ಟ್ಟಿಟರ್ ಗೂ ತಟ್ಟಿದ ಭಾಷಣದ ಬಿಸಿ !

Kannada News

26-10-2017

ಬಿಜೆಪಿ ಅಭ್ಯರ್ಥಿಯಾಗಿಯೇ ರಾಷ್ಟ್ರಪತಿ ಹುದ್ದೆಗೇರಿದವರು ಟಿಪ್ಪು ಸುಲ್ತಾನ್ ಬಗ್ಗೆ ಸಕಾರಾತ್ಮಕವಾಗಿ ಮಾತಾಡಿರುವುದು ರಾಜ್ಯ ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ.

ಆಗ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದಾಗ, ಈಗ ರಾಮನಾಥ ಕೋವಿಂದ್ ಟಿಪ್ಪು ಬಗ್ಗೆ ಹೊಗಳಿಕೆಯ ಮಾತಾಡಿರುವುದು ಟಿಪ್ಪು ಜಯಂತಿ ಸರ್ಕಾರ ಆಚರಿಸಬಾರದು ಎಂದು ಭಾರೀ ವಿವಾದ ಹುಟ್ಟುಹಾಕಲು ಯತ್ನಿಸುತ್ತಿರುವ ರಾಜ್ಯ ಬಿಜೆಪಿಗೆ ಇರಿಸುಮುರಿಸು ತಂದಿಟ್ಟಿದೆ.

ಟಿಪ್ಪು ಕುರಿತಂತೆ ರಾಷ್ಟ್ರಪತಿ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಟ್ವೀಟ್ ಮೂಲಕ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಟಿಪ್ಪು ಕ್ಷಿಪಣಿಯ ಜನಕನಾಗಿದ್ದೆ, 3 ಮತ್ತು 4 ನೇ ಮೈಸೂರು-ಆಂಗ್ಲೋ ಯುದ್ದವನ್ನು ಸೋತಿದ್ದೇಕೆ..? ಎಂದು ಪ್ರಶ್ನಿಸಿ, ಕೋಟೆಯ ಒಳಗೆಯೇ ಆತ ಸತ್ತಿದ್ದು, ಅದು ವೀರ ಮರಣವೂ ಅಲ್ಲ, ಐತಿಹಾಸಿಕ ಸಾವೂ ಅಲ್ಲ ಎಂದಿದ್ದಾರೆ.

ಆ ಯುದ್ದ ಸಂದರ್ಭಗಳಲ್ಲಿ ಟಿಪ್ಪುವಿನ ಶಸ್ತ್ರಾಗಾರಕ್ಕೆ ಒಳಶತ್ರುಗಳೇ ನೀರು ಸುರಿದು, ಅವು ಉಪಯೋಗಕ್ಕೆ ಬಾರದಂತೆ ಮಾಡಿದ್ದರು,  ಫ್ರೆಂಚ್‍ನ ಬೋನಾಪಾರ್ಟೆ ತನ್ನ ಸೈನಿಕರನ್ನು ಟಿಪ್ಪು ಬೆಂಬಲಕ್ಕೆ ಕಳುಹಿಸಿದ್ದರೂ, ಈಜಿಪ್ಟ್‍ ನಲ್ಲಿ ಉಂಟಾದ ನೈಸರ್ಗಿಕ ವಿಕೋಪದಿಂದ ಆ ಸೈನಿಕರು ಇಲ್ಲಿಗೆ ಬರಲಾಗಲಿಲ್ಲ ಎಂಬಿತ್ಯಾದಿ ಕಾರಣಗಳೂ ಇವೆ. ಇದೆಲ್ಲವನ್ನ ಪ್ರತಾಪ್ ಸಿಂಹ ಓದಿಕೊಂಡಿದ್ದಾರಾ ಎಂಬ ಪ್ರಶ್ನೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ.

ಈ ನಡುವೆ ರಾಷ್ಟ್ರಪತಿ ಭವನದ ಟ್ವೀಟ್‍ನಲ್ಲಿ ಟಿಪ್ಪು ಬಗ್ಗೆ ಭಾಷಣದಲ್ಲಿ ಉಲ್ಲೇಖ ಮಾಡಲಾಗಿದ್ದ ಪದಗಳನ್ನ ತೆಗೆದು ಹಾಕಲಾಗಿದೆ. ಇದಕ್ಕೆ ಸ್ಪಷ್ಟನೆ ಏನು ಕೊಟ್ಟಿಲ್ಲ. ಹಾಗಾದರೆ ವಿಧಾನಮಂಡಲದಲ್ಲಿ ರಾಷ್ಟ್ರಪತಿಯ ಮಾತು ದಾಖಲಾಗಿದ್ದು, ಟ್ವೀಟ್‍ನಲ್ಲಿ ಮಾತ್ರ ಅದನ್ನ ತೆಗೆದರೆ ಏನರ್ಥ ಎಂಬ ವಿವಾದಗಳು ಹುಟ್ಟಿವೆ.

ಒಟ್ಟಾರೆ ರಾಷ್ಟ್ರಪತಿಯ ಭಾಷಣ ಕಾಂಗ್ರೆಸ್‍ಗೆ ವರವಾಗಿಯೂ, ರಾಜ್ಯ ಬಿಜೆಪಿಯವರಿಗೆ ಶಾಪವಾಗಿಯೂ ಕಾಡುತ್ತಾ, ವಿವಾದನ್ನು ಹೆಚ್ಚಿಸಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜು

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ