ಎಲ್ಲರೂ ಕುಳಿತು ಮಾತನಾಡಿ ಸಮಸ್ಯೆ ಬಹೆಹರಿಸಿಕೊಳ್ಳೋಣ ಎಂದು ತಿಳಿಸಿದ್ದಾರೆ. ದಯಾನಂದ್ ಅಲಿಯಾಸ್ ಸ್ವಾಮಿ ಜೊತೆ ಕಾಮದಾಟ ನಡೆಸುತ್ತಿದ್ದ ಆ ಚಿತ್ರ ನಟಿ ಯಾರು ಎನ್ನುವುದನ್ನು ತನಿಖೆಯ ದೃಷ್ಟಿಯಿಂದ ಆಕೆಯ ಹೆಸರನ್ನು ಬಹಿರಂಗಪಡಿಸುತ್ತಿಲ್ಲ ಎನ್ನಲಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ