ಮೊಮ್ಮಗನಿಗೆ ಖಡಕ್ ಎಚ್ಚರಿಕೆ..

Kannada News

23-10-2017

ರೇವಣ್ಣನ ಮಗ ಒಬ್ಬನೇನಾ ಇರೋದು, ನನಗೆ ಯುವಕರನ್ನು ಬೆಳೆಸೋದು ಗೊತ್ತು, ಚೇಷ್ಟೆ ಮಾಡಿದ್ರೆ ಹೊರಗಾಕೋದು ಗೊತ್ತು ಎಂದು ಮೊಮ್ಮಗನ ವಿರುದ್ಧವೇ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಗುಡುಗಿದ್ದಾರೆ.

ರೇವಣ್ಣ ಪುತ್ರ ಪ್ರಜ್ವಲ್ ಮೊದಲು ಹುಣಸೂರಿನ ಮೇಲೆ ಕಣ್ಣಿಟ್ಟಿದ್ದರು, ಇಲ್ಲಿಗೆ ಎಚ್.ವಿಶ್ವನಾಥ್‍ ಗೆ ಟಿಕೆಟ್ ಖಚಿತವಾಗುತ್ತಿದ್ದಂತೆ, ಪಕ್ಷದಲ್ಲಿ ಸೂಟ್‍ ಕೇಸ್ ರಾಜಕಾರಣವಿದೆ ಎಂಬ ಹೇಳಿಕೆ ಕೊಟ್ಟು ವಿವಾದಕ್ಕೆ ಸಿಲುಕಿಕೊಂಡು ನಂತರ ಕ್ಷಮೆಯಾಚಿಸಿದ್ದರು.

ಇದರ ನಂತರ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಿಲ್ಲುವ ಆಕಾಂಕ್ಷೆಯನ್ನು ಹೊಂದಿರುವ ಪ್ರಜ್ವಲ್, ಮತ್ತೆ ಬಕೆಟ್ ರಾಜಕಾರಣವಿದೆ ಎಂದು ಹೇಳಿ ವಿವಾದವನ್ನು ಮೈಗೆಳೆದುಕೊಂಡಿದ್ದು, ಪಕ್ಷದಲ್ಲಿ ಅಸಮಾಧಾನಕ್ಕೆ ಎಡೆಮಾಡಿತ್ತು.

ಈ ಹಿನ್ನೆಲೆಯಲ್ಲಿ ಮಾತಾಡಿದ ದೇವೇಗೌಡರು, ಆತ ರಾಜಕೀಯವಾಗಿ ಬೆಳೆಯುವುದನ್ನು ಯಾರೂ ತಪ್ಪಿಸಲಾಗಲ್ಲ, ಆದರೆ ಮನರಂಜನೆ ರೀತಿ ಮಾತಾಡಿದರೆ ಸಹಿಸಲ್ಲ, ಯುವಕ ಎಂದರೆ ಆತನೊಬ್ಬನೇ ಅಲ್ಲ, ಯುವಕರನ್ನು ಬೆಳೆಸುವುದು ಗೊತ್ತೂ, ಹೊರಕ್ಕೆ ಹಾಕುವುದೂ ಗೊತ್ತು ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇದರಿಂದಾಗಿ ಕುಟುಂಬದಲ್ಲಿಯೇ ರಾಜಕೀಯ ಬಿರುಕು ಹೆಚ್ಚಲಿದೆಯಾ, ಪ್ರಜ್ವಲ್ ಕೊನೆಗೆ ಪಕ್ಷೇತರವಾಗಿ ನಿಲ್ಲುವರೇ, ಅಥವ ತಾತನ ಬದಲಿಗೆ ಹಾಸನದಿಂದ ಸಂಸತ್ತಿಗೆ ಸ್ಪರ್ಧಿಸುವರಾ ಎಂಬುದು ಕುತೂಹಲ ಮೂಡಿಸಿದೆ.

ಇದರೊಡನೆ ಅನಿತಾ ಕುಮಾರಸ್ವಾಮಿ, ಚನ್ನಪಟ್ಟಣದಿಂದ ಕಳೆದ ಸಲ ಕಡಿಮೆ ಅಂತರದಿಂದ ಸೋತಿದ್ದೇನೆ, ಈ ಸಲ ನಿಂತು ಗೆಲ್ಲುತ್ತೇನೆ ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ದೇವೇಗೌಡರು, 120 ಸ್ಥಾನಗಳನ್ನ ಗೆಲ್ಲುವುದಕ್ಕೆ ಬೇಕಾದ ಕ್ರಮಗಳನ್ನು ಪಕ್ಷದ ಹಿಂದುಳಿದ ನಾಯಕರೊಟ್ಟಿಗೆ ಸೇರಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಚನ್ನಪಟ್ಟಣದಲ್ಲಿ ಸಾಮಾನ್ಯ ಕಾರ್ಯಕರ್ತನನ್ನೇ ನಿಲ್ಲಿಸುತ್ತೇನೆ ಎಂದು ಹೇಳಿಕೊಂಡಿರುವುದು ಗೌಡರ ಕುಟುಂಬದಲ್ಲಿ ಕೊನೇ ಕ್ಷಣದಲ್ಲಿ ಏನಾಗಲಿದೆ ಎಂದು ಕಾಯ್ದು ನೋಡುವಂತೆ ಮಾಡಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜು



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ