ಸಿದ್ದು ಗೆ ಸದಾನಂದಗೌಡರ ಸವಾಲ್ !

Kannada News

23-10-2017

ಬೆಂಗಳೂರು: ಅಹಿಂದ ವರ್ಗದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದವರ್ಗಗಳ ಆಯೋಗಕ್ಕೆ ಸಂವಿಧಾನಬದ್ಧ ಸ್ಥಾನಮಾನ ನೀಡುವ ಕಾಯ್ದೆಗೆ ಕಾಂಗ್ರೆಸ್ ಏಕೆ ಅಡ್ಡಿಪಡಿಸುತ್ತದೆ ಎಂಬುದನ್ನು ಜನತೆಯ ಮುಂದೆ ಬಹಿರಂಗ ಪಡಿಸಲಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸವಾಲು ಹಾಕಿದ್ದಾರೆ.

ನವೆಂಬರ್ 2ರಿಂದ ಆರಂಭವಾಗಲಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನೆಯ ಯಾತ್ರೆಯ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಿಂದುಳಿದ ವರ್ಗದವರಿಗೆ ಸಂವಿಧಾನಬದ್ಧವಾಗಿ ವಿಶೇಷ ಸವಲತ್ತುಗಳನ್ನು ನೀಡಲು ಆಯೋಗಕ್ಕೆ ತಿದ್ದುಪಡಿ ಮಾಡಲಾಗಿದೆ. ಲೋಕಸಭೆಯಲ್ಲಿ ಈ ಕಾಯ್ದೆಯನ್ನು ಬಹುಮತದಿಂದ ಅಂಗೀಕಾರ ಮಾಡಲಾಗಿದೆ. ಆದರೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಯಾವ ಕಾರಣಕ್ಕಾಗಿ ಅಡ್ಡಿಪಡಿಸಿದೆ ಎಂದು ಪ್ರಶ್ನಿಸಿದರು.

ಅಹಿಂದದ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುವ ಸಿದ್ದರಾಮಯ್ಯ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇದರಿಂದ ಕಾಂಗ್ರೆಸ್‍ನ ವ್ಯಾಘ್ರಮುಖ ಏನೆಂಬುದು ಬಹಿರಂಗವಾಗಿದೆ. ನಿಮಗೆ ಹಿಂದುಳಿದವರ್ಗಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮೊದಲು ಕಾಯ್ದೆಗೆ ಬೆಂಬಲ ನೀಡಬೇಕೆಂದು ಒತ್ತಾಯಿಸಿದರು.

ದೇಶದ ರಾಜಕಾರಣದಲ್ಲಿ ಹೊಸ ವ್ಯವಸ್ಥೆ ಬರಬೇಕೆಂಬುದು ಮತದಾರರ ಅಭಿಪ್ರಾಯ. ವಿಚಾರ ಆಧಾರದ ಮೇಲೆ ಮತದಾನ ನಡೆಯಬೇಕು. ಪ್ರಜಾತಂತ್ರ ಮೌಲ್ಯವನ್ನು ಎತ್ತಿಹಿಡಿಯಬೇಕೆಂಬ ಆಶಯದೊಂದಿಗೆ ನವಕರ್ನಾಟಕ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿದ್ದೇವೆ. ಇದು ಸಂಪೂರ್ಣವಾಗಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ 224 ಕ್ಷೇತ್ರಗಳಲ್ಲಿ ಯಡಿಯೂರಪ್ಪನವರು ಮತ್ತು ನಮ್ಮ ಪಕ್ಷದ ಮುಖಂಡರು ಸಂಚರಿಸಿ ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ರಾಜ್ಯದ ದುರಾಡಳಿತ, ಭ್ರಷ್ಟಾಚಾರವನ್ನು ಬಯಲು ಮಾಡಲಿದ್ದಾರೆ. ನಾಲ್ಕೂವರೆ ವರ್ಷಗಳಲ್ಲಿ ನಡೆದಿರುವ ಹಗರಣಗಳನ್ನು ಜನರ ಮುಂದೆ ಬಟಾಬಯಲು ಮಾಡಲಿದ್ದೇವೆ ಎಂದರು.

ಈಗಿನ ಸ್ಥಿತಿಯಲ್ಲಿ ನಮ್ಮ ಪಕ್ಷಕ್ಕೆ ವಿಷಯನ್ 150 ತಲುಪುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‍ನ ಆಡಳಿತ ಬಗ್ಗೆ ಜನರಿಗೆ ಮನವರಿಕೆಯಾಗಿದೆ. ಈ ಸರ್ಕಾರ ಎಷ್ಟು ಬೇಗ ಹೋಗುತ್ತದೆಯೋ ಎಂದು ಜನರು ಕಾಯುತ್ತಿದ್ದಾರೆ. ಮೋದಿ ಅವರ ಯಶಸ್ವಿ ಆಡಳಿತ, ಕಾರ್ಯಕರ್ತರ ಪರಿಶ್ರಮದಿಂದ ಅಧಿಕಾರಕ್ಕೆ ಬರಲಿದ್ದೇವೆ ಎಂದರು.

ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ದಕ್ಷ ಜನಪರ ಸ್ವಚ್ಛ ಆಡಳಿತ ನೀಡುವ ಬದ್ಧತೆಯೊಂದಿಗೆ ದೇಶದ ಇತಿಹಾಸದಲ್ಲೇ ಅತಿ ದೊಡ್ಡದಾದ ಪರಿವರ್ತನಾ ಯಾತ್ರೆಯನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪರಿವರ್ತನಾ ರ‍್ಯಾಲಿಯಲ್ಲಿ ಕೇಂದ್ರದ ಸಚಿವರುಗಳು, ವಿವಿಧ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ  ಸಭೆಗಳಲ್ಲಿ ಇವರು ಪಾಲ್ಗೊಳ್ಳಲಿದ್ದಾರೆ. 3-4 ದಿನಗಳಲ್ಲಿ ಕೇಂದ್ರ ಸಚಿವರು ಹಾಗೂ ಬಿಜೆಪಿಯ ಆಡಳಿತದ ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸಭೆಗಳ ವಿವರಗಳನ್ನು ಪ್ರಕಟಿಸುವುದಾಗಿ ಯಡಿಯೂರಪ್ಪ ಹೇಳಿದರು. ಈ ಪರಿವರ್ತನಾ ರ‍್ಯಾಲಿಯಲ್ಲಿ ರಾಜ್ಯದ ಎಲ್ಲಾ ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದು, ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಈ ಯಾತ್ರೆ ಯಶಸ್ವಿಯಾಗಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಮಿತಿ ಮೀರಿದೆ. ಕಲ್ಲಿದ್ದಲು ಹಗರಣ ಸೇರಿದಂತೆ ಹಲವು ಹಗರಣಗಳ ದಾಖಲೆಗಳನ್ನು ಬಿಜೆಪಿ ಈಗಾಗಲೇ ಬಿಡುಗಡೆ ಮಾಡಿದೆ. ಪರಿವರ್ತನಾ ಯಾತ್ರೆಯ ಸಂದರ್ಭದಲ್ಲೂ ಜನರಿಗೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳನ್ನು ಮನವರಿಕೆ ಮಾಡಲಾಗುವುದು ಎಂದರು. ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಖಾಸಗಿ ಕಂಪೆನಿಯ ಪರವಾಗಿ ಕೆಪಿಸಿಎಲ್ ದಂಡ ಕಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸುಳ್ಳು ಹೇಳಿದ್ದಾರೆ. ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು  ಟೀಕಿಸಿದರು.

ಈ ಕಲ್ಲಿದ್ದಲು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಖಾಸಗಿ ಕಂಪೆನಿಯೇ ದಂಡ ಭರಿಸಬೇಕು ಎಂದು ಹೇಳಿದ್ದರೂ ಕೆಪಿಸಿಎಲ್ ಹಣ ಭರಿಸಿದೆ. ಇಷ್ಟಿದ್ದರೂ ಸುಪ್ರೀಂ ಕೋರ್ಟ್‌ನ ಆದೇಶದಂತೆ ದಂಡ ಕಟ್ಟಲಾಗಿದೆ ಎಂಬ ಇಂಧನ ಸಚಿವರ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಇದು ಅಪ್ಪಟ ಸುಳ್ಳು ಈ ಹಗರಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಸತ್ಯ  ಎಂದು ಅವರು ದೂರಿದರು.

ಪ್ರಧಾನಿ ನರೇಂದ್ರಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸುವ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ಅಪೇಕ್ಷೆಯಂತೆ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲಾಗುವುದು. ಸೂರ್ಯ-ಚಂದ್ರರು ಇರುವಷ್ಟೇ ಸತ್ಯ ರಾಜ್ಯದಲ್ಲಿ 150 ಪ್ಲಸ್ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದರು.

ಪರಿವರ್ತನೆಯ ಯಾತ್ರೆಯ ಮಾರ್ಗಸೂಚಿ ಬಿಡುಗಡೆ ಮಾಡಿದ ಸಂಸದೆ ಶೋಭಾಕರಂದ್ಲಾಜೆ, ನವೆಂಬರ್.2ರಿಂದ 2018 ಜನವರಿ 28ರವರೆಗೆ ರಾಜ್ಯದ 224 ಕ್ಷೇತ್ರಗಳಲ್ಲಿ ಸುಮಾರು ಏಳೂವರಗೆ ಸಾವಿರ ಕಿ.ಮೀ.ವರೆಗೂ ಇದು ಸಂಚರಿಸಲಿದೆ. ರಾಷ್ಟ್ರದ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ರ್ಯಾಲಿಯಾಗಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ನ.2ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಪ್ರಾರಂಭವಾಗಿ ಪ್ರತಿಯೊಂದು ಜಿಲ್ಲೆ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದೆ. ಅಂದು ದಕ್ಷಿಣ ಭಾಗದ 114 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಲಕ್ಷ ಬೈಕ್‍ನಲ್ಲಿ 35ವರ್ಷದೊಳಗಿನ ಕಾರ್ಯಕರ್ತರು ಆಗಮಿಸುವರು. ಜತೆಗೆ ನಮ್ಮ ಪದಾಧಿಕಾರಿಗಳು ಸೇರಿದಂತೆ ಒಟ್ಟು 3 ಲಕ್ಷ ಕಾರ್ಯಕ ರ್ತರು ಸಮಾವೇಶಗೊಳ್ಳಲಿದ್ದಾರೆ ಎಂದು ವಿವರಿಸಿದರು.

ನ.2ರಂದು ಬೆಂಗಳೂರಿನಲ್ಲಿ   ಪ್ರಾರಂಭವಾಗಿ ಜನವರಿ 28ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಶೋಭಾ ತಿಳಿಸಿದರು. ಡಿ.21ರಂದು ಹುಬ್ಬಳ್ಳಿಯಲ್ಲಿ ಉತ್ತರ ಭಾಗದ ಬೃಹತ್ ರ್ಯಾಲಿ. ಜ.21ರಂದು ಮೈಸೂರು ಹಾಗೂ ಜ.28ರಲ್ಲಿ ಬೆಂಗಳೂರಿನಲ್ಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ