ದನಗಳಿಗೆ ಪಿಜಿ ಅಕಾಮಡೇಷನ್…!

Kannada News

23-10-2017

ನೀವೆಲ್ಲಾ  ನೋಡಿದ್ದೀರಿ, ಬೆಂಗಳೂರಿನ ಬೀದಿ ಬೀದಿಯಲ್ಲಿ ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲಾ ಗೋಡೆ ಮತ್ತು ಕಾಂಪೌಂಡ್ ಗಳ ಮೇಲೆ ಪಿಜಿ ಅಕಾಮಡೇಷನ್ ಸಿಗುತ್ತೆ ಎಂದು ಬರೆದಿರುವ ನೂರಾರು ಪೋಸ್ಟರ್ಗಳು ಕಾಣಿಸುತ್ತವೆ. ಬೆಂಗಳೂರಿನಲ್ಲಿ, ಸಾವಿರಾರು ಪಿಜಿಗಳು ಅದೇ ಪೇಯಿಂಗ್ ಗೆಸ್ಟ್ ಅಕಾಮಡೇಷನ್ ಗಳು, ಅಂದರೆ ಹಣ ಕೊಟ್ಟು ಒಂದಷ್ಟು ದಿನ ವಾಸಮಾಡಬಹುದಾದ ವ್ಯವಸ್ಥೆಗಳಿವೆ.

ನಾವು ಈಗ ಹೇಳಲು ಹೊರಟಿರುವುದೂ ಪಿಜಿಗಳ ಬಗ್ಗೆಯೇ… ಆದರೆ, ಇದು ಜನಗಳ ಪಿಜಿ ಅಲ್ಲ, ದನಗಳ ಪಿಜಿ. ಹೌದು, ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲಾ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುವ ಹರಿಯಾಣದ ಬಿಜೆಪಿ ಸರ್ಕಾರ ಇದೀಗ ದನಗಳಿಗೆಂದೇ ಪಿಜಿ ತೆರೆಯಲು ಹೊರಟಿದೆ.

ರಾಜ್ಯದ ದೊಡ್ಡ ನಗರಗಳಲ್ಲಿ ಮತ್ತು ಗಗನ ಚುಂಬಿ ಕಟ್ಟಡಗಳಲ್ಲಿ ವಾಸ ಮಾಡುವ ಜನರಿಗೆ, ತಾವೂ ಕೂಡ ಹಸುಗಳನ್ನು ಸಾಕಿಕೊಂಡು ಉತ್ಕೃಷ್ಟ ಗುಣಮಟ್ಟದ ಹಾಲುಪಡೆಯುವ ಬಯಕೆ ಇರಬಹುದು. ಆದರೆ, ಅವರಿಗೆ ಹಸುಗಳನ್ನು ಸಾಕಲು ಜಾಗ ಮತ್ತು ನಿರ್ವಹಣೆ ಸಮಸ್ಯೆ ಇರುತ್ತದೆ. ಇಂಥವರೂ ಕೂಡ ಉತ್ತಮ ಗುಣಮಟ್ಟದ ಹಸುಗಳನ್ನು ಸಾಕಲು ಸಾಧ್ಯವಾಗುವಂತೆ ನಗರಗಳಲ್ಲೇ ದನಗಳ ಪಿಜಿ ತೆರೆಯಲು ನಿರ್ಧರಿಸಲಾಗಿದೆಯಂತೆ. ಈ ವಿಚಾರವನ್ನು ಹರಿಯಾಣದ ಪಶುಸಂಗೋಪನಾ ಸಚಿವ ಒ.ಪಿ.ಧನಕರ್ ಹೇಳಿದ್ದಾರೆ.

ಸಿಟಿಗಳಲ್ಲಿ ವಾಸಮಾಡುವ ಜನರು ಉತ್ತಮ ತಳಿಯ ಹಸುಗಳನ್ನು ಕೊಂಡು, ಸರ್ಕಾರದ ಈ ಪಿಜಿಯಲ್ಲಿ ಬಿಟ್ಟರೆ ಸಾಕಂತೆ, ಸರ್ಕಾರವೇ ಈ ಹಸುಗಳ ನಿರ್ವಹಣೆ ಮಾಡಿ, ಹಸುಗಳ ಮಾಲೀಕರಿಗೆ ಹಾಲು ತಲುಪಿಸುತ್ತದಂತೆ. ಇದರ ಜೊತೆಗೆ, ತಮ್ಮ ಹಸುಗಳು ಹೇಗಿವೆ? ಏನು ಮಾಡುತ್ತಿವೆ? ಎಂಬುದನ್ನೆಲ್ಲಾ ನೋಡಲು ಆಧುನಿಕ ತಂತ್ರಜ್ಞಾನದ ಕ್ಯಾಮರಾಗಳ ಬಳಕೆಗೂ ವ್ಯವಸ್ಥೆ ಮಾಡಲಾಗುವುದಂತೆ. ಹರಿಯಾಣ ಸರ್ಕಾರದ ಈ ಹೊಸ ಯೋಚನೆಗೆ ಏನು ಹೇಳಬೇಕು ಅನ್ನುವುದೇ ಗೊತ್ತಾಗುತ್ತಿಲ್ಲ ಅಲ್ಲವೇ?ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ