ಐನ್ಸ್‌ಟಿನ್ ವಾಕ್ಯದ ಬೆಲೆ 10 ಕೋಟಿ..

Kannada News

25-10-2017

ಐನ್ಸ್‌ಟಿನ್ ಬರೆದಿದ್ದ ವಾಕ್ಯವಿದ್ದ ಒಂದು ಕಾಗದದ ತುಂಡು ಇಸ್ರೇಲ್‌ ದೇಶದ ಜೆರೂಸಲೇಮ್ ನಲ್ಲಿ ಹರಾಜಾಗಿದೆ. ಒಂದೇ ವಾಕ್ಯದ ಈ ಕಾಗದ ತುಂಡು 1.56 ಮಿಲಿಯನ್ ಡಾಲರ್ ಅಂದರೆ ಸುಮಾರು ಹತ್ತುಕೋಟಿ ರೂಪಾಯಿಗಳಿಗೆ ಹರಾಜಾಗಿದೆ.

E = mc 2 ಥಿಯರಿ ಆಫ್ ರಿಲೇಟಿವಿಟಿ ಅಂದರೆ ಸಾಪೇಕ್ಷತಾ ಸಿದ್ಧಾಂತಕ್ಕಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಬಹುಮಾನ ಪಡೆದವರು ಪ್ರಸಿದ್ಧ ವಿಜ್ಞಾನಿ ಆಲ್‌ಬರ್ಟ್ ಐನ್ಸ್‌ಟಿನ್.

ಐನ್ಸ್‌ಟಿನ್ ಕೇವಲ ವಿಜ್ಞಾನಿ ಮಾತ್ರ ಆಗಿರಲಿಲ್ಲ, ಅವರೊಬ್ಬ ತತ್ವಜ್ಞಾನಿಯೂ ಆಗಿದ್ದರು. 1922ರಲ್ಲಿ ಅವರು ಸರಣಿ ಉಪನ್ಯಾಸಗಳನ್ನು ನೀಡುವ ಸಲುವಾಗಿ ಜಪಾನ್ ದೇಶದ ಪ್ರವಾಸದಲ್ಲಿದ್ದರು. ಅದೇ ಸಂದರ್ಭದಲ್ಲಿ ಬಂದ ಟೆಲಿಗ್ರಾಮ್, ಐನ್ಸ್‌ಟಿನ್ ಅವರಿಗೆ ನೊಬೆಲ್ ಪ್ರಶಸ್ತಿ ದೊರೆತಿದೆ ಎಂಬ ಸುದ್ದಿ ತಿಳಿಸಿತ್ತು. ಕೆಲಹೊತ್ತಿನಲ್ಲೇ ಈ ಬಗ್ಗೆ ಎಲ್ಲೆಡೆ ಸುದ್ದಿ ಹಬ್ಬಿತ್ತು, ಐನ್ಸ್‌ಟಿನ್ ಅವರು ಜಪಾನ್ ತಲುಪುತ್ತಿದ್ದಂತೆ ಸಾವಿರಾರು ಜನರು ಅವರನ್ನು ಸ್ವಾಗತಿಸುವ ಸಲುವಾಗಿ ಕಾಯ್ದುನಿಂತಿದ್ದರು. ತಮಗೆ ಸಿಕ್ಕ ಪ್ರಚಾರ ಮತ್ತು ಸ್ವಾಗತವನ್ನು ಕಂಡ ಐನ್ಸ್‌ಟಿನ್ ಅವರಿಗೆ ಒಂದಿಷ್ಟು ಖುಷಿಯಾದರೂ ಸಾಕಷ್ಟು ಮುಜುಗರವೂ ಆಯಿತು.

ಆ ಸಂದರ್ಭದಲ್ಲಿ ಟೋಕಿಯೋದ ಇಂಪೀರಿಯಲ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಐನ್ಸ್‌ಟಿನ್, ತಮ್ಮ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಒಂದು ಹಾಳೆಯ ಮೇಲೆ ಬರೆದಿಟ್ಟರು. ಅದೇ ಕ್ಷಣದಲ್ಲಿ ಅವರಿಗೆ ಏನನ್ನೋ ಕೊಡಲು ಪರಿಚಾರಕನೊಬ್ಬ ಅವರ ಕೋಣೆಗೆ ಬರುತ್ತಾನೆ. ಆದರೆ, ಅವನಿಗೆ ಟಿಪ್ ಕೊಡಲು ಇವರಿಗೆ ಏನೂ ಸಿಗುವುದಿಲ್ಲ. ತಕ್ಷಣವೇ ತಲೆ ಓಡಿಸಿದ ಐನ್ಸ್‌ಟಿನ್, ನೊಬೆಲ್ ಬಹುಮಾನ ವಿಜೇತನಾಗಿ ತಮಗೆ ಸಿಕ್ಕ ಸ್ಥಾನಮಾನದ ಬಗ್ಗೆ ಯೋಚಿಸಿ, ಆ ಪರಿಚಾರಕನಿಗೆ ತಮ್ಮ ಹಸ್ತದಿಂದ ಬರೆದ ಎರಡು ಪತ್ರಗಳನ್ನು ನೀಡುತ್ತಾರೆ. ‘ಇವನ್ನು ನೀನು ಇಟ್ಟುಕೋ ಮುಂದೊಂದು ದಿನ ನಿನಗೆ ಇವು ಸಾಮಾನ್ಯವಾಗಿ ಸಿಗುವ ಟಿಪ್ಸ್‌ ಗಿಂತ ಹೆಚ್ಚಿನ ಲಾಭ ಮಾಡಿಕೊಡುತ್ತವೆ’ ಎಂದು ಹೇಳುತ್ತಾರೆ. ಆ ಮಹಾ ವಿಜ್ಞಾನಿ ಹೇಳಿದ ಮಾತು ಸುಳ್ಳಂತೂ ಆಗಲಿಲ್ಲ ಅನ್ನುವುದಕ್ಕೆ ಒಂದು ಕಾಗದದ ತುಂಡು ಹತ್ತುಕೋಟಿ ರೂಪಾಯಿ ಗಳಿಸಿರುವುದೇ ಸಾಕ್ಷಿ, ಇಷ್ಟಕ್ಕೂ ಐನ್ಸ್‌ಟಿನ್ ಅವರು ಆ ಕಾಗದದ ತುಂಡಿನ ಮೇಲೆ ಏನು ಬರೆದಿದ್ದರು ಅನ್ನುವುದನ್ನು ತಿಳಿದರೆ ನಿಮಗೂ ಸಂತೋಷವಾಗುತ್ತದೆ. ‘

ಯಶಸ್ಸು ಪಡೆಯಲು ಪ್ರಯತ್ನಿಸುತ್ತಾ, ಒಂದೇ ಸಮ ಚಡಪಡಿಸುತ್ತಾ ಇರುವುದಕ್ಕಿಂತಲೂ, ಒಂದು ಶಾಂತ ಮತ್ತು ಸಾಧಾರಣವಾದ ಜೀವನ ಹೆಚ್ಚು ಸಂತೋಷವನ್ನು ಕೊಡುತ್ತದೆ.’- ಆಲ್‌ಬರ್ಟ್ ಐನ್ಸ್‌ಟಿನ್.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ