ಕದ್ದಿದ್ದು 12 ಕೋಟಿ: ಚಿನ್ನ,ಜಮೀನು ಖರೀದಿ !

Kannada News

23-10-2017

ಬೆಂಗಳೂರು: ಲೆಕ್ಕಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದ ಅಂತಾರಾಷ್ಟ್ರೀಯ ಬ್ಯಾಂಕ್ ಜೆ.ಪಿ. ಮೋರ್ಗನ್‍ ನಲ್ಲಿ 12.15 ಕೋಟಿ ರೂ. ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಜಮೀನು, ಮನೆ, ಚಿನ್ನಾಭರಣಗಳನ್ನು ಖರೀದಿಸಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ದೊಡ್ಡಗುಬ್ಬಿಯ ಮಾರುತಿ ಅಲಿಯಾಸ್ ರಾಮು (25), ಬೆಳ್ಳಂದೂರಿನ ಸುರೇಶ್ ಬಾಬು ಬಂಧಿತ ಆರೋಪಿಗಳಾಗಿದ್ದಾರೆ, ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತರು ಒಳಸಂಚು ರೂಪಿಸಿ, ಹೊರಗುತ್ತಿಗೆ ಸೇವೆಯ ಬ್ಯಾಂಕ್‍ ನಲ್ಲಿ ಲಪಟಾಯಿಸಿದ್ದ ಹಣದಲ್ಲಿ 8 ಕೋಟಿ 14 ಲಕ್ಷ 90 ಸಾವಿರದ 448 ನಗದು, ದೊಡ್ಡಬಳ್ಳಾಪುರದಲ್ಲಿ ಖರೀದಿಸಿದ್ದ ಮೂರು ಎಕರೆ ಜಮೀನು, ಕೊತ್ತನೂರಿನಲ್ಲಿ ಖರೀದಿ ಮಾಡಿದ್ದ ನಾಲ್ಕು ಮಹಡಿಯ ಕಟ್ಟಡ, 470 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ನಕಲಿ ಶೈಕ್ಷಣಿಕ ದಾಖಲಾತಿಗಳನ್ನು ನೀಡಿ ಮಾರತ್ ಹಳ್ಳಿಯಲ್ಲಿದ್ದ ಜೆ.ಪಿ. ಮೋರ್ಗನ್ ಬ್ಯಾಂಕ್‍ನಲ್ಲಿ ಕಳೆದ 2013 ರಲ್ಲಿತ ಲೆಕ್ಕಾಧಿಕಾರಿಗಳಾಗಿ ಕೆಲಸಕ್ಕೆ ಸೇರಿದ್ದರು.

ವಿದೇಶಿ ಉದ್ದಿಮೆದಾರರೇ ಹೆಚ್ಚಾಗಿ ವ್ಯವಹರಿಸುತ್ತಿದ್ದ ಈ ಬ್ಯಾಂಕ್‍ ನಲ್ಲಿ ಈ ಇಬ್ಬರೂ ಒಳಸಂಚು ರೂಪಿಸಿ, 12.15 ಕೋಟಿ ರೂ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ಅದರಲ್ಲಿ ಜಮೀನು, ಮನೆ, ಚಿನ್ನ, ಬೆಳ್ಳಿ ಆಭರಣಗಳನ್ನು ಖರೀದಿಸಿ, ಬ್ಯಾಂಕ್‍ ಕೆಲಸ ಬಿಟ್ಟಿದ್ದರು.

ಬ್ಯಾಂಕ್‍ ನಲ್ಲಿ ಕೋಟ್ಯಾಂತರ ರೂ. ಗಳ ವಂಚನೆಯಾಗಿರುವುದರ ಸಂಬಂಧ ಮ್ಯಾನೇಜರ್ ಅವರು ನೀಡಿದ ದೂರು ದಾಖಲಿಸಿಕೊಂಡ ಮಾರತ್ ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದ ಮಾರುತಿ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ, ಸುರೇಶ್ ಬಾಬು ಜೊತೆ ಸೇರಿ ಬ್ಯಾಂಕಿನ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದನ್ನು ಬಾಯಿಬಿಟ್ಟಿದ್ದಾನೆ.

ಬ್ಯಾಂಕ್‍ ನಲ್ಲಿ ಹಣ ಬೇರೆಯವರ ಖಾತೆಗೆ ವರ್ಗಾವಣೆಯಾಗಿದ್ದು, ಮೂರು ತಿಂಗಳ ಕಾಲ ತಡವಾಗಿ ಮೇಲಧಿಕಾರಿಗಳ ಗಮನಕ್ಕೆ ಬಂದಿದೆ. ಏಕೆಂದರೆ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಈ ಬ್ಯಾಂಕ್‍ ನಲ್ಲಿ ಸ್ಥಳೀಯ ಖಾತೆದಾರರು ಇರುವುದಿಲ್ಲ. ಸಾವಿರಾರು ಕೋಟಿ ರೂ. ಗಳ ವ್ಯವಹಾರವು ನಡೆಯುತ್ತಿದ್ದು, ವಂಚನೆಯು ತಡವಾಗಿ ಗೊತ್ತಾಗಿದೆ.

ಆರೋಪಿಗಳು ವಂಚಿಸಿದ್ದ ಹಣದಲ್ಲಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಜಮೀನು, ಮನೆ, ಚಿನ್ನ, ಬೆಳ್ಳಿ ಖರೀದಿಸಿದ್ದಾರೆ. ಅದರ ದಾಖಲಾತಿಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ಆರೋಪಿ ಮಾರುತಿ ಲೆಕ್ಕಾಧಿಕಾರಿಯಾಗಿ ಕೆಲಸಕ್ಕೆ ಸೇರಲು ನಕಲಿ ಶೈಕ್ಷಣಿಕ ದಾಖಲಾತಿಗಳನ್ನು ನೀಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡ ಬಹುಪಾಲು ಹಣವನ್ನು ಮಾರುತಿ ಬಳಸಿಕೊಂಡಿರುವುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ತಿಳಿಸಿದರು.

ಆರೋಪಿಗಳನ್ನು ಬಂಧಿಸುವಲ್ಲಿ ಮಾರತ್ ಹಳ್ಳಿ ಪೊಲೀಸ್ ಠಾಣೆಯ ಸಬ್‍ ಇನ್ಸ್ ಪೆಕ್ಟರ್ ಎಂ. ಮುನಿರಾಜು, ಮತ್ತವರ ಸಿಬ್ಬಂದಿ ಯಶಸ್ವಿಯಾಗಿದ್ದು, ಅವರಿಗೆ 50 ಸಾವಿರ ರೂ. ಗಳ ನಗದು ಬಹುಮಾನವನ್ನು ಸುನಿಲ್ ಕುಮಾರ್ ಅವರು ಘೋಷಿಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿ ಅಬ್ದುಲ್ ಅಹದ್ ಅವರು ಈ ವೇಳೆ ಉಪಸ್ಥಿತರಿದ್ದರು.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ