ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಭಾರೀ ಸಿದ್ಧತೆ !

Kannada News

26-10-2017 366

ಬೆಂಗಳೂರು: ಕರ್ನಾಟಕದಲ್ಲಿ ಕಮಲ ಅರಳಿಸಲು ಪ್ರಯತ್ನ ನಡೆಸುತ್ತಿರುವ ಬಿಜೆಪಿ 70 ದಿನಗಳ ಪರಿವರ್ತನಾ ರ‍್ಯಾಲಿ ಆಯೋಜಿಸಿದೆ. ನವೆಂಬರ್ 2ರಿಂದ ಆರಂಭವಾಗಲಿರುವ ಈ ಯಾತ್ರೆ  ಸಂಪೂರ್ಣ ಯಶಸ್ವಿಯಾಗಬೇಕೆಂದು ತಾಕೀತು ಮಾಡಿರುವ ಪಕ್ಷದ ಅಧ್ಯಕ್ಷ ಅಮಿತ್‍ ಷಾ ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು ಎಂದು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಹೊತ್ತಿರುವ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ದೇಕರ್, ಪಿಯೂಷ್ ಗೋಯಲ್ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಲಿದ್ದಾರೆ.

70 ದಿನಗಳ ಕಾಲ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗಲಿರುವ ಈ ಯಾತ್ರೆಯ ಸಿದ್ದತೆ ಮತ್ತು ಚಾಲನೆ ನೀಡುವ ಶಕ್ತಿ ಪ್ರದರ್ಶನದ ಸಮಾವೇಶ ಆಯೋಜಿಸುವ ಕುರಿತಂತೆ ಈ ಇಬ್ಬರೂ ನಾಯಕರು ರಾಜ್ಯ ನಾಯಕರೊಂದಿಗೆ ಸುಧೀರ್ಘ ಸಭೆ ನಡೆಸಲಿದ್ದಾರೆ. ಸುಧೀರ್ಘ ಅವಧಿಯವರೆಗೆ ನಡೆಯಲಿರುವ ಈ ಯಾತ್ರೆ ಹೆಚ್ಚು ಜನಾಕರ್ಷಣೆ ಪಡೆಯಬೇಕು ಪಕ್ಷದ ಎಲ್ಲಾ ಹಂತದ ನಾಯಕರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕಾರ್ಯತಂತ್ರ ರೂಪಿಸಲಾಗಿದೆ.

ಯಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳಲು ಅನುವಾಗುವಂತೆ ಎರಡು ಅಥವಾ ಮೂರು ತಂಡಗಳನ್ನು ರಚಿಸಲಾಗುತ್ತಿದೆ. ಈ ತಂಡಗಳಲ್ಲಿ ಯಾರು ಯಾರು ಇರಬೇಕು ಎಂಬ ಬಗ್ಗೆ ಇಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಬೃಹತ್ ಯಾತ್ರೆ ನಡೆಯುತ್ತಿದ್ದು, ಯಾತ್ರೆಯಲ್ಲಿ ಹಣಕ್ಕಿಂತ ಮುಖ್ಯವಾಗಿ ಕಾರ್ಯಕರ್ತರ ಶಕ್ತಿ ಪ್ರದರ್ಶನವಾಗಬೇಕು ಎಂಬುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಶಯ. ಹೀಗಾಗಿ ಸಮಾವೇಶಗಳಿಗೆ ಖರ್ಚಿಲ್ಲದೆ ಜನ ಸೇರಿಸುವ ಯೋಜನೆ ರೂಪಿಸಲಾಗಿದೆ.

ರಾಜಕೀಯ ಕಾರ್ಯಕ್ರಮಗಳಿಗೆ ಜನ ಕರೆ ತರಲು ಸಾಕಷ್ಟು ಹಣ ವ್ಯಯಿಸುವುದು ಮಾಮೂಲಿ ವಿಚಾರ. ಆದರೆ ಈ ವಿಚಾರದಲ್ಲಿ ಬಿಜೆಪಿ ಭಿನ್ನ ಹೆಜ್ಜೆ ಇಟ್ಟಿದ್ದು, ಕಾರ್ಯಕರ್ತರು ಸ್ವಂತ ಖರ್ಚಿನಲ್ಲಿ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ದಶಕದ ಹಿಂದೆ ಬಿಜೆಪಿ ಪರ ಪ್ರಚಾರಕ್ಕೆ ಸ್ವಯಂ ಪ್ರೇರಣೆಯಿಂದ ಜನ ಆಗಮಿಸುತ್ತಿದ್ದರು, ಇದೀಗ ಅದೇ ವಾತಾವರಣ ಸೃಷ್ಟಿಸಬೇಕೆಂದು ಪಕ್ಷ ಬಯಸಿದ್ದು, ನ.2ರಂದು ಬೆಂಗಳೂರಿನಲ್ಲಿ ನಡೆಯುವ ಉದ್ಘಾಟನಾ ಸಮಾರಂಭಕ್ಕೆ 114 ವಿಧಾನಸಭಾ ಕ್ಷೇತ್ರಗಳ 27 ಸಾವಿರ ಬೂತ್ ಗಳಿಂದ ಕನಿಷ್ಠ 86 ಸಾವಿರ ಬೈಕ್ ಗಳಲ್ಲಿ 1.72 ಲಕ್ಷ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ನಗರದಿಂದ 1.30 ಲಕ್ಷ ಕಾರ್ಯಕರ್ತರು ಭಾಗಿಯಾಗಲಿದ್ದು, ಮಾಹಿತಿ ಪ್ರಕಾರ 3 ಲಕ್ಷಕ್ಕಿಂತ ಹೆಚ್ಚಿನ ಕಾರ್ಯಕರ್ತರ ಸಮಾವೇಶಗೊಳ್ಳಲಿದ್ದಾರೆ ಎನ್ನಲಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ