‘ಯಾರೇ ಅಗಲಿ, ಇತಿಹಾಸ ತಿರುಚಬಾರದು’

Kannada News

24-10-2017 369

ಬೆಂಗಳೂರು: ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿ ನಾಯಕರಾದ ಯಡಿಯೂರಪ್ಪ, ಜಗದೀಶ ಶೆಟ್ಟರ್, ಅಶೋಕ್ ಮೊದಲಾದವರು ಈ ಹಿಂದೆ ಟಿಪ್ಪು ವೇಷಧಾರಿಗಳಾಗಿ ಜಯಂತಿ ಆಚರಣೆ ಮಾಡಿದ್ದೇಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

ವಿಧಾನಸಭೆಗೆ ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕೆ ಟಿಪ್ಪು ಜಯಂತಿ ವಿರೋಧ ಮಾಡುತ್ತಿರುವ ಬಿಜೆಪಿಯವರದ್ದು ಎರಡು ನಾಲಿಗೆ ಅಲ್ಲವೇ ? ಜನ ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇ ಎಂದರು.  ಯಡಿಯೂರಪ್ಪ ಅವರು ಟಿಪ್ಪು ವೇಷಧಾರಿಯಾಗಿ ಖಡ್ಗ ಹಿಡಿದು, ನಾನು ಮತ್ತೆ ಬಿಜೆಪಿ ಸೇರುವುದಿಲ್ಲ. ಎಂದು ಕೂಗಿದ್ದೇ ಕೂಗಿದ್ದು. ಇಂತಹ ರಾಜಕೀಯ ಇಬ್ಬಂದಿತನ ಜನರಿಗೂ ಗೊತ್ತಾಗುತ್ತದೆ. ಆಗೊಂದು, ಈಗೊಂದು ನಾಟಕವಾಡುವ ಯಡಿಯೂರಪ್ಪ ಅವರ ಮಾತಿಗೆ ಏನಾದರೂ ಕಿಮ್ಮತ್ತು ಇದೆಯೇ ಎಂದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿಯಾಗಿ ಅಶೋಕ್ ಟಿಪ್ಪು ವೇಷಧಾರಿಗಳಾಗಿಯೇ ಜಯಂತಿ ಆಚರಿಸಿದ್ದರು. ಅಷ್ಟೇ ಅಲ್ಲ, ಟಿಪ್ಪು ಕುರಿತಾದ ಪುಸ್ತಕಕ್ಕೆ ಮುನ್ನುಡಿ ಬರೆದು ಶೆಟ್ಟರ್ ಅವರು ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ. ಅವರೆಲ್ಲ ಈಗ ವಿರೋಧ ಮಾಡುತ್ತಿರುವುದು ರಾಜಕೀಯ ಪ್ರೇರಿತ ಅಷ್ಟೇ ಎಂದರು.

ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿ ವಿರೋಧ ಮಾಡುತ್ತಿರುವ ಬಿಜೆಪಿ ನಾಯಕರು ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ವುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಯವರು ಹೇಳಿದರು. ಬಿಜೆಪಿ ನಾಯಕರ ಈ ನಡವಳಿಕೆ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ. ಕಾನೂನು ಕೈಗೆ ತೆಗೆದುಕೊಳ್ಳಲು ನಾವು ಅವಕಾಶ ನೀಡುವುದಿಲ್ಲ. ಟಿಪ್ಪು ಜಯಂತಿ ಆಚರಣೆ. ಸರ್ಕಾರದ ತೀರ್ಮಾನ. ಅದನ್ನು ವಿರೋಧಿಸುವವರಿಗೆ ಸಂವಿಧಾನ ಗೊತ್ತಿಲ್ಲ ಎಂದು ಮುಖ್ಯಮಂತ್ರಿಯವರು ಹೇಳಿದರು.

ಟಿಪ್ಪು ಜಯಂತಿ ಆಚರಿಸುವವರನ್ನು ಗಲ್ಲಿಗೇರಿಸಬೇಕು ಎಂಬ ಸಂಘ ಪರಿವಾರದ ಮುಖಂಡರ ಹೇಳಿಕೆಗೆ ಮುಖ್ಯಮಂತ್ರಿಯವರು ಪ್ರತಿಕ್ರಿಯಿಸಿ, ಜನಪ್ರತಿನಿಧಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಸಂವಿಧಾನಕ್ಕೆ ಗೌರವ ನೀಡುವುದಾಗಿ ಹೇಳುತ್ತಾರೆ. ಈಗ ಈ ರೀತಿ ಮಾತನಾಡಿ ಅಗೌರವ ತೋರಿಸುತ್ತಾರೆ ಎಂದರು.

ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಗೆ ವಿವಾದ ಸ್ವರೂಪ ನೀಡಲು ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವುದು ಅವರ ಲೆಕ್ಕಾಚಾರ. ದೇವನಹಳ್ಳಿಯಲ್ಲಿ ಜನಿಸಿದ ಟಿಪ್ಪು ಕನ್ನಡಿಗರಲ್ಲವೇ ? ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿಲ್ಲವೇ? ಮೂರನೇ ಯುದ್ಧದಲ್ಲಿ ಬ್ರಿಟಿಷರಿಗೆ ಖರ್ಚು ನೀಡಲಾಗದೆ ತನ್ನ ಮಕ್ಕಳನ್ನೇ ಅಡ ಇಟ್ಟವರು ಟಿಪ್ಪು ಎಂದರು. 

ಟಿಪ್ಪು ಮುಸ್ಲಿಂ ಆಗಿರಬಹುದು. ಆದರೆ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವೀರ ಮರಣವನ್ನಪ್ಪಿದ್ದು ಸುಳ್ಳೇ. ಯಾರೇ ಅಗಲಿ, ಇತಿಹಾಸವನ್ನು ತಿರುಚಬಾರದು ಎಂದರು.

ಇನ್ನು, ಇಂಧನ ಇಲಾಖೆಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾಗಿರುವ ಅವ್ಯವಹಾರದ ತನಿಖೆಗೆ ಸಚಿವ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸದನ ಸಮಿತಿ ವರದಿ ಕೊಡಲಿ. ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಯಿಸಿದರು.

 ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಶೋಭಾ ಕರಂದ್ಲಾಜೆ ಅವರು ಇಂಧನ ಸಚಿವರಾಗಿದ್ದಾಗ ವಿದ್ಯುತ್ ಖರೀದಿಯಲ್ಲಿ ಭ್ರಷ್ಟಾಚಾರದ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಸಮಿತಿ ರಚನೆ ಆಗಿದೆ. ಭ್ರಷ್ಟಾಚಾರ ನಡೆದಿದ್ದರೆ ಅದಕ್ಕೆ ಅಧಿಕಾರಿಗಳು ಹೊಣೆ ಎಂದು ಶೋಭಾ ಕರಂದ್ಲಾಜೆ ಅವರು ಹೇಳುವುದು ಸರಿಯಲ್ಲ. ಇಲಾಖೆಯಲ್ಲಿ ಏನಾದರೂ ನಡೆದರೆ ಉತ್ತರ ನೀಡುವವರು ಯಾರು. ಮಂತ್ರಿಗಳೇ ಅಲ್ಲವೇ. ತಪ್ಪಿಸಿಕೊಳ್ಳಲು ಶೋಭಾ ಅವರು ಆ ರೀತಿ ಹೇಳುತ್ತಿದ್ದಾರೆ ಎಂದರು.

ಸದನ ಸಮಿತಿ ವರದಿ ನೀಡಿದ ಬಳಿಕ ತನಿಖೆಯನ್ನು ಯಾವ ಸಂಸ್ಥೆಗೆ ವಹಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು. ಈಗಲೇ ಆ ಬಗ್ಗೆ ಹೇಳಲಾಗದು. ಆದಾಯ ತೆರಿಗೆ ಅಧಿಕಾರಿಗಳು ಕಾಂಗ್ರೆಸ್ಸಿಗರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಇದರಿಂದ ರಾಜಕೀಯವಾಗಿ ಅನುಕೂಲ ಆಗುತ್ತದೆ ಎಂದು ಬಿಜೆಪಿಯವರು ಭಾವಿಸಿದಂತಿದೆ. ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡು ದಾಳಿ ಮಾಡಿಸುವ ಕೇಂದ್ರ ಸರ್ಕಾರ ಇದು ಎಂದು ಮಾಜಿ ಸಚಿವ ಯಶವಂತ ಸಿನ್ಹಾ ಅವರೇ ಹೇಳಿದ್ದಾರೆ ಎಂದು ನೆಪಿಸಿದರು.

ಐಟಿ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ. ಕಾಂಗ್ರೆಸ್ಸಿಗರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುವುದೇಕೆ ? ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್ ಅವರ ಮನೆಗಳ ಮೇಲೆ ಏಕೆ ದಾಳಿ ಆಗುವುದಿಲ್ಲ, ಅದಕ್ಕೆ ಹೇಳುವುದು ದಾಳಿ ರಾಜಕೀಯ ಪ್ರೇರಿತ ಎಂದರು.ಸಂಬಂಧಿತ ಟ್ಯಾಗ್ಗಳು

Kannada News Karnataka ಟಿಪ್ಪು ಜಯಂತಿ ಸಂವಿಧಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ