ಕುಡುಕರನ್ನು ಹಿಡಿಯಲು ಹೋಗಿ…

Kannada News

21-10-2017

ನಮ್ಮ ಸರ್ಕಾರಗಳು ಹಲವಾರು ಕಾನೂನುಗಳನ್ನು ಮಾಡುತ್ತಾ ಹೋಗುತ್ತವೆ. ನಮ್ಮ ನ್ಯಾಯಾಲಯಗಳೂ ಕೂಡ ಹಲವಾರು ರೀತಿಯಲ್ಲಿ ಸಾರ್ವಜನಿಕರ ಮೇಲೆ ನಿರ್ಬಂಧಗಳನ್ನು, ನಿಷೇಧಗಳನ್ನು ಹೇರುತ್ತಾ ಹೋಗುತ್ತವೆ. ನಮ್ಮ ಸರ್ಕಾರದವರು ಮಾಡುವ ಕೆಲವು ಕಾನೂನುಗಳಂತೂ, ಅವುಗಳನ್ನು ಪಾಲಿಸುವುದೇ ಸಾಧ್ಯವಿಲ್ಲ ಅನ್ನುವ ಹಾಗಿರುತ್ತವೆ. ಹೀಗಾಗಿ, ಅಂಥ ಕೆಲವು ಕಾನೂನುಗಳು ಇರುವುದೇ, ಅವುಗಳನ್ನು ಮುರಿಯುವುದಕ್ಕಾಗಿ, ಉಲ್ಲಂಘಿಸುವುದಕ್ಕಾಗಿ ಅನ್ನುವಂತಾಗಿದೆ.

ಹೀಗಿದ್ದರೂ, ನಮ್ಮ ಬೆಂಗಳೂರಿನಲ್ಲಿ ಒಂದು ಕಾನೂನಂತೂ ಅತ್ಯಂತ ಕಟ್ಟು ನಿಟ್ಟಾಗಿ ಜಾರಿಯಾಗುತ್ತಿದೆ. ಮದ್ಯಪಾನ ಮಾಡಿ ವಾಹನ ಓಡಿಸುವವರನ್ನು ಪತ್ತೆಹಚ್ಚಿ ಕಾನೂನುಕ್ರಮ ಕೈಗೊಳ್ಳಲು ಬೆಂಗಳೂರಿನ ಪೊಲೀಸರು ಅತ್ಯಂತ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ಏಕೆಂದರೆ, ಪಾನಮತ್ತರಾಗಿ ವಾಹನ ಚಾಲನೆ ಮಾಡುವವರು, ಕೇವಲ ತಮ್ಮ ಜೀವಕ್ಕಷ್ಟೇ ಅಪಾಯ ತಂದುಕೊಳ್ಳುವುದಿಲ್ಲ, ಬದಲಿಗೆ, ಇತರೆ ಅಮಾಯಕರ ಜೀವಗಳನ್ನೂ ಬಲಿ ಪಡೆಯುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.

ಇಂಥದ್ದನ್ನು ತಪ್ಪಿಸುವ ಸಲುವಾಗಿ, ನಮ್ಮ ಪೊಲೀಸರು ಇಡೀ ರಾತ್ರಿ, ಬೆಂಗಳೂರು ನಗರದ ರಸ್ತೆ ರಸ್ತೆಗಳಲ್ಲಿ ನಿಂತು, ಪಾನಮತ್ತ ಚಾಲಕರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸುತ್ತಿದ್ದಾರೆ, ಅವಘಡಗಳನ್ನು ತಪ್ಪಿಸಲು ಶ್ರಮವಹಿಸುತ್ತಿದ್ದಾರೆ.

ಹೀಗಾಗಿ, ಪ್ರತಿದಿನವೂ ನಿದ್ದೆಗೆಡುತ್ತಾ, ನಿಗದಿಗಿಂತಲೂ ಹೆಚ್ಚು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವ ಪೊಲೀಸರ ಆರೋಗ್ಯ ಹಾಳಾಗುತ್ತಿದೆ. ಅಪಾರ ಒತ್ತಡ ಅನುಭವಿಸುವ ನಮ್ಮ ಪೊಲೀಸರು, ಸಾರ್ವಜನಿಕರ ಒಳಿತಿಗಾಗಿ ತಮ್ಮ ಆರೋಗ್ಯವನ್ನು ಬಲಿಕೊಡುತ್ತಿದ್ದಾರೆ. ಹೀಗಾಗಿ, ತಮ್ಮ ಸೇವೆ ಪೂರೈಸಿ ನಿವೃತ್ತರಾಗಬೇಕಾದ ಪೊಲೀಸರು, ಅದಕ್ಕಿಂತ ಮೊದಲೇ ಸ್ವರ್ಗವಾಸಿಗಳಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಇಂಥ ಸನ್ನಿವೇಶದಲ್ಲಿ, ಪೊಲೀಸರು ಸಾರ್ವಜನಿಕರ ಸುರಕ್ಷತೆಗಾಗಿ ತಮ್ಮ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸಮಂಜಸ? ಇದು ಸಮಾಜದ ಹಿತದೃಷ್ಟಿಯಿಂದ ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆಗಳು ಇಲ್ಲಿ ಸೃಷ್ಟಿಯಾಗುತ್ತವೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಕಾನೂನು ಪೊಲೀಸರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ