ಬೃಹತ್ ಗಾಂಜಾ ಮಾರಾಟ ಜಾಲ ಪತ್ತೆ !

Kannada News

23-10-2017

ಬೆಂಗಳೂರು: ಅಸ್ಸಾಂ, ಬಿಹಾರ, ಒಡಿಸ್ಸಾ, ಆಂಧ್ರ ಪ್ರದೇಶದ ಮೂಲಗಳಿಂದ ಅಕ್ರಮವಾಗಿ ಗಾಂಜಾ ಸರಬರಾಜು ಮಾಡುತ್ತಿದ್ದ ಬೃಹತ್ ಜಾಲವನ್ನು ವೈಟ್ ಫೀಲ್ಡ್ ವಿಭಾಗದ ಪೊಲೀಸರು ಬೇಧಿಸಿದ್ದು 8 ಮಂದಿ ಆರೋಪಿಗಳನ್ನು ಬಂಧಿಸಿ, 36 ಕೆಜಿ 100 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಮಾರತ್ ಹಳ್ಳಿ ಪೊಲೀಸರು ಆಂಧ್ರ ಪ್ರದೇಶದ ಕದರಿಯ ತನ್ನ ಜಮೀನಿನಲ್ಲಿ ಗಾಂಜಾ ಬೆಳೆದು ಅದನ್ನು ತಂದು ಮಾರತ್ ಹಳ್ಳಿಯ ವಿವಿಧ ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದ ಬಾಲ ಸಮುದ್ರಂನ ರವಿ (38) ಎಂಬಾತನನ್ನು ಬಂಧಿಸಿ, 15 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಆರೋಪಿಯು ಮೂಟೆಯಲ್ಲಿ ಗಾಂಜಾ ತಂದು ಸಣ್ಣ ಸಣ್ಣ ಪೊಟ್ಟಣಗಳನ್ನಾಗಿ ಕಟ್ಟಿ ತಲಾ 10 ಗ್ರಾಂ.ಗಳಿಗೆ 100 ರಿಂದ 200 ರೂ. ಗಳಿಗೆ ಮಾರಾಟ ಮಾಡುತ್ತಿದ್ದ. ಕಾಡುಗೋಡಿ ಪೊಲೀಸರು ಅಸ್ಸಾಂನಿಂದ ಗಾಂಜಾ ತಂದು ಕಾಡುಗೋಡಿಯ ವಿವಿಧೆಡೆ ಮಾರಾಟ ಮಾಡುತ್ತಿದ್ದ ಕೋಲಾರದ ನರಸಾಪುರದ ಅಮ್ಜದ್ ಖಾನ್ (60)ನನ್ನು ಬಂಧಿಸಿ, 12 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಇದಲ್ಲದೆ, ಒಡಿಸ್ಸಾ ಮೂಲದ ಗಗನ್ ಕುಮಾರ್ (21) ಎಂಬ ಮತ್ತೊಬ್ಬ ಆರೋಪಿಯನ್ನು ಬಂಧಿಸಿ 560 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಒಡಿಸ್ಸಾದ ಮತ್ತೊಬ್ಬ ಆರೋಪಿಯಿಂದ ಗಾಂಜಾವನ್ನು ಖರೀದಿಸಿ, ಕಾಡುಗೋಡಿಯಲ್ಲಿ ಮಾರಾಟ ಮಾಡುತ್ತಿದ್ದ ಕೆ.ಆರ್.ಪುರಂ ಪೊಲೀಸರು ಒಡಿಸ್ಸಾದ ಕೊಂಕಣಿಯ ಬಿಜಯ್ ನಾಯಕ್ (30) ಹಾಗೂ ಪಶ್ಚಿಮ ಬಂಗಾಳದ ನಕಾಶಿ ಪುರದ ಕುಮಾರ್ ಬಿಶ್ವಾಸ್‍ನನ್ನು ಬಂಧಿಸಿ, 4 ಕೆಜಿ 800 ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಕುಮಾರ್ ಬಿಶ್ವಾಸ್ ಸೀಗೆಹಳ್ಳಿಯ ಬಾಡಿಗೆಮನೆಯ ಮುಂಭಾಗದ ಖಾಲಿ ಬಿದ್ದ ಜಮೀನಿನ ಪೊದೆಯೊಂದರಲ್ಲಿ ಗಾಂಜಾ ಬೆಳೆದು ಕೆ.ಆರ್. ಪುರಂನ ಕೂಲಿ ಕಾರ್ಮಿಕರು, ಆಟೋ ಚಾಲಕರಿಗೆ ಮಾರಾಟ ಮಾಡುತ್ತಿದ್ದ.

ಮತ್ತೊಬ್ಬ ಆರೋಪಿ ಬಿಜಯ್ ನಾಯಕ್ ಒಡಿಸ್ಸಾದ ತನ್ನ ಗ್ರಾಮದಲ್ಲಿ ಗಾಂಜಾ ಬೆಳೆದು ಅದನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು. ವೈಟ್ ಫೀಲ್ಡ್ ಪೊಲೀಸರು ಪಶ್ಚಿಮ ಬಂಗಾಳದ ಬಿಜನ್ ಬಾರಿಯ ನಿತೇಶ್ (40) ಹಾಗೂ ಯಲಹಂಕದ ಕಟ್ಟಿಗೇನಹಳ್ಳಿಯ ಇಮ್ರಾನ್‍ ನನ್ನು ಬಂಧಿಸಿ, 4 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್.ಎ.ಎಲ್. ಪೊಲೀಸರು ಯಶವಂತಪುರದ ಅನಿಲ್ ಕುಮಾರ್(25)ನನ್ನು ಬಂಧಿಸಿ, 450 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಗಾಂಜಾ ಮಾರಾಟ ಜಾಲದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತಿಬ್ಬರಿಗಾಗಿ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ