ಬೆಕ್ಕು, ನಾಯಿ ಸಾಕಿದ್ದೀರಾ..? ಟ್ಯಾಕ್ಸ್ ಕಟ್ಟಿ…

Kannada News

24-10-2017

ನಿಮ್ಮನೇಲೇನಾದ್ರೂ ಬೆಕ್ಕು, ನಾಯಿ ಸಾಕಿದ್ದೀರಾ? ಏನಂದ್ರಿ? ಹಸು, ಎಮ್ಮೆ, ಕುದುರೆ, ಹಂದಿನೂ ಸಾಕಿದ್ದೀವಿ ಅಂದ್ರಾ? ಹಾಗಿದ್ರೆ ಇನ್ನು ಮುಂದೆ ಇವಕ್ಕೆಲ್ಲಾ ಟ್ಯಾಕ್ಸ್ ಕಟ್ಟೋಕ್ಕೆ ರೆಡಿ ಆಗಬೇಕು ನೀವು.

ಹೌದು, ನಿನ್ನೆಯಷ್ಟೇ ಹರಿಯಾಣ ಸರ್ಕಾರದವರು ನಗರ ಪ್ರದೇಶಗಳಲ್ಲಿ ಹಸು ಸಾಕಿಕೊಂಡು ಹಾಲು ಕುಡಿಯೋ ಆಸೆ ಇರೋರಿಗಾಗಿ ದನಗಳ ಪಿಜಿ ಅಕಾಮಡೇಷನ್ ವ್ಯವಸ್ಥೆ ಮಾಡ್ತೀವಿ ಅಂತ ಹೇಳಿದ್ರು. ಇದಕ್ಕೆ ಉತ್ತರವೇನೋ ಎಂಬಂತೆ, ಇವತ್ತು ಪಂಜಾಬ್  ಸರ್ಕಾರ, ಇಡೀ ದೇಶದಲ್ಲೇ ಯಾರೂ ಮಾಡದೇ ಇರೋ ಒಂದು ಹೊಸ ಆರ್ಡರ್ ಮಾಡಿದೆ. ಇನ್ನು ಮುಂದೆ ನಗರ ಪ್ರದೇಶಗಳು ಅಂತ ಕರೆಸಿಕೊಳ್ಳೋ ಎಲ್ಲಾ ಕಡೆ ಯಾರುಯಾರು ಬೆಕ್ಕು, ನಾಯಿ, ಹಸು, ಎಮ್ಮೆ, ಕುದುರೆ ಇತ್ಯಾದಿಗಳನ್ನು ಸಾಕಿದ್ದಾರೋ ಅವರೆಲ್ಲಾ ಟ್ಯಾಕ್ಸ್ ಕಟ್ಟಬೇಕಂತೆ.

ಮಾಜಿ ಕ್ರಿಕೆಟಿಗ, ಜೋಕುಗಳ ಸರದಾರ ಮತ್ತು ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿರುವ ನವಜೋತ್ ಸಿಂಗ್ ಸಿದ್ಧು ಅವರ ನೇತೃತ್ವದ ಸ್ಥಳೀಯ ಆಡಳಿತ ಇಲಾಖೆ ಈ ಆದೇಶ ಜಾರಿ ಮಾಡಿದೆ. ಈ ಆದೇಶದ ಪ್ರಕಾರ ಬೆಕ್ಕು, ನಾಯಿ, ಹಂದಿ, ಕುರಿ ಸಾಕುವವರು ಪ್ರತಿ ಪ್ರಾಣಿಗೆ ವರ್ಷಕ್ಕೆ 250 ರೂಪಾಯಿ ತೆರಿಗೆ ಕಟ್ಟಬೇಕಂತೆ. ಹಸು, ಎಮ್ಮೆ, ಕುದುರೆ, ಆನೆ, ಒಂಟೆ ಸಾಕುವವರಿಂದ ಪ್ರಾಣಿಯೊಂದಕ್ಕೆ ಪ್ರತಿವರ್ಷ 500 ರೂಪಾಯಿ ತೆರಿಗೆ ವಸೂಲಿ ಮಾಡಲಾಗುವುದಂತೆ. ಈ ರೀತಿ ತೆರಿಗೆ ವ್ಯಾಪ್ತಿಗೆ ಬರುವ ಎಲ್ಲಾ ಪ್ರಾಣಿಗಳ ಗುರುತಿಗಾಗಿ ಪ್ರತ್ಯೇಕ ಕೋಡ್ ನಂಬರ್ ನೀಡಿ ಅವುಗಳ ಕಿವಿಗಳ ಮೇಲೆ ಮೈಕ್ರೋಚಿಪ್ ಅಳವಡಿಸಲಾಗುತ್ತದಂತೆ. 

ಪಂಜಾಬ್ ಸರ್ಕಾರದ ಈ ಆದೇಶ ಹಾಗೂ ಹಸುಗಳಿಗೆ ಪಿಜಿ ಅಕಾಮಡೇಷನ್ ಒದಗಿಸಲು ಮುಂದಾಗಿರುವ ಹರಿಯಾಣ ಸರ್ಕಾರದ ಆದೇಶಗಳೆರಡೂ ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗಿ ಕಂಡು ಬರುತ್ತಿವೆ.  ಚಂಡೀಗಡ ನಗರವನ್ನು ತಮ್ಮ ರಾಜಧಾನಿಯಾಗಿ ಹೊಂದಿರುವ ಈ ಎರಡೂ ಸರ್ಕಾರಗಳ ನಿರ್ಧಾರಕ್ಕೆ, ಅಲ್ಲಿನ ಜನಸಾಮಾನ್ಯರು, ಬುದ್ಧಿಜೀವಿಗಳು, ವಿರೋಧ ಪಕ್ಷಗಳ ಮುಖಂಡರು ಏನು ಪ್ರತಿಕ್ರಿಯೆ ನೀಡುತ್ತಾರೆ ಅನ್ನುವುದು ಕುತೂಹಲಕರವಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ