ಹುತಾತ್ಮ ಪೊಲೀಸರಿಗೆ ಸಿಎಂ ಗೌರವ..

Kannada News

21-10-2017

ಬೆಂಗಳೂರು: ಕೋರಮಂಗಲದ ಕೆಎಸ್ ಆರ್ ಪಿ ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಭಾಗವಹಿಸಿಕರ್ತವ್ಯ ನಿರ್ವಹಣೆಯ ವೇಳೆ ಹುತಾತ್ಮರಾದ ಪೊಲೀಸರಿಗೆ ಗೌರವ ಸಲ್ಲಿಸಿದರು‌.

ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಅಗತ್ಯ ಸೌಲಭ್ಯ ಒದಗಿಸುವ ಮತ್ತು ಅವರ ಕುಟುಂಬದವರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ. ಆ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ವೇಳೆ  ಮಾತನಾಡಿದ ಮುಖ್ಯಮಂತ್ರಿಗಳು, ಪೊಲೀಸ್ ಸಿಬ್ಬಂದಿಯ ವೇತನ ತಾರತಮ್ಯ ನಿವಾರಣೆ ಕಡೆಗೆ ಸರ್ಕಾರ ಗಮನ ಹರಿಸಿದ್ದು, ಮಧ್ಯಂತರ ಪರಿಹಾರವಾಗಿ ಅನೇಕ ಸವಲತ್ತು ಘೋಷಿಸಿದೆ. ಬಡ್ತಿಯಲ್ಲಿ ಆಗುತ್ತಿದ್ದ ವಿಳಂಬವನ್ನೂ ತಪ್ಪಿಸಿದೆ ಎಂದರು. ಪೊಲೀಸ್ ಸಿಬ್ಬಂದಿಗಾಗಿ ಆರೋಗ್ಯ ಸೇವೆ, ಕ್ಯಾಂಟೀನ್, ಅವರ ಮಕ್ಕಳಿಗೆ ಶಿಕ್ಷಣ, ಮನೆಗಳ ನಿರ್ಮಾಣ ಮತ್ತಿತರ ಕಾರ್ಯಕ್ರಮ ಗಳನ್ನು ಸರ್ಕಾರ ಕೈಗೊಂಡಿದೆ ಎಂದು ತಿಳಿಸಿದರು.

ಕಳೆದ ವರ್ಷ ದೇಶಾದ್ಯಂತ 370 ಪೊಲೀಸರು, ಯೋಧರು ಕರ್ತವ್ಯ ನಿರ್ವಹಣೆಯ ವೇಳೆ ಹುತಾತ್ಮರಾಗಿದ್ದಾರೆ. ರಾಜ್ಯದಲ್ಲಿ 12 ಮಂದಿ ಪ್ರಾಣ ತೆತ್ತಿದ್ದಾರೆ. ಹುತಾತ್ಮರಾದ ಎಲ್ಲರಿಗೂ ರಾಜ್ಯದ ಜನತೆ ಮತ್ತು ಸರ್ಕಾರದ ಪರವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ದುಃಖ ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಯಾವುದೇ ದೇಶ, ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಕಾನೂನು ಸುವ್ಯವಸ್ಥೆ ಉತ್ತಮವಾಗಿರಬೇಕು. ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ, ಪೊಲೀಸರು ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಜೀವ ಒತ್ತೆ ಇಟ್ಟು ಕೆಲಸ ಮಾಡಬೇಕಾಗುತ್ತದೆ. ದೇಶಕ್ಕಾಗಿ ತಮ್ಮ ಪ್ರಾಣ ಮಾಡಿರುವ ಪೊಲೀಸರು, ಯೋಧರು ಸದಾ ಸ್ಮರಣೀಯರು ಎಂದರು.

ಪೊಲೀಸ್ ಸಿಬ್ಬಂದಿ ಕೆಲಸ ಯಾವುದಾದರೂ ಘಟನೆಗೆ ಮುಂಚೆ, ನಂತರವೂ ಇರುತ್ತದೆ. ಪೊಲೀಸ್ ಇಲಾಖೆಯಲ್ಲಿಯೂ ಆಧುನಿಕ ತಂತ್ರಜ್ಞಾನ ಇರಬೇಕು. ಇಲ್ಲದಿದ್ದರೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಪರಾಧ ಕೃತ್ಯಗಳನ್ನು ಎಸಗುವ  ಸಂಘಟಿತ ಅಪರಾಧಿಗಳನ್ನು ಪತ್ತೆ ಹಚ್ಚುವುದು ಕಷ್ಟ. ಅಪರಾಧಿಗಳನ್ನು ಪತ್ತೆ ಮಾಡಿ ಶಿಕ್ಷೆ ಕೊಡಿಸಿದಾಗ ಇಲಾಖೆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ. ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಯಾವುದೇ ಅಪರಾಧ ಪ್ರಕರಣದ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಹೆಚ್ಚು ಸಕ್ರಿಯವಾಗುತ್ತವೆ. ಜೊತೆಗೆ ತನಿಖೆ ಸಂಬಂಧ ಕ್ಷಣ ಕ್ಷಣದ ಮಾಹಿತಿ ಬಯಸುತ್ತವೆ. ಆದರೆ, ಅನೇಕ ಮಾಹಿತಿ ಇದ್ದರೂ ಕೊಡುವುದು ಕಷ್ಟ. ತನಿಖೆ ಹಾದಿ ತಪ್ಪುತ್ತದೆ ಎಂಬುದು ಇದಕ್ಕೆ ಕಾರಣ. ಹೀಗಾಗಿ ಮಾಧ್ಯಮಗಳೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪೊಲೀಸ್ ಸಂಸ್ಮರಣಾ ದಿನಾಚರಣೆಗೆ ಶಾಶ್ವತ ಸ್ಥಳ ಒದಗಿಸಲಾಗುವುದು.ಮುಂದಿನ ವರ್ಷದ ವೇಳೆಗೆ ಕ್ರೀಡಾಂಗಣ  ನಿರ್ಮಾಣ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ