ಇನ್ನು ಸಹಿಸುವುದಿಲ್ಲ: ಸಿಡಿದೆದ್ದ ಪೌರಕಾರ್ಮಿಕರು

Kannada News

24-10-2017

ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಬೆಂಗಳೂರು ಮಹಾನಗರದಲ್ಲಿ, ಪ್ರತಿದಿನ  ಸಾವಿರಾರು ಟನ್ ಕಸ ಉತ್ಪತ್ತಿಯಾಗುತ್ತದೆ. ಈ ಎಲ್ಲಾ ಕಸವನ್ನು ಮನೆ ಮನೆಗಳಿಂದ, ರಸ್ತೆ ರಸ್ತೆಗಳಿಂದ ಸಂಗ್ರಹಿಸುವವರು ಪೌರಕಾರ್ಮಿಕರು.

ಒಳಚರಂಡಿ ಕಟ್ಟಿಕೊಂಡು ಬೀದಿಗೆ ಗಲೀಜು ನೀರು ಹರಿಯುವಾಗ ನಾವೆಲ್ಲಾ ಅಸಹ್ಯ ಪಟ್ಟುಕೊಂಡು ಮೂಗುಮುಚ್ಚಿಕೊಂಡು ಓಡುತ್ತಿರುವಾಗ, ಆ ಗಲೀಜಿಗೆ ಇಳಿದು ಅದನ್ನೆಲ್ಲಾ ಸ್ವಚ್ಛಗೊಳಿಸುವವರು ಪೌರಕಾರ್ಮಿಕರು.

ಇಂಥ ಪೌರಕಾರ್ಮಿಕರು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ಪೌರ ಕಾರ್ಮಿಕರು ಹಲವಾರು ರೀತಿಯ ಕಷ್ಟಗಳನ್ನು, ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಕಸ ಸಂಗ್ರಹ ಗುತ್ತಿಗೆದಾರನೊಬ್ಬ ಮಹಿಳಾ ಪೌರಕಾರ್ಮಿಕರ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಮಾಡಿ ಅಮಾನವೀಯವಾಗಿ ವರ್ತಿಸಿದ್ದಾನೆ. ಹಲವಾರು ವರ್ಷಗಳಿಂದ ಇಂಥದ್ದೆಲ್ಲಾ ನಡೆದುಬಂದಿದೆ. ಇದರ ಜೊತೆಗೆ, ಕ್ರಿಮಿನಲ್ ಹಿನ್ನೆಲೆ ಇರುವಂಥವರಿಗೆ ಕಸ ಸಂಗ್ರಹ ಗುತ್ತಿಗೆ ನೀಡುವುದರ ಹಿಂದೆ, ಬಿಬಿಎಂಪಿ ಅಧಿಕಾರಿಗಳು ಮತ್ತು ಕಾರ್ಪೋರೇಟರ್ಗಳ ಕೈವಾಡ ಇದೆ ಅನ್ನುವುದು ಪೌರಕಾರ್ಮಿಕರ ಆರೋಪ.

ಇದನ್ನೆಲ್ಲಾ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಸಿಡಿದೆದ್ದಿರುವ ಪೌರಕಾರ್ಮಿಕರು, ಲೈಂಗಿಕ ದೌರ್ಜನ್ಯ ನಡೆಸಿರುವ ಕಾಂಟ್ರಾಕ್ಟರ್ ನಾಗೇಶ್ ಅನ್ನುವನಿಗೆ ನೀಡಿರುವ ಗುತ್ತಿಗೆ ರದ್ದುಪಡಿಸಿ, ಆತನನ್ನು ಕಪ್ಪುಪಟ್ಟಿಗೆ ಸೇರಿಸಲು ಒತ್ತಾಯಿಸಿದ್ದಾರೆ.

ಕಾಂಟ್ರಾಕ್ಟರ್ ಗಳಿಂದ ಆಗುತ್ತಿರುವ ಶೋಷಣೆ ತಪ್ಪಿಸಲು ತಮಗೆ ಉದ್ಯೋಗ ಭದ್ರತೆ ನೀಡಿ, ನೇರವಾಗಿ ವೇತನ ವಿತರಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಪೌರಕಾರ್ಮಿಕರು ಆಗ್ರಹಿಸಿದ್ದಾರೆ. ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿರುವ ಪೌರಕಾರ್ಮಿಕರು,  ಇದೇ ಅಕ್ಟೋಬರ್ 25ರಂದು ಬುಧವಾರ ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಬಿಬಿಎಂಪಿ ಮುಖ್ಯ ಕಚೇರಿ ಎದುರು ಪ್ರತಿಭಟನೆ ಆಯೋಜಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ