ಕಾಮಗಾರಿ ವಿಳಂಬ ಸಿಎಂ ಗರಂ !

Kannada News

21-10-2017

ಬೆಂಗಳೂರು: ಕೋರಮಂಗಲದ ಕೆಎಸ್ ಆರ್ ಪಿ ಮೈದಾನದಲ್ಲಿ ನನೆಗುದಿಗೆ ಬಿದ್ದಿರುವ ಪೊಲೀಸ್ ಭವನದ (ಕಲ್ಯಾಣ ಮಂಟಪ) ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು. ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಕಲ್ಯಾಣ ಮಂಟಪದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಡಿಸಿದರು.

ಕಾಮಗಾರಿ 2008ರಲ್ಲೇ ಆರಂಭವಾಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲವೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಕಲ್ಯಾಣ ಮಂಟಪ ನಿರ್ಮಾಣವಾದರೆ 2,500 ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಅನುಕೂಲವಾಗುತ್ತದೆ, ಆದ್ದರಿಂದ ಸ್ಥಗಿತಗೊಂಡಿರುವ ಕಾಮಗಾರಿಯನ್ನು ತಕ್ಷಣ ಆರಂಭಿಸಿ ಬೇಗ ಪೂರ್ಣಗೊಳಿಸಿ ಎಂದು ರಾಜ್ಯ ಸಶಸ್ತ್ರ ಮೀಸಲು ಪಡೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ ರಾವ್ ಅವರಿಗೆ ಸೂಚಿಸಿದರು‌.

ಅನುದಾನ ಲಭ್ಯವಿದ್ದರೂ ಭವನದ ನಿರ್ಮಾಣ ಕಾಮಗಾರಿ  ಕಡೆ ಅಧಿಕಾರಿಗಳು ಗಮನ ಹರಿಸದಿರುವ ಬಗ್ಗೆ ಮುಖ್ಯಮಂತ್ರಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಂದಿನ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿರುವ ಹುತಾತ್ಮ ಪೊಲೀಸರ ಸ್ಮಾರಕಕ್ಕೆ ಶಾಶ್ವತ ಸ್ಥಳ, ಕ್ರೀಡಾಂಗಣ ನಿರ್ಮಾಣ ಕಾಮಗಾರಿಯನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆದೇಶಿಸಿದರು.

ಅದಲ್ಲದೇ ಬೆಂಗಳೂರಿನ ಕೋರಮಂಗಲದಲ್ಲಿರುವ ಮೂರನೇ ಸಶಸ್ತ್ರ ಮೀಸಲು ಪಡೆ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ಕಲ್ಯಾಣ ಕೇಂದ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. ಇದರ ಜೊತೆಗೆ ಪೊಲೀಸ್ ಸಿಬ್ಬಂದಿಗಾಗಿ ಬೆಂಗಳೂರಿನ ಆಡುಗೋಡಿಯಲ್ಲಿ ನಿರ್ಮಾಣವಾಗಲಿರುವ ವಸತಿ ಸಮುಚ್ಛಯಕ್ಕೆ ಶಿಲಾನ್ಯಾಸ ನೆರವೇರಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ