ಗಣಪತಿ ಸಾವು ಪ್ರಕರಣ: ಸಿಬಿಐ ತನಿಖೆ ಆರಂಭ

Kannada News

18-10-2017

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದ ಡಿವೈಎಸ್ಪಿ ಎಂ.ಕೆ ಗಣಪತಿ ನಿಗೂಢ ಸಾವು ಪ್ರಕರಣದ ತನಿಖೆಯನ್ನು, ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ಆರಂಭಿಸಿದೆ. ಈ ಪ್ರಕರಣದ ಎಲ್ಲ ದಾಖಲೆಗಳು ಮತ್ತು ಸಿಐಡಿ ತನಿಖೆಯ ರಿಪೋರ್ಟ್ ಅನ್ನು ನೀಡುವಂತೆ ಸಿಬಿಐ ನಿರ್ದೇಶಕರು ಸಿಐಡಿ ಮುಖ್ಯಸ್ಥ  ಕಿಶೋರ್ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ. ಸಿಬಿಐನ ಚೆನ್ನೈ ಘಟಕದ ಅಧಿಕಾರಿಗಳಿಗೆ ತನಿಖೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನೂ ಹಸ್ತಾಂತರಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ.

ಸಿಬಿಐ ಪತ್ರ ಸ್ವೀಕರಿಸಿರುವ ಸಿಐಡಿ ಡಿಜಿಪಿ ಕಿಶೋರ್ ಚಂದ್ರ, ಒಂದು ವಾರದ ಒಳಗಾಗಿ, ಎಲ್ಲ ಕಡತಗಳು ಮತ್ತು ಸಿಐಡಿ ರಿಪೋರ್ಟ್ ಅನ್ನು ಸಿಬಿಐ ಅಧಿಕಾರಿಗಳಿಗೆ ನೀಡಲಾಗುವುದು ಎಂದು ಮರುಪತ್ರ ಬರೆದು ತಿಳಿಸಿದ್ದಾರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸ್ಥಳೀಯ ಟಿವಿ ಚಾನಲ್ಗೆ ಸಂದರ್ಶನ ನೀಡಿ, ತನ್ನ ಆತ್ಮಹತ್ಯೆಗೆ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ ಮತ್ತು ಎ.ಎಂ.ಪ್ರಸಾದ್ ಕಾರಣ ಎಂದು ಆರೋಪಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ, ಕೆ.ಜೆ ಜಾರ್ಜ್ ಮತ್ತು ಇಬ್ಬರು ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿತ್ತು.

ಸಿಐಡಿ ತನಿಖೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಗಣಪತಿ ಕುಟುಂಬ, ಸಿಬಿಐ ತನಿಖೆಗೆ ಮನವಿ ಸಲ್ಲಿಸಿತ್ತು. ಗಣಪತಿ ಕುಟುಂಬದ ವಾದ ಮನ್ನಿಸಿದ ಸುಪ್ರೀಂಕೋರ್ಟ್ ಕಳೆದ ತಿಂಗಳು, ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.


ಸಂಬಂಧಿತ ಟ್ಯಾಗ್ಗಳು

kannada news karnataka ಎಂ.ಕೆ ಗಣಪತಿ ಡಿವೈಎಸ್ಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ