ತಪ್ಪಿತು ಗ್ಯಾಂಗ್ ವಾರ್ !

Kannada News

18-10-2017

ದಾವಣಗೆರೆ: ದಾವಣಗೆರೆಯ ಕೆ.ಟಿ.ಜೆ. ನಗರ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ನಗರದ  ಕುಖ್ಯಾತ ರೌಡಿಶೀಟರ್ ಬುಳ್‍ನಾಗನ ಹತ್ಯೆಗೆ ಸಂಚು ರೂಪಿಸಿ, ಹೊಂಚು ಹಾಕಿದ್ದ ಬೆಂಗಳೂರಿನ 7 ಜನ ಸುಪಾರಿ ಹಂತಕರನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಯುವರಾಜ (28), ಹರೀಶ್(19),  ಶರತ್(20), ಮಂಜುನಾಥ್(20), ಹರೀಶ್(19), ಪ್ರಕಾಶ್(19) ಮತ್ತು ಜಯಂತ್ (20) ಎಂದು ಗುರುತಿಸಲಾಗಿದೆ. ಬಂಧಿತರಿಂದ ಲಾಂಗು, ಮಚ್ಚು, ಕಾರದ ಪುಡಿ, ಹಗ್ಗ, 5 ಮೊಬೈಲ್, ಮಾರುತಿ ಒಮಿನಿ ವ್ಯಾನ್ ವಶಪಡಿಸಿಕೊಳ್ಳಲಾಗಿದೆ. 

ಹತ್ಯೆಗೆ ಸಂಚು ರೂಪಿಸಿದ ಈ ತಂಡ ಕಳೆದ ನಾಲ್ಕು ದಿನಗಳ ಹಿಂದೆ ಬೆಂಗಳೂರಿನಿಂದ ದಾವಣಗೆರೆಗೆ ಬಂದು ಠಿಕಾಣಿ ಹೂಡಿತ್ತು. ಇವರೆಲ್ಲಾ ಸೋಮವಾರ ರಾತ್ರಿ ಎಸ್‍ಎಸ್ ಹೈಟೆಕ್ ಆಸ್ಪತ್ರೆಯ ಬಸವರಾಜ್ ಡಾಬಾ ಹಿಂಭಾಗದಲ್ಲಿ ಹತ್ಯೆಗೆ ಹೊಂಚುಹಾಕುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಇದರ ಆಧಾರದ ಮೇಲೆ ಪಿಎಸ್‍ಐ ರಾಜು ಮತ್ತು ಸಿಬ್ಬಂದಿ ದಾಳಿ ನಡೆಸಿ, ಎಲ್ಲ 7 ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದಾಗ ಬುಳ್‍ನಾಗನ ಹತ್ಯೆಗೆ ಸುಪಾರಿ ಪಡೆದಿರುವುದು ಬೆಳಕಿಗೆ ಬಂತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ತಿಳಿಸಿದರು.

ಬುಳ್‍ನಾಗನ ವಿರೋಧಿಗಳಾದ ದಾವಣಗೆರೆಯ ಕುಣುಮ, ಕೃಷ್ಣಪ್ಪ, ಚಿರು, ದಾದಾಪೀರ್, ತಿಲಕ್ ನಾಯ್ಕ್, ಗೋವಿಂದ್ ಎಂಬುವರ ಆದೇಶದಂತೆ ನಗರಕ್ಕೆ ಬಂದು ಬುಳ್‍ನಾಗನನ್ನು ಹತ್ಯೆ ಮಾಡಿ ಆತನ ಬಳಿ ಇರುವ ಹಣವನ್ನು ದೋಚಿಕೊಂಡು ಪರಾರಿಯಾಗುವುದು ಈ ತಂಡದ ಉದ್ದೇಶವಾಗಿತ್ತು. ಆದರೆ ಪೊಲೀಸರ ಸಕಾಲಿಕ ಕ್ರಮದಿಂದ ನಗರದಲ್ಲಿ ನಡೆಯಬೇಕಿದ್ದ ಗ್ಯಾಂಗ್‍ವಾರ್ ತಪ್ಪಿದಂತಾಗಿದೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ