ವಿಜಯಶಂಕರ್ ಮನವೊಲಿಸಲು ಬಿಜೆಪಿ ಕಸರತ್ತು

Kannada News

26-10-2017

ಮೈಸೂರು: ಬಿಜೆಪಿ ತೊರೆಯಲು ಮುಂದಾಗಿರುವ ಹಿರಿಯ ಮುಖಂಡ ಸಿ.ಎಚ್.ವಿಜಯಶಂಕರ್ ಅವರ ಮನವೊಲಿಸುವ ಪಕ್ಷದ ವರಿಷ್ಠರ ಕಸರತ್ತು ಮುಂದುವರಿದಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರು ನಡೆಸಿದ ಪ್ರಯತ್ನ ವಿಫಲವಾದ ಬೆನ್ನಲೇ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೊನೆಯ ಪ್ರಯತ್ನ ಆರಂಭಿಸಿದ್ದಾರೆ.

ರೈತ ಮೋರ್ಚಾ ಸಮಾವೇಶದ ಸಿದ್ಧತೆ ಪರಿಶೀಲನೆಗೆ ಆಗಮಿಸಿರುವ ಯಡಿಯೂರಪ್ಪ, ವಿಜಯಶಂಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಯಡಿಯೂರಪ್ಪ ಕೆಲ ದಿನಗಳ ಹಿಂದೆ ದೂರವಾಣಿಯಲ್ಲಿ ಇವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ವಿಜಯಶಂಕರ್ ಕರೆ ಸ್ವೀಕರಿಸಿರಲಿಲ್ಲ, ಹೀಗಾಗಿ, ಶೋಭಾ ಅವರನ್ನು ಸಂಧಾನ ನಡೆಸಲು ಕಳುಹಿಸಲಾಗಿತ್ತು.

ಮಾತುಕತೆ ನಡೆಸುವ ಉದ್ದೇಶದಿಂದ, ವಿಜಯಶಂಕರ್ ಮನೆಗೆ ಶೋಭಾ ಭೇಟಿ ನೀಡಿದರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ರಾತ್ರಿ 10 ಗಂಟೆವರೆಗೆ ಪ್ರಯತ್ನಿಸಿದರೂ ಭೇಟಿ ಸಾಧ್ಯವಾಗದ ಕಾರಣ ನಿರಾಸೆಯಿಂದ ಹಿಂತಿರುಗಿದರು. ವಿಜಯಶಂಕರ್ ಈ ಸಂದರ್ಭದಲ್ಲಿ ಮನೆಯ ಮತ್ತೊಂದು ಕೊಠಡಿಯಲ್ಲಿ ಇದ್ದರೂ ಭೇಟಿಮಾಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದೀಗ ಸ್ವತಃ ಯಡಿಯೂರಪ್ಪ ಅವರೆ ಖುದ್ದು ಭೇಟಿಗೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.

ವಿಜಯಶಂಕರ್ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಬಿಜೆಪಿ ವರಿಷ್ಠರು ಈ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಪಿರಿಯಾಪಟ್ಟಣ ಕ್ಷೇತ್ರದ ಬದಲಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸೂಚನೆ ಬಂದಿದೆ. ಇದು ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಗೊಂದಲಕ್ಕೆ ಸಿಲುಕಿಸಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ