‘ರಾಜ್ಯಾದ್ಯಂತ ವಿದ್ಯುತ್ ತುರ್ತು ಪರಿಸ್ಥಿತಿ’

Kannada News

24-10-2017

ಬೆಂಗಳೂರು: ಕಲ್ಲಿದ್ದಲಿನ ತೀವ್ರ ಕೊರತೆಯ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ವಿದ್ಯುತ್ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ. ರಾಜ್ಯಕ್ಕೆ ಅಗತ್ಯವಾದ ವಿದ್ಯುತ್ ತಯಾರಿಸಲು ಕೇವಲ ಅರ್ಧ ದಿನಕ್ಕೆ ಸಾಲುವಷ್ಟು ಕಲ್ಲಿದ್ದಲು ಮಾತ್ರ ಇದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳ ಮಟ್ಟಿಗೆ ವಿದ್ಯುತ್ ಎಮರ್ಜೆನ್ಸಿಯನ್ನು ಹೇರಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.

ಕಲ್ಲಿದ್ದಲಿನ ಸಮಸ್ಯೆ ರಾಜ್ಯದ ಸಮಸ್ಯೆ ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳ ಸಮಸ್ಯೆ. ನ್ಯಾಯಾಲಯದ ತೀರ್ಪಿನಿಂದ ಇಂತಹದೊಂದು ಸಮಸ್ಯೆ ಸೃಷ್ಟಿಯಾಗಿದೆ ಎಂದು ಅವರು ವಿವರ ನೀಡಿದರು. ಹೀಗಾಗಿ ಎಲ್ಲಿಂದಲಾದರೂ ಸರಿ, ಟೆಂಡರ್ ನಂತಹ ಪ್ರಕ್ರಿಯೆಗಳಿಗೆ ಕೈ ಹಾಕದೆ ಕಲ್ಲಿದ್ದಲು ಪೂರೈಕೆಯಾಗುವಂತೆ ನೋಡಿಕೊಳ್ಳಿ. ಜನರಿಗೆ ವಿದ್ಯುತ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಅವರು ಹೇಳಿದರು.

ನಾವು ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ಕೊರತೆಯನ್ನು ನಿವಾರಿಸಿದ್ದೇವೆ. ನಾವು ಅಧಿಕಾರಕ್ಕೆ ಬರುವ ಮುಂಚೆ ಪವರ್ ಕಟ್ ಆಗುತ್ತಿತ್ತು. ಆದರೆ ಈಗ ಅಂತಹ ಸಮಸ್ಯೆ ಇಲ್ಲ ಎಂದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಸ್ಥಾಪಿತ ವಿದ್ಯುತ್ ಸಾಮರ್ಥ್ಯ ಪ್ರಮಾಣ ಹದಿನಾಲ್ಕು ಸಾವಿರ ಮೆಗಾವ್ಯಾಟ್‍ಗಳಷ್ಟಿತ್ತು. ಈಗ ಹತ್ತೊಂಬತ್ತು ಸಾವಿರದ ಐದು ನೂರು ಮೆಗಾವ್ಯಾಟ್‍ಗಳಿಗೇರಿದೆ ಎಂದರು.

ಈ ವರ್ಷ ಬೇಸಿಗೆಯಲ್ಲಿ ಹತ್ತು ಸಾವಿರ ಮೆಗಾವ್ಯಾಟ್‍ ನಷ್ಟು ವಿದ್ಯುತ್‍ಗೆ ಬೇಡಿಕೆ ಇತ್ತು.ಅದನ್ನು ಯಾವ ಸಮಸ್ಯೆಯೂ ಇಲ್ಲದೆ ಪೂರೈಸಿದ್ದೇವೆ ಎಂದ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ತಾಲ್ಲೂಕುಗಳೂ ವಿದ್ಯುತ್ ಉತ್ಪಾದನೆಯ ವಿಷಯದಲ್ಲಿ ಸ್ವಾವಲಂಬಿಗಳಾಗಲಿವೆ ಎಂದರು.

ಈಗಾಗಲೇ ತೊಂಭತ್ತೈದು ತಾಲ್ಲೂಕುಗಳಲ್ಲಿ ಆಯಾ ತಾಲ್ಲೂಕಿನ ಅಗತ್ಯಕ್ಕನುಗುಣವಾದ ವಿದ್ಯುತ್ ಪೂರೈಕೆ ಮಾಡಲು ಪೂರಕವಾದ ಘಟಕಗಳನ್ನು ಸ್ಥಾಪಿಸುವ ಕಾರ್ಯ ನಡೆದಿದೆ. ಇದರಿಂದ ಸುಮಾರು ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಉಳಿದಂತೆ ಎಲ್ಲ ತಾಲ್ಲೂಕುಗಳಲ್ಲೂ ಮುಂದಿನ ಕೆಲ ಕಾಲದಲ್ಲಿ ಇಂತಹ ಘಟಕಗಳು ಪ್ರಾರಂಭವಾಗಲಿವೆ. ಪಾವಗಡದಲ್ಲಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣವಾಗಿದ್ದು ಈಗಾಗಲೇ ಆರು ನೂರು ಮೆಗಾವ್ಯಾಟ್‍ ನಷ್ಟು ವಿದ್ಯುತ್ ಲಭ್ಯತೆಗೆ ದಾರಿ ಮಾಡಿಕೊಡಲಾಗಿದೆ ಎಂದರು.

ಇದೇ ರೀತಿ ರಾಜ್ಯದಲ್ಲಿ ನೂರಾ ಇಪ್ಪತ್ನಾಲ್ಕು ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಇನ್ನೂರಾ ಎಂಭತ್ತು ವಿದ್ಯುತ್ ಉಪಕೇಂದ್ರಗಳನ್ನು ಉನ್ನತೀಕರಣಗೊಳಿಸಲಾಗಿದೆ. ಆ ಮೂಲಕ ವಿದ್ಯುತ್ ಪ್ರಸರಣ ಕಾರ್ಯ ಸಮರ್ಪಕವಾಗಿ ನಡೆದಿದೆ ಎಂದು ಹೇಳಿದರು. ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳಿಗೆ 82700 ಹುದ್ದೆಗಳು ಮಂಜೂರಾಗಿದ್ದು 33 ಸಾವಿರ ಖಾಲಿ ಹುದ್ದೆಗಳ ಪೈಕಿ 21516 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ವಿವರ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ