ಮೇ ತಿಂಗಳಲ್ಲಿ ಚುನಾವಣೆಗೆ ಚಿಂತನೆ !

Kannada News

24-10-2017 380

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಭರದ ತಯಾರಿ ನಡೆಸಿರುವ ಬೆನ್ನಲ್ಲೆ, ಕೇಂದ್ರ ಚುನಾವಣಾ ಆಯೋಗ ಮತಸಮರದ ರಣಕಹಳೆ ಮೊಳಗಿಸಲು ಸಿದ್ಧತೆ ನಡಸಿದೆ. ಈ ಸಂಬಂಧ ರಾಜ್ಯದ ಎಲ್ಲಾ ಪ್ರಮುಖ ಇಲಾಖೆಗಳ ಮುಖ್ಯಸ್ಥರಿಗೆ ಪತ್ರವೊಂದನ್ನು ರವಾನಿಸಿದ್ದು, ಚುನಾವಣೆಯ ಸಿದ್ಧತೆ ಆರಂಭಿಸುವಂತೆ ತಿಳಿಸಿದೆ.

ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರವೊಂದನ್ನು ಬರೆದಿರುವ ಮುಖ್ಯ ಚುನಾವಣಾ ಆಯುಕ್ತರು, ಬರುವ ಮೇ 2 ರಂದು ಮತದಾನ ನಡೆಸುವ ಕುರಿತಂತೆ ಸರಕಾರದ ಅಭಿಪ್ರಾಯ ಕೇಳಿದ್ದಾರೆ. ಹಾಲಿ ವಿಧಾನಸಭೆಯ ಅವಧಿ ಮೇ ಮೊದಲ ವಾರಕ್ಕೆ ಅಂತ್ಯವಾಗಲಿದೆ. ಈ ಹಿನ್ನಲೆಯಲ್ಲಿ ಮೇ ಮೊದಲ ವಾರದಲ್ಲಿಯೇ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗ ತೀರ್ಮಾನಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಮೇ ಮೊದಲ ವಾರದಲ್ಲಿ ರಾಜ್ಯದ ಹವಾಮಾನ, ಹಬ್ಬ, ಜಾತ್ರೆ ಶೈಕ್ಷಣಿಕ ಪರೀಕ್ಷೆ ಮೊದಲಾದವುಗಳ ಬಗ್ಗೆ ಮಾಹಿತಿ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.

ಮೇ ಮೊದಲ ವಾರದಲ್ಲಿ ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆಗಳು ಇಲ್ಲ, ಹೀಗಾಗಿ ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲು ಸುಲಭವಾಗಲಿದೆ ಎಂದು ಪತ್ರದಲ್ಲಿ ತಿಳಿಸಿರುವ ಆಯೋಗ ಮೇ2ರಂದು ಮತದಾನ ನಡೆಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಇದಕ್ಕೆ ಪೂರಕವಾಗಿ ಮೇ 2 ರೊಳಗೆ ಎಲ್ಲಾ ಪರೀಕ್ಷೆಗಳನ್ನು ಮುಗಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು, ಈಗಾಗಲೆ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ