ವಜ್ರ ಮಹೋತ್ಸವಕ್ಕೆ ಭರದ ಸಿದ್ಧತೆ !

Kannada News

23-10-2017

ಬೆಂಗಳೂರು: ನಾಡಿನ ಶಕ್ತಿ ಕೇಂದ್ರ ವಿಧಾನಸೌಧ ವಜ್ರ ಮಹೋತ್ಸವ ಆಚರಿಸಿಕೊಳ್ಳಲು ನವ ವಧುವಿನಂತೆ ಸಿಂಗಾರಗೊಳ್ಳುತ್ತಿದ್ದು, ಸುಣ್ಣ-ಬಣ್ಣ, ವಿದ್ಯುತ್ ಹಾಗೂ ಹೂವಿನ ಅಲಂಕಾರಗಳಿಂದ ಕಂಗೊಳಿಸಲಿದೆ. ವಿಧಾನಸೌಧ ಕಟ್ಟಡದ ವಜ್ರ ಮಹೋತ್ಸವ ಸಮಾರಂಭ ಇದೇ ತಿಂಗಳ 25 ರಂದು ನಡೆಯಲಿದ್ದು, ಇದಕ್ಕಾಗಿ ವಿಧಾನಸೌಧವನ್ನು ಶೃಂಗಾರಗೊಳಿಸುವ ಕೆಲಸ ಭರದಿಂದ ಸಾಗಿದೆ.

ವಜ್ರ ಮಹೋತ್ಸವದ ಹೊಸ್ತಿಲಲ್ಲಿರುವ ವಿಧಾಸೌಧದ ಒಳಭಾಗದಲ್ಲಿ ಈಗಾಗಲೇ ಹೊಸದಾಗಿ ಸುಣ್ಣ–ಬಣ್ಣ ಬಳಿಯಲಾಗಿದ್ದು, ಬಾಗಿಲುಗಳಿಗೆ ಹೊಸದಾಗಿ ಮೆರಗು ನೀಡಲಾಗಿದೆ. ವಿಧಾನಸೌಧ ಕಟ್ಟಡದ ಹೊರಭಾಗ ಹಾಗೂ ಒಳಭಾಗದಲ್ಲಿ ಹೂವಿನ ಅಲಂಕಾರ ಮಾಡುವ ಜತೆಗೆ ಝಗಮಗಿಸುವ ದೀಪಾಲಂಕಾರವನ್ನು ಮಾಡಲಾಗುತ್ತಿದ್ದು, ಇದೇ 25 ರಂದು ದೀಪಗಳ ಬೆಳಕಿನಲ್ಲಿ ವಿಧಾನಸೌಧದ ಸೊಬಗನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ.

ವಿಧಾನಸೌಧದ ವಜ್ರ ಮಹೋತ್ಸವ ಸಮಾರಂಭದ ಅಂಗವಾಗಿ ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಕರೆಯಲಾಗಿದ್ದು, ಇದೇ 25 ರಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಜಂಟಿ ಅಧಿವೇಶನವನ್ನು ಉದ್ದೇಶಸಿ ಭಾಷಣ ಮಾಡುವ ಮೂಲಕ ವಜ್ರ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡುವರು.

ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ರಾಷ್ಟ್ರಪತಿಗಳು ವಿಧಾನ ಪರಿಷತ್‌ ಸಭಾಂಗಣವನ್ನು ವೀಕ್ಷಿಸಲಿದ್ದಾರೆ. ನಂತರ ವಿಧಾನಸೌಧ ಹಾಗೂ ವಿಕಾಸಸೌಧದ ನಡುವೆ ಇರುವ ಗಾಂಧಿ ಪ್ರತಿಮೆ ಮುಂದೆ ರಾಷ್ಟ್ರಪತಿಗಳೊಂದಿಗೆ ಉಭಯ ಸದನಗಳ ಶಾಸಕರುಗಳ ಫೋಟೋ ಶೂಟ್ ನಡೆಯಲಿದೆ.

ತರುವಾಯ ಬ್ಯಾಂಕ್ವೆಟ್ ಹಾಲ್‌ ನಲ್ಲಿ ಭೋಜನ ಕೂಟ ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಬ್ಯಾಂಕ್ವೆಟ್ ಹಾಲ್‌ ನಲ್ಲಿ ವಿಧಾನಸೌಧ ಕುರಿತಂತೆ ಖ್ಯಾತ ನಿರ್ದೇಶಕ ಗಿರೀಶ್ ಕಾರಸವಳ್ಳಿ, ಸೀತಾರಾಮ್ ನಿರ್ದೇಶಿಸಿರುವ ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಮಾಸ್ಟರ್ ಕಿಶನ್ ನಿರ್ದೇಶನದ ಸಿಡಿ ವರ್ಚುಯಲ್ ರಿಯಾಲಿಟಿ ನಡೆಯಲಿದೆ.

ಸಂಜೆ 5 ರಿಂದ 6 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಈ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ವಿಧಾನಸೌಧ ವಜ್ರ ಮಹೋತ್ಸವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ