ಮೌಢ್ಯ ನಿಷೇಧ: ‘ಎಡವಟ್ಟಾದರೆ ಸರ್ಕಾರ ಪತನ’..?

Kannada News

18-10-2017

ಶಿವಮೊಗ್ಗ: ನಮ್ಮ ಸಂಸ್ಕೃತಿ, ಆಚರಣೆಗಳನ್ನ ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಮೌಢ್ಯ ನಿಷೇಧ ಕಾನೂನು ಜಾರಿಗೆ ತರಲಿ, ಆದನ್ನ ಬಿಟ್ಟು ಯಾರನ್ನೂ ಒಲೈಸಲು ಈ ಕಾನೂನಿನಲ್ಲೇನಾದರೂ ಎಡವಟ್ಟು ಮಾಡಿಕೊಂಡರೆ ಇಡೀ ಸರ್ಕಾರ ಪತನವಾಗುವುದು ನಿಶ್ಚಯ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನ ಯಲಹಂಕದ ಬೆಟ್ಟಳ್ಳಿಯಲ್ಲಿ ನಡೆಯುತ್ತಿರುವ ಅಕ್ರಮ ಕಸಾಯಿಖಾನೆಗೆ ನೋಟಿಸ್ ಕೊಡಲು ಹೋದ ಅಧಿಕಾರಿಗಳ ಮೇಲೆ ಮುಸ್ಲಿಂ ಗೂಂಡಾಗಳು ಮುಗಿಬಿದ್ದಿದ್ದಾರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಕೇಳಿದರು.

ಸರಕಾರದ ಈ ಧೋರಣೆಯಿಂದಾಗಿ ಪಾಕಿಸ್ತಾನ ಪರ ಮುಸ್ಲಿಂ ಗೂಂಡಾಗಳಿಗೆ ರಾಜ್ಯ ಸರ್ಕಾರ ಬೆದರಿದೆ ಎಂಬ ಅಭಿಪ್ರಾಯ ಜನರಲ್ಲಿ ಮೂಡಿದ್ದು, ಕೆಲವು ಗೂಂಡಾಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ರಾಮಲಿಂಗಾರೆಡ್ಡಿ ಮೇಲೆ ಸಂಪೂರ್ಣ ಹಿಡಿತ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.

ಪ್ರಾಣಿ ದಯಾಸಂಘದ ಸದಸ್ಯೆ ಟೆಖಿ ನಂದಿನಿ, ಗೋಹತ್ಯೆ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆ ವಿರುದ್ಧ ದೂರು ನೀಡಿದ್ದಕ್ಕೆ ಆಕೆಯ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಈ ಎರಡು ಘಟನೆಗಳೂ ಆತಂಕಕ್ಕೀಡು ಮಾಡಿದ್ದು, ಮಾತನಾಡದ ವಿಚಾರವಾದಿಗಳು ಎಲ್ಲಿದ್ದಾರೆ ಎಂದು ಹುಡುಕಬೇಕಿದೆ ಎಂದು ಕಿಡಿಕಾರಿದರು.

ಗೃಹಸಚಿವರನ್ನುದ್ದೇಶಿಸಿ ರಾಮಲಿಂಗರೆಡ್ಡಿಯವರೇ ನಿಮಗೆ ಮುಸ್ಲಿಂ ಗೂಂಡಾಗಳ ಭಯವೇನಾದರೂ ಇದೆಯಾ..? ಅಕ್ರಮ ಕಸಾಯಿ ಖಾನೆ ತಡೆಯಲು ಏಕೆ ನಿಮ್ಮಿಂದಾಗುತ್ತಿಲ್ಲ, ಅವರಿಗೇನಾದರೂ ಹೆದರಿ ಕೂತಿದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.  ಇನ್ನು ಗೌರಿ ಲಂಕೇಶ್ ಹಂತಕರ ಬಂಧನ ಮರೀಚಿಕೆಯಾಗಿದೆ, ಸುಳಿವೇ ಸಿಗದಂತಾಗಿರುವ ಪ್ರಕರಣವನ್ನು ಸಿಬಿಐಗೆ ನೀಡಿ ಎಂದು ಆಗ್ರಹಿಸಿದರು.


ಸಂಬಂಧಿತ ಟ್ಯಾಗ್ಗಳು

kannada news karnataka ಮೌಢ್ಯ ನಿಷೇಧ ಸರ್ಕಾರ ಪತನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ