ಮೋದಿ ವಿರುದ್ಧ ಗುಡುಗಿದ ಮೊಯ್ಲಿ !

Kannada News

24-10-2017 320

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗುತ್ತಿದ್ದು, ಮುಂಬರುವ ಕರ್ನಾಟಕ, ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ, ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಭವಿಷ್ಯ ನುಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ ನಲ್ಲಿ ಸೋಲಿನ ಭೀತಿಯಿಂದ ಚುನಾವಣೆಯನ್ನು ಮುಂದೂಡಿಸಿಕೊಂಡು ಬರಲಾಗುತ್ತಿದೆ. ಚುನಾವಣಾ ಆಯೋಗ ಆರಂಭವಾದಾಗಿನಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿದಿರಲಿಲ್ಲ. ಈ ರೀತಿ ಚುನಾವಣೆ ದಿನಾಂಕ ಪ್ರಕಟಿಸಿದೆ ಪ್ರಧಾನಿ ಹೇಳಿದ ದಿನಕ್ಕೆ ಚುನಾವಣೆ ನಡೆಸುತ್ತೇವೆ ಎನ್ನುವುದು ಸಂವಿಧಾನಕ್ಕೆ ಮಾಡಿದ ಅಪರಾಧವೆಂದು ಗುಡುಗಿದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದೆ. ಸರಕು ಮತ್ತು ಸೇವಾ ತೆರಿಗೆ ಜಾರಿ, ನೋಟು ಅಮಾನ್ಯೀಕರಣ ಸೇರಿದಂತೆ ವಿವಿಧ ಕಾರಣಗಳಿಂದ ಆರ್ಥಿಕ ಪರಿಸ್ಥಿತಿ ಕುಗ್ಗಿ ಅಧಃಪತನದ ಹಾದಿ ಹಿಡಿದಿದೆ. ಜಿಡಿಪಿ ದರ ಶೇ.4 ರಷ್ಟು ಕುಸಿದು ಹೋಗಿದ್ದು, ಇಷ್ಟೊಂದು ಪ್ರಮಾಣದಲ್ಲಿ ಯಾವ ಕಾಲದಲ್ಲೂ ಜಿಡಿಪಿ ಕುಸಿದಿರಲಿಲ್ಲ. ಇನ್ನು ದೇಶವನ್ನು ಹಸಿವು ಮುಕ್ತ, ನಿರುದ್ಯೋಗ ಮುಕ್ತ ಮಾಡುವಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೇಶದ ಜನ ತಿರುಗಿಬೀಳುವ ಕಾಲ ಬಹು ದೂರವಿಲ್ಲ. ಅದು ಮುಂಬರುವ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನೆಲ ಕಚ್ಚಲಿದ್ದು, ಈ ಮೂವರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ರಂಗಗಳಲ್ಲೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಧಿಕಾರಕ್ಕೆ ಬಂದರೆ ಲೋಕ್ ಪಾಲ್ ಮಸೂದೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದ ಪ್ರಧಾನಿ ಮೋದಿ ಮೂರು ವರ್ಷಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಲೋಕ್ ಪಾಲ್ ಮಸೂದೆ ಜಾರಿಗಾಗಿ ಹೋರಾಟ ನಡೆಸಿದ ಬಾಬಾ ರಾಮ್ ದೇವ್ ದೇಶದ 10 ಶ್ರೀಮಂತರಲ್ಲಿ ಒಬ್ಬರು ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಅದಕ್ಕೆ ಎನ್‍ಡಿಎ ಸರ್ಕಾರವೇ ಕಾರಣ. ರಾಮ್ ದೇವ್ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ರಾಜಕೀಯ ಕಾರಣಕ್ಕಾಗಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರುತರುವ ಉದ್ದೇಶದಿಂದ ಬೋಫೋರ್ಸ್ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಿದ್ದಾರೆ. ಇದರಿಂದ ಯಾವುದೇ ಲಾಭವಾಗುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ದೇಶದಲ್ಲೇ ಅತ್ಯುತ್ತಮ ಸರ್ಕಾರ ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಕಳೆದ 5 ವರ್ಷಗಳಿಂದ ರಾಜ್ಯದಲ್ಲಿ ಸತತ ಬರಗಾಲವಿದ್ದರೂ ಯಾರೊಬ್ಬರು ಹಸಿವಿನಿಂದ ಸತ್ತ ಉದಾಹರಣೆ ರಾಜ್ಯದಲ್ಲಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ದೇಶದಲ್ಲಿ ಅತ್ಯುತ್ತಮವಾಗಿದೆ ಎಂದರು.

ಸಿದ್ದರಾಮಯ್ಯ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತವನ್ನು ನೀಡುತ್ತಿದ್ದು, ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ