ಗುಂಡೇಟಿಗೆ ಸಿಕ್ಕಿಬಿದ್ದ ರೌಡಿ !

Kannada News

21-10-2017

ಬೆಂಗಳೂರು: ಸೋಲದೇವನಹಳ್ಳಿಯ ಆಚಾರ್ಯ ಕಾಲೇಜ್ ಬಳಿ, ಇಂದು ಬೆಳಗಿನ ಜಾವ, ಬೆನ್ನಟ್ಟಿ ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ರೌಡಿ ರಾಜದೊರೆ ಮೇಲೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಕುಖ್ಯಾತ ರೌಡಿ ಪಳನಿಯ ಸಹಚರನಾಗಿರುವ ರಾಜದೊರೆ ಕೊಲೆ, ಕೊಲೆಯತ್ನ, ದರೋಡೆ ಸೇರಿ 18 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ರಾಜದೊರೆ ಕುಕೃತ್ಯ ನಡೆಸಿ ತಮಿಳುನಾಡಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಸಿಬಿ ಪೊಲೀಸರು ನಾಕಾಬಂಧಿ ನಡೆಸಿ ಆತನ ಕಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆಯಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸತೀಶ್‍ ಕುಮಾರ್ ತಿಳಿಸಿದ್ದಾರೆ.

ರಾಜದೊರೆ ತಮಿಳುನಾಡಿಗೆ ಹೋಗುತ್ತಿರುವ ವಿಷಯ ತಿಳಿದ ಸಿಸಿಬಿ ಎಸಿಪಿ ಮಹದೇವಪ್ಪ ಮತ್ತು ತಂಡ ಕಳೆದ ರಾತ್ರಿ ಆತನನ್ನು ಬಂಧಿಸಲು ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಿತ್ತು. ಸೋಲದೇವನಹಳ್ಳಿ ಬಳಿ ರಾಜ ಇರುವುದನ್ನು ತಿಳಿದುಕೊಂಡ ಪೊಲೀಸರ ತಂಡ, ಅಲ್ಲಿಗೆ ತೆರಳಿ ಆತನಿಗೆ ಶರಣಾಗುವಂತೆ ಸೂಚಿಸಿದೆ. ಆದರೆ ಆತ ಅಲ್ಲಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾನೆ. ಮುಖ್ಯಪೇದೆ ನರಸಿಂಹಮೂರ್ತಿ ಎಂಬವರಿಗೆ ಡ್ರ್ಯಾಗರ್ ನಿಂದ ಇರಿದಿದ್ದಾನೆ. ಇದರಿಂದ ನರಸಿಂಹಮೂರ್ತಿ ಅವರ ಕೈಗೆ ಗಾಯವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಇನ್ಸ್ ಪೆಕ್ಟರ್ ಪ್ರಕಾಶ್ ರಾಥೋಡ್, ಸ್ವರಕ್ಷಣೆಗಾಗಿ ರಾಜದೊರೆಯ ಕಾಲಿಗೆ ಗುಂಡು ಹಾರಿಸಿದ್ದಾರೆ. ತಕ್ಷಣ ಕುಸಿದುಬಿದ್ದ ಆತನನ್ನು ಬಂಧಿಸಿ ಸಪ್ತರಿಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇತ್ತೀಚೆಗಷ್ಟೇ ಹಲಸೂರು ಕೆರೆಯ ಗುರುದ್ವಾರದ ಬಳಿ ಬೈಕ್‍ ನಲ್ಲಿ ಬರುತ್ತಿದ್ದ ರೌಡಿಶೀಟರ್ ಕಾರ್ತಿಕ್ ಎಂಬಾತನನ್ನು ಪೊಲೀಸ್ ಪೇದೆ ಬಸವರಾಜ್ ಬನ್ಕರ್ ತಡೆದಿದ್ದರು. ಈ ವೇಳೆ ರೌಡಿಶೀಟರ್ ಪೊಲೀಸರಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಜೊತೆಗಿದ್ದ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಗಾಯಾಳು ರೌಡಿಶೀಟರ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಬಂಧಿಸಲಾಗಿತ್ತು. ರೌಡಿಶೀಟರ್ ಕಾರ್ತಿಕ್ ರೇಪ್ ಕೇಸ್‍ ನಲ್ಲಿ ಏಳು ವರ್ಷ ಶಿಕ್ಷೆ ಅನುಭವಿಸಿದ್ದ. ಅಲ್ಲದೇ ಈತನ ವಿರುದ್ಧ ಕಲಾಸಿಪಾಳ್ಯದಲ್ಲಿ ನಾಲ್ಕು ಪ್ರಕರಣಗಳಿತ್ತು.

ನಗರದಲ್ಲಿ ಇತ್ತೀಚೆಗೆ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಪೊಲೀಸರು ಕೂಡ ಕಾರ್ಯಾಚರಣೆ ಚುರುಕುಗೊಳಿಸಿ ಆರೋಪಿಗಳಿಗೆ ಗುಂಡಿನ ರುಚಿ ತೋರಿಸಿ ಬಂಧಿಸುತ್ತಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ