ಫೋಟೋ ಸೆಷನ್ ಬಹಿಷ್ಕರಿಸಿದ ಜೆಡಿಎಸ್ !

Kannada News

25-10-2017

ಬೆಂಗಳೂರು: ರಾಷ್ಟ್ರಪತಿ ಅವರ ಜೊತೆಗಿನ ಗ್ರೂಪ್ ಫೋಟೋ ಸೆಷನ್ ಅನ್ನು ಜೆಡಿಎಸ್ ಬಹಿಷ್ಕರಿಸಿದೆ. ವಿಧಾನಸೌಧದ ವಜ್ರಮಹೋತ್ಸವದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ ವಿಧಾನಸೌಧ, ವಿಕಾಸಸೌಧ ನಡುವೆ ಇರುವ ಗಾಂಧಿ ಪ್ರತಿಮೆ ಎದುರು ಉಭಯ ಸದನಗಳ 300 ಮಂದಿ ಶಾಸಕರ ಜೊತೆ ಗುಂಪು ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮ ನಿಗದಿಯಾಗಿತ್ತು.

ರಾಷ್ಟ್ರಪತಿಯವರು ವಿಧಾನಸೌಧವನ್ನು ವೀಕ್ಷಿಸಿ ಗಾಂಧಿ ಪ್ರತಿಮೆ ಬಳಿ ಬರುವ ವೇಳೆಗೆ ಬಹುತೇಕ ಶಾಸಕರು ಮುಂಚಿತವಾಗಿಯೇ ಸ್ಥಳಕ್ಕೆ ಆಗಮಿಸಿದ್ದರು. ಅದೇ ರೀತಿ ಜೆಡಿಎಸ್ ಶಾಸಕರು ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸ್ಥಳಕ್ಕಾಗಮಿಸಿದರಾದರೂ ಅಲ್ಲಿ ಸರಿಯಾದ ಶಿಷ್ಟಾಚಾರ ಪಾಲನೆಯಾಗಿರಲಿಲ್ಲ.

ಕುಮಾರಸ್ವಾಮಿಯವರು ಅಲ್ಲಿಗೆ ಬಂದಾಗ ಕುಳಿತುಕೊಳ್ಳಲು ಅವರಿಗೆ ಕುರ್ಚಿ ಇರಲಿಲ್ಲ. ಜೆಡಿಎಸ್‍ನ ಅತ್ಯಂತ ಹಿರಿಯ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಅವರಿಗೂ ಯಾವುದೇ ಕುರ್ಚಿ ಇರಲಿಲ್ಲ. ಇದರಿಂದ ಸಿಟ್ಟಾದ ಜೆಡಿಎಸ್ ಶಾಸಕರು ಫೋಟೋ ಸೆಷನ್ ಅನ್ನು ಬಹಿಷ್ಕರಿಸುವಂತೆ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿದರು. ಶಾಸಕರ ಒತ್ತಡಕ್ಕೆ ಮಣಿದ ಕುಮಾರಸ್ವಾಮಿ ಅಲ್ಲಿಂದ ನಿರ್ಗಮಿಸಿದರು.

ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ರೈತರು ತೊಂದರೆಯಲ್ಲಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಅದ್ಧೂರಿ ವೆಚ್ಚ ಬೇಕಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾವು ವಜ್ರಮಹೋತ್ಸವದಲ್ಲಿ ಏರ್ಪಡಿಸಿರುವ ಭೋಜನಕೂಟದಲ್ಲಿ ಭಾಗವಹಿಸುವುದಿಲ್ಲ ಮತ್ತು ಫೋಟೋ ತೆಗೆಸಿಕೊಳ್ಳುವುದರಲ್ಲೂ ನನಗೆ ಆಸಕ್ತಿ ಇರಲಿಲ್ಲ, ಹಾಗಾಗಿ ನಿರ್ಗಮಿಸುತ್ತಿದ್ದೇವೆ ಎಂದು ಹೇಳಿದರು.

ಬಸವರಾಜ ಹೊರಟ್ಟಿ ಮಾತನಾಡಿ, ಕಾರ್ಯಕ್ರಮ ಮಾಡಿದವರಿಗೆ ಕನಿಷ್ಠ ಪ್ರಮಾಣದ ಶಿಷ್ಟಾಚಾರ ಗೊತ್ತಿಲ್ಲ. ಜಗದೀಶ್‍ಶೆಟ್ಟರ್ ಅವರಿಗೆ ಕುರ್ಚಿ ಹಾಕಿದ ಮೇಲೆ ಕುಮಾರಸ್ವಾಮಿಯವರಿಗೂ ಒಂದು ಕುರ್ಚಿ ಹಾಕಬೇಕಿತ್ತು. ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ. ಹೀಗಾಗಿ ಫೋಟೋ ಸೆಷನ್‍ನಲ್ಲಿ ತಾವು ಭಾಗವಹಿಸುತ್ತಿಲ್ಲ. ಉಭಯ ಸದನಗಳ ಅಧ್ಯಕ್ಷರ ನಡವಳಿಕೆಯಿಂದ ನಮಗೆ ಅಸಮಾಧಾನವಾಗಿದೆ, ಹಾಗಾಗಿ ನಾವು ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

 



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ