ಇಲಿ-ಹುಳುಗಳ ಪಾಲಾದ ಅನ್ನಭಾಗ್ಯ ಗೋಧಿ !

Kannada News

24-10-2017

ಬೆಂಗಳೂರು: ನಗರದ ಹೊರವಲಯದ ಆನೇಕಲ್, ಜಿಗಣಿ ಹಾಗೂ ಸರ್ಜಾಪುರದಲ್ಲಿರುವ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಗೋದಾಮುಗಳಲ್ಲಿ ಅನ್ನಭಾಗ್ಯ ಯೋಜನೆಯ ಗೋಧಿ, ಬೇಳೆ, ಅಕ್ಕಿ ಇನ್ನಿತರ ಟನ್‍ ಗಟ್ಟಲೇ ಆಹಾರ ಪದಾರ್ಥಗಳು ಹುಳ ಹಿಡಿದು ಕೊಳೆಯುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋದಾಮುಗಳಲ್ಲೇ ಕೊಳೆಯುತ್ತಿರುವುದರಿಂದ ಸರ್ಕಾರ ನೂರಾರು ಕೋಟಿ ರೂ. ನೀಡಿ ಖರೀದಿಸಿದ್ದ ಪಡಿತರ ಉಪಯೋಗವಿಲ್ಲದೇ ವ್ಯರ್ಥವಾಗುತ್ತಿದೆ.

ಆನೇಕಲ್ ಪಟ್ಟಣದ ಗೋದಾಮಿನಲ್ಲಿ 331 ಕ್ವಿಂಟಾಲ್, ಜಿಗಣಿಯಲ್ಲಿ 125 ಕ್ವಿಂಟಲ್ ಹಾಗೂ ಸರ್ಜಾಪುರದಲ್ಲಿ 100 ಕ್ವಿಂಟಾಲ್ ಗೋಧಿ ಪತ್ತೆಯಾಗಿದ್ದು, ಸಂಪೂರ್ಣವಾಗಿ ಹಾಳಾಗಿದ್ದು ಮನುಷ್ಯ ತಿನ್ನಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ.

ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆಯೇ ಈ ಗೋಧಿಯನ್ನು ಖರಿದೀ ಮಾಡಿದ್ದು, ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಇಲಿಗಳ ಪಾಲಾಗಿದೆ. ರಾಜ್ಯ ಸರ್ಕಾರ ಗೋಧಿ ವಿತರಣೆಯನ್ನು ಅವೈಜ್ಞಾನಿಕವಾಗಿ ನಿಲ್ಲಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ, ಇಲಾಖೆಯ ಮೂಲಗಳ ಪ್ರಕಾರ ರಾಜ್ಯಾದ್ಯಂತ 1,25 ಲಕ್ಷ ಕ್ವಿಂಟಾಲ್ ಗೋಧಿ ಹೀಗೆ ಕೊಳೆಯುತ್ತಿದೆ ಎಂದು ತಿಳಿದುಬಂದಿದೆ.

ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಇತರೇ ಆಹಾರ ಪದಾರ್ಥಗಳಾದ ರಾಗಿಯೂ ಇದೇ ರೀತಿ ಕೊಳೆಯುತ್ತಿದೆ. ಬಡ ಜನರ ಹಸಿವನ್ನು ನೀಗಿಸುವ ಪ್ರಮುಖ ಯೋಜನೆಯಾಗಿ ರಾಜ್ಯ ಸರ್ಕಾರ ಹೆಮ್ಮೆಯಿಂದ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಬಡವರ ಹಸಿವನ್ನು ನೀಗಿಸ ಬೇಕಾದ ಆಹಾರ ಕೊಳೆಯುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಆಹಾರ ಪದಾರ್ಥಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ನಾವು ಈಗಾಗಲೇ ಆಹಾರ ಪದಾರ್ಥದ ಸ್ಯಾಂಪಲ್‍ ಗಳನ್ನು ಪರೀಕ್ಷೆ ಮಾಡಲು ಲ್ಯಾಬ್‍ಗೆ ಕಳುಹಿಸಿಕೊಟ್ಟಿದ್ದೇವೆ. ವರದಿ ಬಂದ ನಂತರ ಆಹಾರ ಜನರು ತಿನ್ನಲು ಯೋಗ್ಯವಾಗಿದ್ದಲ್ಲಿ ಅದನ್ನು ವಿತರಣೆ ಮಾಡುತ್ತೇವೆ. ಮುಂದಿನ ಕ್ರಮವನ್ನು ಉನ್ನತ ಅಧಿಕಾರಿಗಳು ಕೈಗೊಳ್ಳುತ್ತಾರೆ ಎಂಬ ಉತ್ತರ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಅನ್ನಭಾಗ್ಯ ಯೋಜನೆ ಗೋದಾಮು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ