ಸಿಎಂಗೆ ತಲೆನೋವಾದ ಡಿಜಿ, ಐಜಿ ನೇಮಕಾತಿ

Kannada News

26-10-2017

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ನಿರೀಕ್ಷಕ (ಡಿಜಿ ಮತ್ತು ಐಜಿ) ಹುದ್ದೆ ನೇಮಕಾತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆ ಬಿಸಿ ತಂದೊಡ್ಡಿದೆ. ಇದೇ ತಿಂಗಳ 31ರಂದು ಹಾಲಿ ಡಿಜಿ ಮತ್ತು ಐಜಿ ಆರ್.ಕೆ.ದತ್ತಾ ನಿವೃತ್ತರಾಗಲಿದ್ದು, ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ಈ ಹುದ್ದೆಗೆ ಹೊಸಬರನ್ನು ನೇಮಿಸಲು ಸಿ.ಎಂ.ಪರಿಶೀಲಿಸುತ್ತಿದ್ದಾರೆ.

ಸೇವಾ ಹಿರಿತನ ಹಾಗೂ ಮಹಿಳೆಯೊಬ್ಬರಿಗೆ ಈ ಹುದ್ದೆ ನೀಡಬೇಕೆಂದು ಚಿಂತನೆ ನಡೆಸಿದ್ದ ಮುಖ್ಯಮಂತ್ರಿಗಳಿಗೆ ಒಕ್ಕಲಿಗ ಹಾಗೂ ಹಲವು ಪ್ರಭಾವಿ ನಾಯಕರ ಒತ್ತಡ ಬಿಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಉನ್ನತ ಹುದ್ದೆಗಾಗಿ ಕೇಂದ್ರ ಸೇವೆಯಿಂದ ಹಿಂತಿರುಗಿರುವ ನೀಲಮಣಿ ರಾಜು ಅವರ ಬದಲಿಗೆ, ಈ ಹುದ್ದೆಗೆ ಕನ್ನಡಿಗ ಎಚ್.ಸಿ.ಕಿಶೋರ್ ಚಂದ್ರ ಅವರನ್ನು ಪರಿಗಣಿಸುವಂತೆ ಕೆಲವು ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರುತ್ತಿದ್ದಾರೆ.

ಈ ಹುದ್ದೆಗೆ ಕಿಶೋರ್ ಚಂದ್ರ, ಐಪಿಎಸ್ ಅಧಿಕಾರಿ ನೀಲಮಣಿ ರಾಜು, ಎಂ.ಎನ್.ರೆಡ್ಡಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನೀಲಮಣಿ ರಾಜು ಅವರು ಉತ್ತರ ಪ್ರದೇಶದವರು. ರೆಡ್ಡಿ ಆಂಧ್ರಪ್ರದೇಶದವರು. ಅಲ್ಲದೇ 15 ವರ್ಷಗಳ ಬಳಿಕ ಕನ್ನಡಿಗರೊಬ್ಬರು ಪೊಲೀಸ್ ಮುಖ್ಯಸ್ಥ ಹುದ್ದೆಗೆ ಏರುವ ಅವಕಾಶ ಬಂದಿದೆ. ಮೈಸೂರಿನವರಾದ ಕಿಶೋರ್ ಚಂದ್ರ ಅವರಿಗೆ ಹುದ್ದೆ ನೀಡಿದರೆ, ಚುನಾವಣೆ ಸಂದರ್ಭದಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಲಾಭ ಆಗಲಿದೆ. ಅಲ್ಲದೆ, ಪ್ರಮುಖ ಹುದ್ದೆಗೆ ಒಕ್ಕಲಿಗ ಸಮುದಾಯವನ್ನು ನಿರ್ಲಕ್ಷಿಸುವುದು ಸರಿಯಲ್ಲ' ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ನಿರೀಕ್ಷಕ (ಡಿಜಿ ಮತ್ತು ಐಜಿ) ಹುದ್ದೆ ನೇಮಕಾತಿ ಸಿಎಂಗೆ ತಲೆನೋವಾಗಿ ಪರಿಣಮಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ