ದೇವರಹಿಪ್ಪರಗಿಯಲ್ಲಿ ಸ್ಪರ್ಧಿಸ್ತಾರ ಎಚ್ಡಿಕೆ..?

Kannada News

26-10-2017

ಬೆಂಗಳೂರು: 2018 ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕೆಂದು ತಂತ್ರ ರೂಪಿಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್‍.ಡಿ.ಕುಮಾರಸ್ವಾಮಿ ಅವರಿಗೆ ತಮ್ಮ ಕುಟುಂಬದಲ್ಲಿನ ಒಡಕು ತೀವ್ರ ತಲೆನೋವಾಗಿ ಪರಿಣಮಿಸಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಹಾಗೂ ಚೆನ್ನಪಟ್ಟಣ ಕ್ಷೇತ್ರದಿಂದ ತಮ್ಮ ಪತ್ನಿ ಅನಿತಾಕುಮಾರಸ್ವಾಮಿ ಕಣಕ್ಕಿಳಿಯಲು ಪಟ್ಟು ಹಿಡಿದಿರುವುದು ಇವರಿಗೆ ಮುಜುಗರ ಉಂಟಾಗುವಂತೆ ಮಾಡಿದೆ.

ಒಂದೇ ಕುಟುಂಬಕ್ಕೆ ಸೇರಿದವರು ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ತಪ್ಪು ಸಂದೇಶಕ್ಕೆ ಕಾರಣವಾಗಲಿದೆ ಎಂದು ಭಾವಿಸಿರುವ ಅವರು ಇದೀಗ. ತಮ್ಮ ಮೂಲಕ್ಷೇತ್ರ ರಾಮನಗರವನ್ನು ತೊರೆದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲು ಸಿದ್ದತೆ ಆರಂಭಿಸಿದ್ದಾರೆ. ಕುಮಾರಸ್ವಾಮಿ ಅವರ ನಿಲುವಿನ ಬಗ್ಗೆ ಪಕ್ಷದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಇದರ ಪೂರ್ವ ಸಿದ್ಧತೆಯಾಗಿ ಕುಮಾರಸ್ವಾಮಿ ನವೆಂಬರ್ ನಲ್ಲಿ ನಾಲ್ಕು ದಿನಗಳ ಕಾಲ ದೇವರ ಹಿಪ್ಪರಗಿ ಪ್ರವಾಸ ಮಾಡಲಿದ್ದಾರೆ. ಕ್ಷೇತ್ರದಲ್ಲಿ ಪ್ರತಿಯೊಂದು ಹಳ್ಳಿಗೆ ಭೇಟಿ ಕೊಟ್ಟು ಮತದಾರರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ನಿಮ್ಮನ್ನು ನಂಬಿ ಬರ್ತೀನಿ. ನನ್ನನ್ನು ಸೋಲಿಸಿದ್ರೆ ನಿಮಗೆ ಕಷ್ಟ. ನೀವು ನನ್ನನ್ನು ಗೆಲ್ಲಿಸಿದ್ರೆ ಮುಂದೆ ನಾನು ರಾಜ್ಯದ ಸಿಎಂ ಆಗ್ತೀನಿ. ಆಗ ನಿಮ್ಮ ಕ್ಷೇತ್ರಕ್ಕೆ ಇನ್ನಷ್ಟು ಒಳ್ಳೆಯದಾಗುತ್ತೆ ಅನ್ನೋ ಮೂಲಕ ಭಾವನಾತ್ಮಕವಾಗಿ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಯತ್ನಿಸಲಿದ್ದಾರೆ ಎಂದು ಹೇಳಲಾಗ್ತಿದೆ.

ಇತ್ತೀಚೆಗಷ್ಟೇ ಕಾಂಗ್ರೆಸ್‍ನಿಂದ ಅಮಾನತುಗೊಂಡು ಜೆಡಿಎಸ್‍ಗೆ ಸೇರ್ಪಡೆಯಾಗಿರುವ ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ತಮ್ಮ ಕ್ಷೇತ್ರವನ್ನು ಕುಮಾರಸ್ವಾಮಿಗೆ ಬಿಟ್ಟುಕೊಡಲಿದ್ದಾರೆ ಎನ್ನಲಾಗಿದೆ. ಕಾಂಗ್ರೇಸ್ ತೊರೆದಿರುವ ನಡಹಳ್ಳಿ ಮುದ್ದೇಬಿಹಾಳದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

 ಇವೆಲ್ಲದ್ದಕ್ಕೂ ಮೊದಲು ರಾಮನಗರದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಕರೆದು ರಾಮನಗರ ತೊರೆದು ದೇವರ ಹಿಪ್ಪರಗಿಯಲ್ಲಿ ಯಾಕೆ ಸ್ಪರ್ಧೆ ಅನ್ನೋ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

 

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ