ಮೆಟ್ರೊದಲ್ಲಿ ಹೋಟೆಲ್, ಬೇಕರಿ, ಸಲೂನ್, ಎಟಿಎಮ್…

Kannada News

21-10-2017

ನೀವು ಮೆಟ್ರೊ ರೈಲಿನಲ್ಲಿ ಓಡಾಡುತ್ತಿದ್ದೀರಾ? ಹಾಗಿದ್ದರೆ ಹೊಡೆದಿರಿ ಲಾಟರಿ. ಹೇಗೆ ಅಂದ್ರಾ? ಇನ್ನು ಮುಂದೆ ನೀವು ಮೆಟ್ರೊ ರೈಲು ಇಳಿದ ಮೇಲೆ ನಿಮಗೆ ಬೇಕಾದ ಯಾವುದನ್ನೂ ಹುಡುಕಿಕೊಂಡು ಅಲ್ಲಿ ಇಲ್ಲಿ ತಿರುಗೋಹಾಗೇ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ, ಮೆಟ್ರೊ ಸ್ಟೇಷನ್ ಗಳಲ್ಲೇ ಹೋಟೆಲ್ಗಳು, ಬೇಕರಿ, ದಿನಸಿ ಅಂಗಡಿ, ಸಲೂನ್, ಎಟಿಎಮ್, ಮೆಡಿಕಲ್ ಶಾಪ್ ಇತ್ಯಾದಿಗಳನ್ನು ತೆರೆಯೋ ವ್ಯವಸ್ಥೆ ಮಾಡೋದಕ್ಕೆ ಮೆಟ್ರೊ ರೈಲು ನಿಗಮ ನಿರ್ಧರಿಸಿದೆ.

ಪ್ರಯಾಣಿಕರು ಮೆಟ್ರೊ ರೈಲು ಇಳಿದ ಮೇಲೆ, ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳಲು, ಎಟಿಎಮ್ ನಲ್ಲಿ ಹಣ ಪಡೆಯಲು ಅಥವ ಊಟ ತಿಂಡಿಗಾಗಿ ಮತ್ತಷ್ಟು ದೂರ ನಡೆದುಕೊಂಡು ಹೋಗಬೇಕಾದ ಶ್ರಮ ಮತ್ತು ಅನಾನುಕೂಲಗಳನ್ನು ತಪ್ಪಿಸಲು ಇಂಥ ಜನಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಅಂತ ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲಿಗೆ, ಹೆಚ್ಚಿನ ಪ್ರಯಾಣಿಕರು ಬಳಸುವ 11 ಮೆಟ್ರೊ ನಿಲ್ದಾಣಗಳಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಆಸಕ್ತರಿಂದ ಬಿಡ್ಗಳನ್ನು ಕರೆದಿದೆ.

ಈ ರೀತಿಯಲ್ಲಿ ಆರಂಭಗೊಳ್ಳಲಿರುವ ಅಂಗಡಿಗಳು, ಸೌಲಭ್ಯಗಳು ಮೆಟ್ರೊ ನಿಲ್ದಾಣಗಳ ಹೊರಭಾಗದಲ್ಲಿರಲಿವೆ. ಹೀಗಾಗಿ ಅವುಗಳು, ಮೆಟ್ರೊ ರೈಲು ವೇಳಾ ಪಟ್ಟಿಗೆ ಅನುಸಾರವಾಗಿ ತೆರೆಯುವ ಅಥವ ಮುಚ್ಚುವ ಅಗತ್ಯ ಇರುವುದಿಲ್ಲ ಅನ್ನುವುದು ಮೆಟ್ರೊ ಅಧಿಕಾರಿಗಳ ಹೇಳಿಕೆ.

ಮುಂದಿನ ದಿನಗಳಲ್ಲಿ ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಏನೆಲ್ಲಾ ಸೌಲಭ್ಯ, ಸೌಕರ್ಯಗಳು ಸಿಗುತ್ತವೆ ಎಂಬುದನ್ನು ತಿಳಿಯಲು, ಒಂದು ಮೊಬೈಲ್ ಆಪ್ ಅನ್ನೂ ಒದಗಿಸುವುದಾಗಿ ಮೆಟ್ರೊ ರೈಲು ನಿಗಮ ಹೇಳಿದೆ.

ಒಟ್ಟಿನಲ್ಲಿ, ಮೆಟ್ರೊ ಮೊದಲ ಹಂತ ಪೂರ್ಣ ಆದ ಮೇಲೆ ಪ್ರತಿದಿನ  ಸುಮಾರು 3.5 ಲಕ್ಷ ಜನ ಮೆಟ್ರೊ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಮೆಟ್ರೊ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಏರುತ್ತಿರೋ ಈ ಸಂದರ್ಭದಲ್ಲಿ, ಜನರಿಗೆ ಇನ್ನೊಂದಷ್ಟು ಅನುಕೂಲ ಮಾಡಿಕೊಟ್ಟು, ತಾನೂ ಲಾಭ ಮಾಡಿಕೊಳ್ಳುವ ಚಿಂತನೆ ಬೆಂಗಳೂರು ಮೆಟ್ರೊ ರೈಲು ನಿಗಮದ್ದು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ