ಆದೇಶ ಪಾಲಿಸದಿದ್ದರೆ ವಾಹನ ನೊಂದಣಿ ನಿಷೇಧ !

Kannada News

24-10-2017

ಬೆಂಗಳೂರು: ಹೈಕೋರ್ಟ ಆದೇಶದಂತೆ ರಾಜ್ಯದಲ್ಲಿ ಇಂದಿನಿಂದ 100ಕ್ಕಿಂತ ಕಡಿಮೆ ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ ವಾಹನದಲ್ಲಿ ಒಂದು ಸೀಟಿದ್ದರಷ್ಟೇ ನೋಂದಣಿ ಸಾಧ್ಯ. ರಾಜ್ಯದಲ್ಲಿ ಅಕ್ಟೋಬರ್ 23ರಿಂದಲೇ ಅನ್ವಯವಾಗುವಂತೆ 100ಕ್ಕಿಂತ ಕಡಿಮೆ ಸಿಸಿ ಇಂಜಿನ್ ಸಾಮರ್ಥ್ಯ ಹೊಂದಿದ ಹೊಸ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸೀಟು ಅಳವಡಿಕೆಯಾಗಿದ್ದರೆ ಅಂಥ ವಾಹನಗಳ ನೋಂದಣಿ ನಿಷೇಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಸಾರಿಗೆ ಇಲಾಖೆಯ ಈ ನಿರ್ಧಾರದಿಂದ 100 ಸಿಸಿಗೂ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನ ತಯಾರಕರು ಪೇಚಿಗೆ ಸಿಲುಕಿದ್ದಾರೆ. ಸದ್ಯ ಶೋ ರೂಂಗಳಲ್ಲಿರುವ ಇಂತಹ ದ್ವಿಚಕ್ರ ವಾಹನಗಳನ್ನು ಕರ್ನಾಟಕ ಹೊರತುಪಡಿಸಿ ಹೊರ ರಾಜ್ಯದಲ್ಲಷ್ಟೇ ಮಾರಾಟ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಕರ್ನಾಟಕದಲ್ಲಿ 100 ಸಿಸಿಗೂ ಕಡಿಮೆಯಿರುವ ತನ್ನ ವಾಹನ ಮಾರಾಟವಾಗಬೇಕಿದ್ದರೆ ಕೇವಲ ಒಂದು ಸೀಟು ಇರುವ ಪ್ರತ್ಯೇಕ ವಾಹನವನ್ನು ತಯಾರು ಮಾಡಬೇಕಾದ ಅನಿವಾರ್ಯತೆಗೆ ತಯಾರಕರು ಸಿಲುಕಲಿದ್ದಾರೆ.

2009ರಲ್ಲಿ ಮೈಸೂರಿನ ಹೆಬ್ಬಾಳ ವರ್ತಲ ರಸ್ತೆಯಲ್ಲಿ ನಡೆದಿದ್ದ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಹೈಕೋರ್ಟ್ `ಕರ್ನಾಟಕ ಮೋಟಾರು ವಾಹನ ಕಾಯ್ದೆ 1989 ನಿಯಮ 143(3)ರ ಅನ್ವಯ 100 ಸಿಸಿ ಗೂ ಕಡಿಮೆ ಸಾಮರ್ಥ್ಯವಿರುವ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರ ಸವಾರಿಗೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಇಂತಹ ದ್ವಿಚಕ್ರ ವಾಹನಗಳ ನೋಂದಣಿ ಮಾಡಕೂಡದು' ಎಂದು ನಿರ್ದೇಶಿಸಿತ್ತು. ನಿರ್ದೇಶನದ ಅನ್ವಯ ಸಾರಿಗೆ ಇಲಾಖೆ ಹೊರಡಿಸಿದ ಅಧಿಸೂಚನೆ ಆಧರಿಸಿ ಅ.23ರಂದು ಸಾರಿಗೆ ಆಯುಕ್ತರು ರಾಜ್ಯದ ಎಲ್ಲ ಅಪರ ಸಾರಿಗೆ ಆಯುಕ್ತರು, ಜಂಟಿ ಸಾರಿಗೆ ಆಯುಕ್ತರು ಮತ್ತು ಉಪ ಸಾರಿಗೆ ಆಯುಕ್ತರಿಗೆ ಸುತ್ತೋಲೆ ರವಾನಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ