ಬಾಲಾಪರಾಧಿಗಳು ಮತ್ತು ಅತ್ಯಾಚಾರ

Kannada News

25-10-2017

ಬೆಂಗಳೂರು: ದೇಶದಲ್ಲಿ ಪ್ರತಿ ನಾಲ್ಕು ಗಂಟೆಗೆ ಒಬ್ಬ ಅಪ್ರಾಪ್ತರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದು, ಈ ಕೃತ್ಯದಲ್ಲಿ ಕನಿಷ್ಠ ಒಬ್ಬ ಬಾಲಾಪರಾಧಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ಪ್ರತಿ ನಾಲ್ಕು ತಾಸಿಗೆ ನಡೆಯುವ ಒಂದು ಅತ್ಯಾಚಾರ ಪ್ರಕರಣದಲ್ಲಿ ಕನಿಷ್ಠ ಒಬ್ಬ ಬಾಲಾಪರಾಧಿ ಬಂಧಿತನಾಗುತ್ತಿದ್ದಾನೆ. ಅದೇ ರೀತಿ ಪ್ರತಿ ಎರಡು ಗಂಟೆಗೊಮ್ಮೆ ಮಹಿಳೆಯ ಮೇಲೆ ಹಲ್ಲೆ ನಡೆಸುವ ಒಬ್ಬ ಅಪ್ರಾಪ್ತನನ್ನು ಬಂಧಿಸಲಾಗುತ್ತಿದೆ ಎನ್ನುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿಯ ವಾರ್ಷಿಕ ಅಂಕಿ ಅಂಶ ಮಾಹಿತಿಯಿಂದ ಬಹಿರಂಗಗೊಂಡಿದೆ.

ಕಳೆದ ವರ್ಷ ಜನವರಿ 1 ಮತ್ತು ಡಿಸೆಂಬರ್ 31ರ ನಡುವಣ ಅವಧಿಯಲ್ಲಿ ಅತ್ಯಾಚಾರ ಪ್ರಕರಣಗಳ ಸಂಬಂಧ 2,054 ಬಾಲಾಪರಾಧಿಗಳನ್ನು ಬಂಧಿಸಲಾಗಿದೆ (ಪ್ರತಿ 4 ಗಂಟೆ 20 ನಿಮಿಷಕ್ಕೆ ಒಂದು ಅತ್ಯಾಚಾರ) ಹಾಗೂ ಮಹಿಳೆಯರ ಮೇಲೆ ವಿವಿಧ ಕಾರಣಗಳಿಗಾಗಿ ಹಲ್ಲೆ ಮಾಡಿದ 1,627 ಅಪ್ರಾಪ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕಳೆದ ವರ್ಷದ ಅಂಕಿ ಅಂಶ ಮಾಹಿತಿ ಇದಾಗಿದ್ದು, 2017ರ ಅತ್ಯಾಚಾರ, ಹಲ್ಲೆ ಮೊದಲಾದ ಬಾಲಾಪರಾಧಿಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಬಾಲಾಪರಾಧಗಳು ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದಕ್ಕೆ ಕೇವಲ ಸಾಮಾಜಿಕ ಸಮಸ್ಯೆ ಮಾತ್ರ ಕಾರಣವಲ್ಲ. ಇದಕ್ಕೆ ಮಾನಸಿಕ ನ್ಯೂನತೆಗಳೂ ಕೂಡ ಕಾರಣ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞ ಡಾ.ಸಮತಾ ದೇಶಮಾನೆ ತಿಳಿಸುತ್ತಾರೆ

ಯೌವ್ವನಾವಸ್ಥೆಯಲ್ಲಿರುವ ಮಕ್ಕಳಿಗೆ ಮುಂದಿನ ಪರಿಣಾಮಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದೇ ಈ ಕೃತ್ಯಗಳಲ್ಲಿ ತೊಡಗುತ್ತಾರೆ. ಇಂಥ ದುಷ್ಟರಿಣಾಮಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎನ್ನುತ್ತಾರೆ ಮನಶಾಸ್ತ್ರಜ್ಞರಾದ ಸುಲತಾ ಶೆಣ್ಯೆ ಮತ್ತು ಬಿ.ಎನ್.ಗಂಗಾಧರ್.


ಸಂಬಂಧಿತ ಟ್ಯಾಗ್ಗಳು

Kannada News Karnataka ಬಾಲಾಪರಾಧಿ ಅತ್ಯಾಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ